ADVERTISEMENT

ಮಕ್ಕಳಾಗದ ಕೋಪ; ಮೊದಲ ಪತ್ನಿಯ ಮಗಳ ಹತ್ಯೆ

ನೀರಿನಲ್ಲಿ ಮುಳುಗಿಸಿ ಕೊಂದು, ಪ್ಲಾಸ್ಟಿಕ್‌ ಗೋಣಿಚೀಲದಲ್ಲಿ ಹಾಕಿ ದೇವರಕೋಣೆಯಲ್ಲಿ ಬಚ್ಚಿಟ್ಟ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 14:07 IST
Last Updated 25 ಆಗಸ್ಟ್ 2020, 14:07 IST
ಮಹಾಲಕ್ಷ್ಮಿ
ಮಹಾಲಕ್ಷ್ಮಿ   

ಗುಂಡ್ಲುಪೇಟೆ: ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ ಎಂಬ ಕೋಪಕ್ಕೆ ವ್ಯಕ್ತಿಯೊಬ್ಬರು ತನ್ನಿಂದ ದೂರವಾಗಿದ್ದ ಮೊದಲ ಹೆಂಡತಿಯ ಐದು ವರ್ಷದ ಹೆಣ್ಣುಮಗುವನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಸೋಮಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಮಹದೇವಸ್ವಾಮಿ ಹಾಗೂ ಗೌರಮ್ಮ ದಂಪತಿ ಮಗಳು ಮಹಾಲಕ್ಷ್ಮಿ ಹತ್ಯೆಗೀಡಾದ ಮಗು. ಆರೋಪಿಗಳಾದ ಮಹೇಶ್‌ ಹಾಗೂ ಆತನ ಎರಡನೇ ಹೆಂಡತಿ ರತ್ನಮ್ಮ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹೇಶ್‌ ಹಾಗೂ ಗೌರಮ್ಮ ಅವರು 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಮಾನಸ ಎಂಬ ಹೆಣ್ಣು ಮಗು ಇತ್ತು. ಅದೇ ಗ್ರಾಮದ ಮಹದೇವಸ್ವಾಮಿ ಹಾಗೂ ಗೌರಮ್ಮ ಅವರಿಗೆ ಪರಿಚಯವಾದ ನಂತರ, ಊರಿನ ಮುಖಂಡರ ತೀರ್ಮಾನದಂತೆ ಗೌರಮ್ಮ ಅವರು ಮಹೇಶ್‌ ಅವರನ್ನು ತೊರೆದು ಮಹ‌ದೇವಸ್ವಾಮಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದರು. ಮಹೇಶ್‌ ಅವರೊಂದಿಗಿನ ದಾಂಪತ್ಯದಲ್ಲಿ ಜನಿಸಿದ್ದ ಹೆಣ್ಣುಮಗುವನ್ನು (ಮಾನಸ) ಗೌರಮ್ಮ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಮಹದೇವಸ್ವಾಮಿ ಹಾಗೂ ಗೌರಮ್ಮ ಅವರಿಗೆ ಮಹಾಲಕ್ಷ್ಮಿ (5) ಸಾನು (3) ಎಂಬ ಹೆಣ್ಣುಮಕ್ಕಳಿದ್ದರು.

ADVERTISEMENT

ಏಳು ವರ್ಷಗಳ ಹಿಂದೆ ಮಹೇಶ್‌ ಅವರು ರತ್ಮಮ್ಮ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಈವರೆಗೂ ಮಕ್ಕಳಾಗಿರಲಿಲ್ಲ. ಕೋಪಗೊಂಡಿದ್ದ ಮಹೇಶ್‌ ಅವರು ಮಹದೇವಸ್ವಾಮಿ ಅವರನ್ನೂ ದ್ವೇಷಿಸುತ್ತಿದ್ದರು ಎಂದು ಗೊತ್ತಾಗಿದೆ.

‘ಸೋಮವಾರ ಗ್ರಾಮದ ಸಂಬಂಧಿಕರೊಬ್ಬರ ಮನೆಗೆ ಸೀಮಂತಕ್ಕೆ ಹೋಗಿದ್ದ ಹೆಣ್ಣು ಮಗುವನ್ನು ಅಪಹರಿಸಿದ್ದ ಮಹೇಶ್‌ ಹಾಗೂ ರತ್ನಮ್ಮ ಅವರು ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಶವವನ್ನು ಪ್ಲಾಸ್ಟಿಕ್‌ ಗೋಣಿಚೀಲದಲ್ಲಿ ಹಾಕಿ ದೇವರಕೋಣೆಯಲ್ಲಿ ಬಚ್ಚಿಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಚೀಲದಲ್ಲಿರುವುದು ದೇವರ ವಸ್ತು!

ಮಗು ಕಾಣದೇ ಇದ್ದುದರಿಂದ ಆತಂಕಗೊಂಡ ಮಹದೇವಸ್ವಾಮಿ ಅವರು ತೆರಕಣಾಂಬಿ ಠಾಣೆಯಲ್ಲಿ ದೂರು ನೀಡಿದ್ದರು. ಮಹೇಶ್‌ ಹಾಗೂ ರತ್ನಮ್ಮ ಅವರ ಮೇಲೆ ಅನುಮಾನವನ್ನೂ ವ್ಯಕ್ತಪಡಿಸಿದ್ದರು.

ಪೊಲೀಸರು ಮಹೇಶ್‌ ಅವರ ಮನೆಯನ್ನು ತಪಾಸಣೆ ನಡೆಸಿದಾಗ ಗೋಣಿಚೀಲದಲ್ಲಿ ಮಗುವಿನ ಶವವನ್ನು ಕಟ್ಟಿ ಇಟ್ಟಿರುವುದು ಗೊತ್ತಾಗಿದೆ. ಆ ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

‘ಮಗು ನಾಪತ್ತೆಯಾಗಿದೆ ಎಂದು ಪೋಷಕರು ಬಂದು ದೂರು ನೀಡಿದಾಗ ವಿವಿಧ ಕಡೆ ಹುಡುಕಿದೆವು. ಬಳಿಕ ಅರೋಪಿಗಳ ಮೇಲೆ ಅನುಮಾನದಿಂದ ವಿಚಾರಣೆ ನಡೆಸಿ ಮನೆಯನ್ನು ಶೋಧಿಸಿದಾಗ ದೇವರ ಕೋಣೆಯಲ್ಲಿ ಚೀಲದಲ್ಲಿ ಕಟ್ಟಿ ಇಟ್ಟಿದ್ದರು. ಇದು ದೇವರ ವಸ್ತು ಎಂದು ಹೇಳಿದ್ದರು. ಅದನ್ನು ಬಿಚ್ಚಿ ನೋಡಿದಾಗ ಮಗುವಿನ ಮೃತದೇಹ ಇತ್ತು. ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಮಹದೇವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.