ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಮಾರ್ಗಶಿರ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ವಿವಿಧೆಡೆ, ನೆರೆ ರಾಜ್ಯಗಳಿಂದ ಸಾವಿರಾರು ಭಕ್ತರು ಬಂದಿದ್ದರು.
ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ಬಸವ ವಾಹನ, ಹುಲಿವಾಹನ. ರುದ್ರಾಕ್ಷಿ ಮಂಟಪ, ಉರುಳು ಸೇವೆ, ಪಂಜಿನ ಸೇವೆ, ಬೆಳ್ಳಿ – ಚಿನ್ನದ ರಥೋತ್ಸವ ಮುಂತಾದ ಸೇವೆಗಳಲ್ಲಿ ಭಾಗವಹಿಸಿದರು.
ಮಾದೇಶ್ವರ ಸ್ವಾಮಿ ಮೂರ್ತಿಯನ್ನು ಅರ್ಚಕರು ಫಲ ಪುಷ್ಪಗಳಿಂದ ಸಿಂಗರಿಸಿ, ಗಂಧಾಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ, ಮಹಾಮಂಗಳಾರತಿಯನ್ನು ನೆರವೇರಿಸಿದದರು. ಭಕ್ತರಿಗೆ ಸರದಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಅನ್ನ ದಾಸೋಹದ ವ್ಯವಸ್ಥೆ ಇತ್ತು.
ಮಳೆ–ಸಂಚಾರ ಸ್ಥಗಿತ: ಎಡೆಬಿಡದೆ ಸುರಿಯುತಿದ್ದ ಮಂಜು ಮುಸುಕಿದ ಮಳೆಯಿಂದಾಗಿ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯೆ ಇರುವ ತಿರುವಿನಲ್ಲಿ ಬಸ್ಸುಗಳು ಸಿಲುಕಿ ಕೆಲ ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು. ದ್ವಿಚಕ್ರ ಹಾಗೂ ಲಘು ವಾಹನ ಪ್ರಯಾಣಿಕರು ಸಂಚರಿಸಲು ಹರ ಸಾಹಸ ಪಟ್ಟರು. ಮಹದೇಶ್ವರ ಬೆಟ್ಟಕ್ಕೆ ವಿಷೇಶ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬರುವುದರಿಂದ ಸುಗಮ ಸಂಚಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೆಕು ಎಂದು ಭಕ್ತರು ‘ಪ್ರಜಾವಾಣಿ‘ಗೆ ತಿಳಿಸಿದರು.
ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಕೋಟಿ ಕೋಟಿ ಹಣ ಭಕ್ತರಿಂದ ಬರುತ್ತಿದ್ದರೂ ಮೂಲ ಸೌಕರ್ಯಗಳು ಮರೀಚಿಕೆಯಾಗಿಯೇ ಉಳಿದಿರುವುದು ಭಕ್ತರಲ್ಲಿ ಅಸಮದಾನವನ್ನು ಉಂಟುಮಾಡಿದೆ. ಬೆಂಗಳೂರಿನಿಂದ ದೇವಾಲಯಕ್ಕೆ ಬಂದಿದ್ದ ರಂಗಸ್ವಾಮಿ ಸಂಗಡಿಗರು ಮಾತನಾಡಿ ‘ಮಳೆಗಾಲದಲ್ಲಿ ಇಲ್ಲಿ ಕೂರಲು ಹಾಗೂ ನಿಲ್ಲಲ್ಲು ಸೌಲಭ್ಯ ಕಲ್ಪಿಸಿಲ್ಲ. ಹೆಂಗಸರು ಮಕ್ಕಳು ಮಳೆಯಲ್ಲಿಯೇ ನಿಂತು ದರ್ಶನವನ್ನು ಪಡೆಯುವಂತಾಯಿತು. ನಿನ್ನೆರಾತ್ರಿಯಿಂದ ಕರೆಂಟ್ ಇಲ್ಲದೆಕೆಲ ಶೌಚಾಲಯಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ನಮ್ಮಂಥ ಭಕ್ತರ ಪಾಡು ಮಾದಪ್ಪನೇ ಬಲ್ಲ ಎಂಬಂತಾಗಿತ್ತು. ಅಧಿಕಾರಿಗಳು ಸೌಕರ್ಯ ಕಲ್ಪಿಸಬೇಕು. ದೇವಾಲಯದ ಸುತ್ತ ಮಳೆ ಹಾಗೂ ಬಿಸಿಲಿಗೆ ಸಾಶ್ವತವಾಗಿ ನೆರಳು ಚಾವಣಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.