ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಚಿನ್ನದ ತೇರಿನ ಉತ್ಸವದ ಹರಕೆ ಇನ್ನು ₹500 ತುಟ್ಟಿ

ರಥೋತ್ಸವದ ದರ ₹2,501ರಿಂದ ₹3,001ಕ್ಕೆ ಏರಿಕೆ, ಇತರ ಸೇವೆಗಳ ದರವೂ ಹೆಚ್ಚಳ, ಶುಕ್ರವಾರದಿಂದಲೇ ಜಾರಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 11:59 IST
Last Updated 25 ಡಿಸೆಂಬರ್ 2020, 11:59 IST
ಬೆಟ್ಟದಲ್ಲಿ ಪ್ರತಿದಿನ ನಡೆಯುವ ಚಿನ್ನದ ರಥೋತ್ಸವದಲ್ಲಿ ನೂರಾರು ಮಂದಿ ಭಾಗಿಯಾಗುತ್ತಾರೆ
ಬೆಟ್ಟದಲ್ಲಿ ಪ್ರತಿದಿನ ನಡೆಯುವ ಚಿನ್ನದ ರಥೋತ್ಸವದಲ್ಲಿ ನೂರಾರು ಮಂದಿ ಭಾಗಿಯಾಗುತ್ತಾರೆ   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ದಿನ ರಾತ್ರಿ ನಡೆಯುವ ಚಿನ್ನದ ರಥದ ಉತ್ಸವದ ದರವನ್ನು ಪರಿಷ್ಕರಿಸಲಾಗಿದೆ. ಒಂದು ಟಿಕೆಟ್‌ ದರವನ್ನು ₹500 ಹೆಚ್ಚಿಸಲಾಗಿದೆ.

ಇದುವರೆಗೂ ರಥೋತ್ಸವದ ಶುಲ್ಕ ₹2,501 ಇತ್ತು. ಅದನ್ನೀಗ ₹3,001ಕ್ಕೆ ನಿಗದಿ ಮಾಡಲಾಗಿದೆ. ಹೊಸ ದರ ಶುಕ್ರವಾರದಿಂದಲೇ (ಡಿ.25) ಜಾರಿಗೆ ಬಂದಿದೆ. ಈ ಸಂಬಂಧ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಪ್ರತಿ ದಿನ ರಾತ್ರಿ ಏಳು ಗಂಟೆಗೆ ಚಿನ್ನದ ರಥೋತ್ಸವ ನಡೆಯುತ್ತದೆ. ಚಿನ್ನದ ತೇರಿನ ಉತ್ಸವದ ಹರಕೆ ಹೊತ್ತ ಭಕ್ತರು, ನಿಗದಿತ ಶುಲ್ಕ ಪಾವತಿಸಿ ಟಿಕೆಟ್ ಪಡೆಯುತ್ತಾರೆ. ಚಿನ್ನದ ತೇರನ್ನು ದೇವಸ್ಥಾನಕ್ಕೆ ಒಂದು ಸುತ್ತು ತರಲಾಗುತ್ತದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಪ್ರತಿ ದಿನ ರಾತ್ರಿ ನೂರಾರು ಭಕ್ತರು ಸೇರುತ್ತಾರೆ.

ADVERTISEMENT

ಇತ್ತೀಚೆಗಷ್ಟೇ ಪ್ರಾಧಿಕಾರವು ಲಾಡು ಪ್ರಸಾದದ ಮಾರಾಟ ಬೆಲೆಯನ್ನು ₹5 ಹೆಚ್ಚಿಸಿತ್ತು.

ಎಲ್ಲ ಸೇವೆಗಳ ದರ ಹೆಚ್ಚಳ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಟ್ಟದಲ್ಲಿ ನವೆಂಬರ್‌ 25ರಂದು ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ ರಥೋತ್ಸವದ ಶುಲ್ಕ ಪರಿಷ್ಕರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಚಿನ್ನದ ತೇರು ಮಾತ್ರವಲ್ಲದೇ, ಇತರ ತೇರು ಸೇವೆಗಳ (ಬಸವ ವಾಹನ, ರುದ್ರಾಕ್ಷಿ ವಾಹನ) ದರಗಳನ್ನು ಶೇ 30–35ರಷ್ಟು ಹೆಚ್ಚಿಸಲಾಗಿದೆ. ಮಿಶ್ರ ಪ್ರಸಾದದ ಬೆಲೆ ₹100ರಿಂದ ₹125ಕ್ಕೆ ಏರಿದೆ. ಬೆಟ್ಟದ ಪ್ರವೇಶ ಶುಲ್ಕದರವನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐದೂವರೆ ವರ್ಷಗಳಿಂದ ಚಿನ್ನದ ತೇರು ಹಾಗೂ ಇತರ ಸೇವೆಗಳ ದರವನ್ನು ಪರಿಷ್ಕರಿಸಿರಲಿಲ್ಲ. ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸುವುದಕ್ಕೆ ಅವಕಾಶ ಇದೆ. ಚಿನ್ನದ ತೇರು ಹಾಗೂ ಇತರ ಉತ್ಸವಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ದರ ಪರಿಷ್ಕರಿಸಲಾಗಿದೆ. ಶುಕ್ರವಾರದಿಂದಲೇ ಇದು ಜಾರಿಗೆ ಬಂದಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.