ADVERTISEMENT

ಶಿವರಾತ್ರಿ ಸಂಭ್ರಮ: ಮಲೆ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ

ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಭಕ್ತರ ಜಾಗರಣೆ : ಅನುರಣಿಸಿದ ದೇವನಾಮ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 2:15 IST
Last Updated 16 ಫೆಬ್ರುವರಿ 2026, 2:15 IST
ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಭಾನುವಾರ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ
ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಭಾನುವಾರ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ   

ಮಹದೇಶ್ವರಬೆಟ್ಟ: ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹದೇಶ್ವರ ಸ್ವಾಮಿಯ ದೇವಾಲಯದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನೆರವೇರಿತು. ಕ್ಷೇತ್ರಕ್ಕೆ ಭೇಟಿ ನೀಡಿದ್ದ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು
ಪುನೀತರಾದರು.

ಭಾನುವಾರ ಬೆಳಗಿನ ಜಾವ ಬೇಡಗಂಪಣ ಸಮುದಾಯದ ವಿಧಿವಿಧಾನಗಳಂತೆ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಬಳಿಕ ಮಹಾ ಮಂಗಳಾರತಿ, ಬಿಲ್ವಾರ್ಚನೆ, ಮಹಾರುಧ್ರಾಭಿಷೇಕ ಸೇವೆಗಳು ನಡೆದವು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಧರ್ಮ ದರ್ಶನದ ಜೊತೆಗೆ ನಗದು ಪಾವತಿಸಿ ವಿಶೇಷ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. 

ದೇವಾಲಯಕ್ಕೆ ಹರಿದುಬಂದಿದ್ದ ಭಕ್ತರು ಭಕ್ತಿಯಿಂದ ಹರಕೆ ಸಲ್ಲಿಸಿದರು. ಕ್ಷೇತ್ರದ ಪ್ರಾಂಗಣದಲ್ಲಿ ಉರುಳು ಸೇವೆ, ಪಂಜಿನ ಸೇವೆ,
ಧೂಪದ ಸೇವೆ, ರುದ್ರಾಕ್ಷಿ ಮಂಟಪ ಸೇವೆ, ಬಸವ ವಾಹನ ಸೇವೆ, ಹುಲಿವಾಹನ ಸೇವೆ, ಬೆಳ್ಳಿ ರಥೊತ್ಸವ ಹಾಗೂ ಚಿನ್ನದ ರತೋತ್ಸವ ಸೇವೆಗಳಲ್ಲಿ ಭಕ್ತರು ಭಾಗವಹಿಸಿದರು.‌ ಶಿವರಾತ್ರಿ ಪ್ರಯುಕ್ತ ದೇವಾಲಯದ ಗರ್ಭಗುಡಿಯನ್ನು ಸುಂದರವಾಗಿ
ಅಲಂಕರಿಸಲಾಗಿತ್ತು. 

ADVERTISEMENT

ಸೇಬು, ದ್ರಾಕ್ಷಿ, ದಾಳಿಂಬೆ, ಮೋಸಂಬಿ, ಕಿತ್ತಳೆ ಸಹಿತ ಹಲವು ಬಗೆಯ ಹಣ್ಣುಗಳು, ಚೆಂಡು ಹೂವು, ಬಣ್ಣ ಬಣ್ಣದ ಸೇವಂತಿಗೆ, ಸುಗಂಧರಾಜ, ದುಂಡು ಮಲ್ಲಿಗೆ, ಕನಕಾಂಬರ ಸಹಿತ ಅಲಂಕಾರಿಕ ಹೂವುಗಳು, ಬಗೆಬಗೆಯ ತರಕಾರಿಗಳನ್ನು ಒಪ್ಪ ಓರಣವಾಗಿ ಮಾಲೆ ಮಾಡಿ ಗರ್ಭಗುಡಿಗೆ ತೋರಣ ಕಟ್ಟಲಾಗಿತ್ತು.

ಹಲವು ಬಗೆಯ ಹೂಗಳಿಂದ ದೇವರನ್ನು ಸಿಂಗರಿಸಲಾಗಿತ್ತು.

ಜಾಗರಣೆ: ಈಶ್ವರನ ದಿವ್ಯ ಸಾನಿಧ್ಯ ಇರುವ ಮಲೆ ಮಹದೇಶ್ವರನ ಬೆಟ್ಟದಲ್ಲಿ ಶಿವರಾತ್ರಿಯ ದಿನ ಜಾಗರಣೆ ಮಾಡುವುದು ಶ್ರೇಷ್ಠ ಎಂಬ ನಂಬಿಕೆ ಭಕ್ತರಲ್ಲಿ ಅಚಲವಾಗಿರುವುದರಿಂದ ನಾಡಿನ ಹಲವೆಡೆಗಳಿಂದ ಬಂದಿದ್ದ ಅಪಾರ ಭಕ್ತರು ದೇಗುಲದ ಪ್ರಾಂಗಣದಲ್ಲಿ ಜಾಗರಣೆ ಮಾಡುವ ಮೂಲಕ ಮಾದಪ್ಪನ ನಾಮ ಸ್ಮರಣೆ ಮಾಡಿದರು.

ಬೆಳ್ಳಿ ಉತ್ಸವ ಮೂರ್ತಿ ಕಾಣಿಕೆ: ಪವಾಡ ಪುರುಷ ಎಂದು ಕರೆಸಿಕೊಳ್ಳುತ್ತಿರುವ ಮಾದೇಶ್ವರ ಸ್ವಾಮಿಗೆ ನಾಡಿನಾದ್ಯಂತ ಅಪಾರ
ಭಕ್ತ ಸಮೂಹ ಇದೆ. ದಕ್ಷಿಣ ಭಾರತದ ಗಡಿನಾಡಿನ ಪ್ರಸಿದ್ಧ ದಾರ್ಮಿಕ ಯಾತ್ರಾ ಸ್ಥಳವಾದ ಮಾದಪ್ಪನ ಬೆಟ್ಟಕ್ಕೆ ಒಮ್ಮೆ ಭೇಟಿನೀಡಿದರೆ ಕಷ್ಟಗಳು ತೀರುತ್ತವೆ ಎಂಬ ಅಚಲವಾದ
ನಂಬಿಕೆ ಇದೆ.

ಇಷ್ಟಾರ್ಥಗಳು ಸಿದ್ಧಿಸಿದ ಬಳಿಕ ತಪ್ಪದೆ ಹರಕೆಯನ್ನೂ ಸಲ್ಲಿಸಲಾಗುತ್ತದೆ. ಅದರಂತೆ ಚಾಮರಾಜನಗರದ ಗಾಳಿಪುರ ನಿವಾಸಿ ಮಹದೇವ್ ಎಂಬುವರು 5 ಕೆಜಿ 967 ಗ್ರಾಂ ಬೆಳ್ಳಿಯ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕಾಣಿಕೆ ನೀಡಿ
ಹರಕೆ ಸಲ್ಲಿಸಿದರು.

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ಸಾಲೂರು ಬೃಹನ್ಮಠಕ್ಕೆ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು

ಉತ್ಸವ ಮೂರ್ತಿಯ ಮೆರವಣಿಗೆ

ಶಿವರಾತ್ರಿಯ ಮೊದಲ ದಿನ ಗರ್ಭಗುಡಿಯಲ್ಲಿ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಶ್ರೀಗಳ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಏಕವಾರು ರುದ್ರಾಭಿಷೇಕ ಬಿಲ್ವಾರ್ಚನೆ ಪಂಚಾಮೃತ ಅಭಿಷೇಕ ಮಾಡಿದರು. ದೇವರಿಗೆ ಕಿರೀಟಧಾರಣೆ ನಡೆಯಿತು. ರಥೋತ್ಸವದ ಪೂರ್ವಭಾವಿಯಾಗಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಉಮಾ ಮಹೇಶ್ವರನ ಉತ್ಸವ ಮೂರ್ತಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿ ದೇವಾಲಯದ ಹೊರ ಆವರಣದಲ್ಲಿ ಪ್ರದಕ್ಷಿಣೆ ಹಾಕಿಸಿ ಬಳಿಕ ಮಂಗಳವಾದ್ಯಗಳ ಸಮೇತ ಸಾಲೂರು ಮಠಕ್ಕೆ ಮಠಕ್ಕೆ ತರಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.