ADVERTISEMENT

ಜಗಳವಾಡಿದವರ ಜಮೀನಿನಲ್ಲಿ ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 15:51 IST
Last Updated 3 ಏಪ್ರಿಲ್ 2021, 15:51 IST
ಮಹದೇವಪ್ಪ
ಮಹದೇವಪ್ಪ   

ಚಾಮರಾಜನಗರ: ಬಾಳೆಕಾಯಿ ವ್ಯಾಪಾರದ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಿಂದಾಗಿ ತಾಲ್ಲೂಕಿನ ಕೆಲ್ಲಂಬಳ್ಳಿ ಬಸವನಪುರ ಗ್ರಾಮದ ನಿವಾಸಿ ಮಹದೇವಪ್ಪ (60) ಅವರು ಅದೇ ಗ್ರಾಮದ ಸುಂದ್ರಪ್ಪ ಎಂಬುವವರ ಜಮೀನಿನಲ್ಲಿ ನೇಣುಹಾಕಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವ್ಯಾಪಾರದ ಹಣ ನೀಡುವುದಕ್ಕೆ ಸಂಬಂಧಿಸಿದಂತೆ ಮಹದೇವಪ್ಪ ಹಾಗೂ ಸುಂದ್ರಪ್ಪ ಮತ್ತು ಅವರ ಮಗ ಚೇತನ್ ನಡುವೆ ಜಗಳ ಆಗಿತ್ತು.

‘ಇದರಿಂದ ಮನನೊಂದು ಮಹದೇವಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸುಂದ್ರಪ್ಪ ಹಾಗೂ ಚೇತನ್‌ ಅವರೇ ಕಾರಣ’ ಎಂದು ಮಹದೇವಪ್ಪ ಅವರ ಮಗ ದೂರು ನೀಡಿದ್ದಾರೆ’ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ‘ಪ್ರಜಾವಾಣಿ’ ತಿಳಿಸಿದ್ದಾರೆ.

ADVERTISEMENT

ಘಟನೆಯ ವಿವರ: ಮಹದೇವಪ್ಪ ಅವರು ಒಂದೂವರೆ ಟನ್‌ ಬಾಳೆಯನ್ನು ಸುಂದ್ರಪ್ಪ ಹಾಗೂ ಚೇತನ್ ಅವರಿಗೆ ಮಾರಾಟ ಮಾಡಿದ್ದರು. ಇದರ ಹಣದ ವಿಚಾರದಲ್ಲಿ ಗಲಾಟೆಯಾಗಿತ್ತು. ಹಣ ನೀಡದೇ ಇದ್ದುದಕ್ಕೆ ಮಹದೇವಪ್ಪ ಅವರು ಚಾಕು ಹಿಡಿದುಕೊಂಡು ಸುಂದ್ರಪ್ಪ, ಚೇತನ್‌ ಅವರ ಮೇಲೆ ದಾಳಿ ಮಾಡಿ ಜಗಳ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

ಸುಂದ್ರಪ್ಪ ಮತ್ತು ಚೇತನ್‌ ಅವರು ಠಾಣೆಗೆ ಹೋಗಿ ದೂರು ನೀಡಿದ್ದರು. ಮಹದೇವಪ್ಪ ಅವರನ್ನು ಠಾಣೆಗೆ ಬರುವಂತೆ ಪೊಲೀಸರು ಕರೆದಿದ್ದರು. ವಿಷದ ಬಾಟಲಿಯೊಂದಿಗೆ ಠಾಣೆಗೆ ಬಂದಿದ್ದ ಮಹದೇವಪ್ಪ ಅವರು, ‘ನನಗೆ ಹಣವನ್ನು ಕೊಡಿಸಿ, ನ್ಯಾಯ ಕಲ್ಪಿಸಬೇಕು ಇಲ್ಲದಿದ್ದರೆ ವಿಷ ಸೇವಿಸುವಾಗಿ ಬೆದರಿಸಿದ್ದರು. ತಕ್ಷಣವೇ ಅವರ ಜೊತೆಗಿದ್ದ ಮಗ ಮೋಹನ್‌ ಅವರು ವಿಷದ ಬಾಟಲಿ ಕಿತ್ತುಕೊಂಡರು ಎಂದು ಗೊತ್ತಾಗಿದೆ.

ಮಹದೇವಪ್ಪ ಅವರ ಮೈಮೇಲೆ ಗಾಯಗಳಾಗಿರುವುದನ್ನು ಕಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಪೊಲೀಸರು ಸೂಚಿಸಿದ್ದರು. ಮೋಹನ್‌, ತಂದೆಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಬಂದು, ಚೀಟಿ ಮಾಡಿಸಿಕೊಂಡು ಬರಲು ಹೋದಾಗ, ಮಹದೇವಪ್ಪ ಅಲ್ಲಿಂದ ಹೋಗಿದ್ದರು. ನೇರವಾಗಿ ಊರಿಗೆ ಹೋದ ಅವರು ಸುಂದ್ರಪ್ಪ ಜಮೀನಿನಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್‌ ದೌರ್ಜನ್ಯದ ಆರೋಪ: ಮಹದೇವಪ್ಪ ಅವರು ಠಾಣೆಗೆ ಬಂದ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರ ಮಗ ಮೋಹನ್‌ ಶನಿವಾರ ಬೆಳಿಗ್ಗೆ ಆರೋಪ ಮಾಡಿದರು. ಸಂಜೆಯವರೆಗೂ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.