ADVERTISEMENT

ಬಂಡೀಪುರ: ಹುಲಿ ದಾಳಿಗೆ ಗ್ರಾಮದೇವತೆ ಮುನಿಸು ಕಾರಣ!

ಚೌಡಹಳ್ಳಿ ಗ್ರಾಮಸ್ಥರ ಬಲವಾದ ನಂಬಿಕೆ–ಇಂದು ಪೂಜೆಗೆ ಸಿದ್ಧತೆ

ಮಲ್ಲೇಶ ಎಂ.
Published 14 ಅಕ್ಟೋಬರ್ 2019, 20:00 IST
Last Updated 14 ಅಕ್ಟೋಬರ್ 2019, 20:00 IST
ಚೌಡಹಳ್ಳಿ ಗ್ರಾಮದಲ್ಲಿರುವ ಮಾಳಿಗಮ್ಮನ ಗುಡಿ
ಚೌಡಹಳ್ಳಿ ಗ್ರಾಮದಲ್ಲಿರುವ ಮಾಳಿಗಮ್ಮನ ಗುಡಿ   

ಗುಂಡ್ಲುಪೇಟೆ: ಚೌಡಹಳ್ಳಿ–ಹುಂಡೀಪುರದಲ್ಲಿ ಇಬ್ಬರು ರೈತರು ಹಾಗೂ ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಕೊಲ್ಲಲು ಗ್ರಾಮ ದೇವತೆ ಮಾಳಿಗಮ್ಮನ ಮುನಿಸೇ ಕಾರಣ ಎಂದು ಸ್ಥಳೀಯರು ಬಲವಾಗಿ ನಂಬಿದ್ದಾರೆ.

ಹುಲಿ ದಾಳಿ ನಡೆಸಿದ ಪ್ರದೇಶದಲ್ಲೇ ಮಾಳಿಗಮ್ಮನ ಗುಡಿ ಇದೆ. ಗ್ರಾಮಸ್ಥರ ನಡುವೆ ಉಂಟಾದ ಮನಸ್ತಾಪದಿಂದಾಗಿ ನಾಲ್ಕು ವರ್ಷಗಳಿಂದ ಗುಡಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿಲ್ಲ.

ಹುಲಿ ಸೆರೆ ಹಿಡಿದ ನಂತರ ಗ್ರಾಮಸ್ಥರು ಮಾಳಿಗಮ್ಮನ ಗುಡಿಯಲ್ಲಿ ಮತ್ತೆ ಪೂಜೆ ಆರಂಭಿಸಲು ನಿರ್ಧರಿಸಿದ್ದು, ಮಂಗಳವಾರ ಪೂಜೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅರಣ್ಯ ಅಧಿಕಾರಿಗಳಿಗೂ ಆಹ್ವಾನ ನೀಡಿದ್ದಾರೆ. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಕೂಡ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಹುಲಿ ಸೆರೆ ಸಿಕ್ಕರೆ ಮಾಳಿಗಮ್ಮನಿಗೆ ಪೂಜೆ ಸಲ್ಲಿಸಬೇಕು ಎಂಬ ನಿರ್ಣಯವನ್ನು ಚೌಡಹಳ್ಳಿ ಗ್ರಾಮಸ್ಥರು ತೆಗೆದುಕೊಂಡಿದ್ದರು. ಅದರಂತೆ ಹುಲಿಯನ್ನು ಸೆರೆ ಹಿಡಿದ ಮರು ದಿನವೇ ಗುಡಿಯಲ್ಲಿ ಪೂಜೆ ಸಲ್ಲಿಸಲು ಅವರು ನಿರ್ಧರಿಸಿದ್ದಾರೆ.

ಸಪ್ತದೇವತೆಗಳಲ್ಲಿ ಒಂದು: ಕಬ್ಬೇಪುರ ಮತ್ತು ಚೌಡಹಳ್ಳಿ ನಡುವಿನ ಗುಡಿಯಲ್ಲಿ ನೆಲೆಸಿರುವ ಮಾಳಿಗಮ್ಮ ಸಪ್ತ ದೇವತೆಗಳಲ್ಲಿ ಒಂದು ಎಂದು ಹೇಳುತ್ತಾರೆ ಗ್ರಾಮ‌ಸ್ಥರು.

ತಾಲ್ಲೂಕಿನ‌ ಹಸಗೂಲಿ ಮಾರಮ್ಮ, ಕೆಬ್ಬೆಕಟ್ಟೆ ಹುಲಿಯಮ್ಮ, ಕಾಳಮ್ಮ, ಗುರುಜಮ್ಮ, ಮಂಗಲದ ಮಾರಮ್ಮ, ಕೆಬ್ಬೇಪುರದ ಮಾರಮ್ಮ ಮತ್ತು ಮಾಳಿಗಮ್ಮ ಸಹೋದರಿಯರು. ಮಾಳಿಗಮ್ಮನ ಜಾತ್ರೆ ಬಿಟ್ಟು ಉಳಿದೆಲ್ಲ ದೇವತೆಯರ ಜಾತ್ರೆಗಳು ಪ್ರತಿ ವರ್ಷ ನಡೆಯುತ್ತಿದೆ.

ಮಾಳಿಗಮ್ಮನ ಜಾತ್ರೆ ನಡೆಯದೆ, ದೇವಿಗೆ ಪೂಜೆ ನಡೆಯದಿರುವುದರಿಂದ ಆಕೆ ಮುನಿಸಿಕೊಂಡಿದ್ದಾಳೆ ಎಂಬುದು ಗ್ರಾಮದ ಕೆಲವರ ನಂಬಿಕೆ.

ನಾಲ್ಕು ವರ್ಷಗಳಿಂದ ನಡೆಯದ ಜಾತ್ರೆ:ಈ ಹಿಂದೆ ಕೆಬ್ಬೇಪುರ, ಬೆಳವಾಡಿ, ಹುಂಡೀಪುರ, ಶೆಟ್ಟಹಳ್ಳಿ ಸೇರಿದಂತೆ 7 ಗ್ರಾಮಗಳ ಜನರು ಸೇರಿ ಜಾತ್ರೆ ನಡೆಸುತ್ತಿದ್ದರು. ದೇಗುಲ ನವೀಕರಣ ವಿಚಾರದಲ್ಲಿ ಮನಸ್ತಾಪ ಬಂದಿದ್ದರಿಂದ ನಾಲ್ಕು ವರ್ಷಗಳಿಂದ ಜಾತ್ರೆ ನಿಂತಿತ್ತು.

‘ದೇವರ ಅನುಗ್ರಹ ಇಲ್ಲದೆ ಏನು ನಡೆಯುತ್ತಿಲ್ಲ. ನಮ್ಮ ಗ್ರಾಮದಲ್ಲಿ ಇಂತಹ ಘಟನೆಗಳು (ಹುಲಿ ದಾಳಿ) ಯಾವತ್ತೂ ನಡೆದಿರಲಿಲ್ಲ. ದೇವಸ್ಥಾನಕ್ಕೆ ಬಾಗಿಲು ಹಾಕಿದಾಗಿನಿಂದ ಕಷ್ಟ ಬರುತ್ತಿದೆ. ಆದ್ದರಿಂದ ಗ್ರಾಮಸ್ಥರು ಸೇರಿ ದೇವಿಗೆ ಪೂಜೆ ಮಾಡಲು ನಿರ್ದರಿಸಿದ್ದೇವೆ. ಇದರಲ್ಲಿ ಭಾಗಿಯಾಗುವಂತೆ ಅರಣ್ಯ ಇಲಾಖೆಯವನ್ನು ಕೋರಿದ್ದೇವೆ’ ಎಂದು ಗ್ರಾಮದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.