ADVERTISEMENT

ಬಿಳಿಗಿರಿರಂಗನಬೆಟ್ಟ: ‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಚಾಲನೆ

ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:34 IST
Last Updated 7 ಜುಲೈ 2022, 4:34 IST
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ವಿದ್ಯಾರ್ಥಿನಿಯೊಬ್ಬರಿಗೆ ಮುಟ್ಟಿನ ಕಪ್‌ ವಿತರಿಸಿದರು. ಯೋಜನೆಯ ರಾಯಭಾರಿಗಳಾದ ಅಮೃತ ಅಯ್ಯಂಗಾರ್‌, ವೇದಾ ಕೃಷ್ಣಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಇದ್ದರು
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ವಿದ್ಯಾರ್ಥಿನಿಯೊಬ್ಬರಿಗೆ ಮುಟ್ಟಿನ ಕಪ್‌ ವಿತರಿಸಿದರು. ಯೋಜನೆಯ ರಾಯಭಾರಿಗಳಾದ ಅಮೃತ ಅಯ್ಯಂಗಾರ್‌, ವೇದಾ ಕೃಷ್ಣಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಇದ್ದರು   

ಚಾಮರಾಜನಗರ: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದ, ಹದಿಹರೆಯದ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ ( ಮೆನ್‌ಸ್ಟ್ರುವಲ್‌ ಕಪ್‌) ವಿತರಿಸುವ ‘ಮೈತ್ರಿ ಮುಟ್ಟಿನ ಕಪ್‌’ ಯೋಜನೆಗೆ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ಚಾಲನೆ ನೀಡಲಾಯಿತು.

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಯೋಜನೆಯ ರಾಯಭಾರಿಗಳಾದ ಚಿತ್ರ ನಟಿ
ಅಮೃತ ಅಯ್ಯಂಗಾರ್‌ ಹಾಗೂ ಕ್ರಿಕೆಟ್‌ ಪಟು ವೇದಾ ಕೃಷ್ಣಮೂರ್ತಿ ಅವರು ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ ವಿತರಿಸಿದರು.

ಡಾ.ಕೆ.ಸುಧಾಕರ್‌ ಮಾತನಾಡಿ, ‘ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ’ ಎಂದರು.

ADVERTISEMENT

‘ಮಾತೃ ಹೃದಯದ ಬಿಜೆಪಿ ಸರ್ಕಾರವು, ಹೆಣ್ಣು ಮಕ್ಕಳ ಆರೋಗ್ಯದ ವಿಚಾರದಲ್ಲಿ ತಂದೆ– ತಾಯಂದಿರಂತೆ ಯೋಚಿಸಿ ಯೋಜನೆ ಜಾರಿಗೊಳಿಸಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು’ ಎಂದು ಹೇಳಿದರು.

ಸಚಿವ ಸೋಮಣ್ಣ ಮಾತನಾಡಿ, ‘ಋತುಚಕ್ರದ ಅವಧಿಯಲ್ಲಿ ಹೆಣ್ಣುಮಕ್ಕಳು ಅನುಭವಿಸುವ ನೋವನ್ನು ಅರ್ಥ ಮಾಡಿಕೊಂಡು ಸುಧಾಕರ್‌ ಅವರು ಯೋಜನೆ ಜಾರಿಗೊಳಿಸಿದ್ದಾರೆ’ ಎಂದರು.

‘ಮಧ್ಯಪ್ರದೇಶದ ಮಾದರಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಿಸಿದ್ದರು.

ಆರೋಗ್ಯ ಇಲಾಖೆಯು ಎರಡೂ ಜಿಲ್ಲೆಗಳ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ 16ರಿಂದ 18 ವರ್ಷ ವಯಸ್ಸಿನ 10 ಸಾವಿರ ಹೆಣ್ಣುಮಕ್ಕಳಿಗೆ ಪರಿಸರ ಸ್ನೇಹಿಯಾದ, ಮರುಬಳಕೆ ಮಾಡಬಹುದಾದ ಕಪ್‌ ವಿತರಿಸಲಿದೆ. ಕಪ್‌ 8ರಿಂದ 10 ವರ್ಷಗಳ ಕಾಲ ಬಾಳಿಕೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.