ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಸ್ವಚ್ಛವಾಯ್ತು ಮಾದಪ್ಪನ ಕಲ್ಯಾಣಿ ಕೊಳ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 2:56 IST
Last Updated 4 ಜನವರಿ 2026, 2:56 IST
ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಕಲ್ಯಾಣಿ ಕೊಳವನ್ನು ಶನಿವಾರ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಶುಚಿಗೊಳಿಸಿರುವುದು
ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಕಲ್ಯಾಣಿ ಕೊಳವನ್ನು ಶನಿವಾರ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಶುಚಿಗೊಳಿಸಿರುವುದು   

ಮಹದೇಶ್ವರ ಬೆಟ್ಟ: ಹನೂರು ತಾಲ್ಲೂಕಿನಲ್ಲಿರುವ ಪ್ರಸಿದ್ದ ದಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಕಲ್ಯಾಣಿ ಕೊಳವನ್ನು ಶನಿವಾರ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಶುಚಿಗೊಳಿಸಿದರು.

ಪಾಚಿಗಟ್ಟಿದ್ದ ಕಲ್ಯಾಣಿ ಕೊಳದೊಳಗೆ ಸ್ನಾನ ಮಾಡಲು ಬರುವ ಭಕ್ತರು ‌ಕಾಲು ಜಾರಿ ಬಿದ್ದು ಗಂಭೀರವಾಗಿ ಪೆಟ್ಟು ಮಾಡಿಕೊಳ್ಳುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ‘ಪಾಚಿಗಟ್ಟಿದ ಕಲ್ಯಾಣಿ ಭಕ್ತರಿಗೆ ಆಪತ್ತು’ ಎಂಬ ಶೀರ್ಷಿಕೆಯಡಿ ಶನಿವಾರ ಸುದ್ದಿ ಪ್ರಕಟವಾಗಿತ್ತು.

ಶುಕ್ರವಾರ ಕೆ.ಆರ್ ನಗರದ ಭಕ್ತ ವಿಜಯ್ ಸ್ನಾನ ಮಾಡಲು ಹೋಗಿ ಕಾಲುಜಾರಿ ಬಿದ್ದು ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿರುವುದು ಹಾಗೂ ಕೊಳದಲ್ಲಿರುವ ನೀರು ಸ್ನಾನಕ್ಕೆ ಬಳಸಲು ಯೋಗ್ಯವಾಗಿರದ ಬಗ್ಗೆ ಗಮನ ಸೆಳೆದಿತ್ತು. 

ADVERTISEMENT

ಸುದ್ದಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರಾಧಿಕಾರ ಭಕ್ತರ ಮನವಿಯಂತೆ ಕಲ್ಯಾಣಿ ಕೊಳವನ್ನು ಶುಚಿಗೊಳಿಸುವ ಕಾರ್ಯ ಆರಂಭಿಸಿತು. ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಮಾರ್ಗದರ್ಶನದಲ್ಲಿ ಪ್ರಾಧಿಕಾರದ ನೌಕರರು ಪಾಚಿ ತೆಗೆದು ಕೊಳದಲ್ಲಿನ ನೀರು ಸ್ವಚ್ಛಗೊಳಿಸಿದರು.

ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆಯುತ್ತಾರೆ. ಹೀಗೆ ಬಂದವರು ಹರಕೆ ಮುಡಿ ಕೊಟ್ಟ ಬಳಿಕ ಕಲ್ಯಾಣಿ ಕೊಳದಲ್ಲಿ ಮಿಂದು ಶುಚಿಯಾಗುತ್ತಾರೆ. ಕಲ್ಯಾಣಿಯ ಮೆಟ್ಟಿಲುಗಳು ಪಾಚಿಗಟ್ಟಿದರೆ, ಭಕ್ತರು ಜಾರಿಬಿದ್ದು ತಲೆಗೆ ಗಂಭೀರ ಪೆಟ್ಟಾಗಿ ಪ್ರಾಣ ಹೋಗುವ ಅಪಾಯ ಇರುತ್ತದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ನಿಯಮಿತವಾಗಿ ಕಲ್ಯಾಣಿ ಕೊಳ ಶುಚಿಗೊಳಿಸಬೇಕು.

‘ಪಾಚಿ ಕಟ್ಟದಂತೆ ಎಚ್ಚರ ವಹಿಸಬೇಕು, ಕೊಳದಲ್ಲಿರುವ ನೀರು ಹರಿಯದೆ ಪರಿಣಾಮ ಬಹುಬೇಗ ಕೆಡುವುದರಿಂದ ಕಾಲಕಾಲಕ್ಕೆ ಅಶುದ್ಧ ನೀರು ಹೊರಬಿಟ್ಟು ಹೊಸದಾಗಿ ನೀರು ತುಂಬಿಸಬೇಕು. ಇದರಿಂದ ಸಾಂಕ್ರಮಿಕ ರೋಗಗಳು ಹರಡುವಿಕೆಯನ್ನು ನಿಯಂತ್ರಿಸಬಹುದು’ ಎಂದು ಭಕ್ತ ವಿಜಯ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.