ADVERTISEMENT

ಮಾದೇಶ್ವರ ‍ಪವಾಡ ಮಾಡಿದ 77 ಮಲೆಗಳಲ್ಲಿ ಒಂದು ಪ್ರಚಲಿತದಲ್ಲಿಲ್ಲದ ಪಾದದರೆ ಕ್ಷೇತ್ರ

ಕಲ್ಲಿನಲ್ಲಿ ಮೂಡಿದೆ ಮಾದಪ್ಪನ ‍‍ಪಾದದ ಗುರುತು

ಜಿ.ಪ್ರದೀಪ್ ಕುಮಾರ್
Published 21 ಸೆಪ್ಟೆಂಬರ್ 2019, 19:44 IST
Last Updated 21 ಸೆಪ್ಟೆಂಬರ್ 2019, 19:44 IST
ಪಾದದರೆ ಕ್ಷೇತ್ರದಲ್ಲಿರುವ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರು
ಪಾದದರೆ ಕ್ಷೇತ್ರದಲ್ಲಿರುವ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರು   

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿರುವ 77 ಮಲೆಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬಾರದಿರುವ ಕ್ಷೇತ್ರಗಳಲ್ಲಿ ಕೊಂಬುಡಿಕ್ಕಿ ಗ್ರಾಮದಲ್ಲಿರುವ ಪಾದದರೆ ಕ್ಷೇತ್ರವೂ ಒಂದು.

ಮಹದೇಶ್ವರ ಸ್ವಾಮಿಯನ್ನು 77 ಮಲೆಗಳ ಒಡೆಯ ಎಂದೇ ಕರೆಯಲಾಗುತ್ತದೆ. ಮಾದೇಶ್ವರ ನೆಲೆಸಿರುವ ಪ್ರತಿಯೊಂದು ಮಲೆಗೂ ಮೈನವಿರೇಳಿಸುವ ಇತಿಹಾಸವಿದೆ ಎಂದು ಹೇಳುತ್ತಾರೆ ಹಿರಿಯರು. ಎಲ್ಲ 77 ಮಲೆಗಳಲ್ಲೂ ಮಾದೇಶ್ವರ ಪವಾಡ ಮಾಡಿದ್ದರೂ ಪ್ರತಿಯೊಂದು ಮಲೆಯೂ ತನ್ನದೇ ಆದ ಶಕ್ತಿಯನ್ನು ಹೊಂದಿದೆ ಎಂಬುದು ಭಕ್ತರ ದೃಢವಾದ ನಂಬಿಕೆ.

ಭಕ್ತರ ಜಗತ್ತಿಗೆ ಅಷ್ಟಾಗಿ ತೆರೆದುಕೊಳ್ಳದ ಪಾದದರೆ ಕ್ಷೇತ್ರವೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈ ಸ್ಥಳಕ್ಕೆ ಹೋಗಿ ಭಕ್ತಿಯಿಂದ ನಮಿಸಿದರೆ ಸಾಕು, ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ ಎಂಬ ಮಾತು ಇದೆ.

ADVERTISEMENT

ಈ ಸ್ಥಳದಲ್ಲಿ ಮಾದೇಶ್ವರನ ಪಾದದ ಹೆಜ್ಜೆ ಗುರುತು ಇದೆ ಎಂದು ಹೇಳಲಾಗುತ್ತಿದೆ. ಶ್ರವಣನನ್ನು ಸಂಹಾರ ಮಾಡುವ ಸಂದರ್ಭದಲ್ಲಿ ಮಾದೇಶ್ವರ ಸ್ವಾಮಿ ಬಲಗಾಲಿನಿಂದ ನೆಲಕ್ಕೆ ಗಟ್ಟಿಯಾಗಿ ಪಾದವನ್ನು ಒತ್ತಿದ್ದರಿಂದ ಬಂಡೆಯ ಮೇಲೆ ಪಾದದ ಗುರುತು ಮೂಡಿದೆ ಎಂಬ ಪ್ರತೀತಿ ಇದೆ. ಇದೇ ಕಾರಣಕ್ಕೆ ಇಲ್ಲಿಗೆ ಪಾದದರೆ ಎಂಬ ಹೆಸರು ಬಂತು ಎಂದು ಹೇಳುತ್ತಾರೆ ಸ್ಥಳೀಯರು.

ವರ್ಷಕ್ಕೊಮ್ಮೆ ಜಾತ್ರೆ: ‘ಸುಂದರವಾದ ಬೆಟ್ಟಗುಡ್ಡಗಳ ನಡುವೆ ಇರುವ ಈ ಕ್ಷೇತ್ರದಲ್ಲಿ ವರ್ಷಕ್ಕೆ ಒಮ್ಮೆ, ಶ್ರಾವಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಅನ್ನಸಂತರ್ಪಣೆಯೂ ನಡೆಯುತ್ತದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಲ್ಲಿ ಶೇ 90ರಷ್ಟು ಮಂದಿಗೆ ಈ ಸ್ಥಳದ ಪರಿಚಯ ಇಲ್ಲ. ಪರಿಚಯವಾದರೆ, ಇಲ್ಲಿಗೆ ಇನ್ನಷ್ಟು ಹೆಚ್ಚಿನ ಭಕ್ತರು ಬರುತ್ತಾರೆ’ ಎಂದು ಭಕ್ತರಾದ ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲಿದೆ ಕ್ಷೇತ್ರ?

ಪಾದದರೆ ಕ್ಷೇತ್ರವು ಮಹದೇಶ್ವರ ಬೆಟ್ಟದಿಂದ 16 ಕಿ.ಮೀ ದೂರದಲ್ಲಿದೆ. ಕತ್ರಿಬೆಟ್ಟ ಮತ್ತು ಕೊಂಬುಡಿಕ್ಕಿ ಗ್ರಾಮಗಳ ನಡುವೆ ಈ ಕ್ಷೇತ್ರ ಇದೆ. ಕೊಂಬುಡಿಕ್ಕಿಯಿಂದ ಪಾಲಾರ್‌ ಕಡೆಗೆ ಹೋಗುವ ದಾರಿಯಲ್ಲಿ 11 ಕಿ.ಮೀ ಸಾಗಿದರೆ ಕ್ಷೇತ್ರ ಸಿಗುತ್ತದೆ. ದಟ್ಟ ಅರಣ್ಯ ಪ್ರದೇಶದಲ್ಲಿ ಈ ಸ್ಥಳ ಇದೆ. ಬೆಟ್ಟದಿಂದ ಕೊಂಬುಡಿಕ್ಕಿವರೆಗೆ ರಸ್ತೆ ಇದೆ. ಅಲ್ಲಿಂದ ಕಾಡಿನಲ್ಲಿ ಕಾಲುದಾರಿಯಲ್ಲೇ ಸಾಗಬೇಕು.

ವರ್ಷಕ್ಕೊಮ್ಮೆ ಜಾತ್ರೆ ನಡೆಯುವುದರಿಂದ ಹಾಗೂ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.