ADVERTISEMENT

ಯಳಂದೂರು: ಮಳೆ ನಡುವೆ ಮಾವು ಕಟಾವು ಆರಂಭ

ಯಳಂದೂರು: ಉತ್ತಮ ಇಮಾಂ ಪಸಂದ್ ಮಾವಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:19 IST
Last Updated 19 ಮೇ 2025, 14:19 IST
ಯಳಂದೂರು ತಾಲ್ಲೂಕಿನ ಕೆಸ್ತೂರು ಹೊರವಲಯದ ಮಾವು ತೋಟದಲ್ಲಿ ಮಳೆ ನಡುವೆ ಇಮಾಂ ಫಸಂದ್ ಮಾವು ಕೊಯ್ಲು ಆರಂಭವಾಗಿದೆ
ಯಳಂದೂರು ತಾಲ್ಲೂಕಿನ ಕೆಸ್ತೂರು ಹೊರವಲಯದ ಮಾವು ತೋಟದಲ್ಲಿ ಮಳೆ ನಡುವೆ ಇಮಾಂ ಫಸಂದ್ ಮಾವು ಕೊಯ್ಲು ಆರಂಭವಾಗಿದೆ   

ಯಳಂದೂರು: ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮು ಬಿರಿಸುಗೊಳ್ಳುವ ಆಶಾಭಾವ ಮೂಡಿಸಿದೆ. ರೈತರು ಹೊಲ, ಗದ್ದೆಗಳ ಸಿದ್ಧತೆ ಆರಂಭಿಸಿದ್ದಾರೆ. ಈ ನಡುವೆ ಇಲ್ಲಿನ ಇಮಾಂ ಫಸಂದ್ ಮಾವು ಖರೀದಿ ನಡೆಯುತ್ತಿದ್ದು, ಉತ್ತಮ ತಳಿಯ ಮಾವಿಗೆ ಬೇಡಿಕೆ ಹೆಚ್ಚಿದೆ.

ತಾಲ್ಲೂಕಿನಲ್ಲಿ ಇಮಾಂ ಫಸಂದ್ ಮಾವಿನ ವಿಸ್ತೀರ್ಣ ಕಡಿಮೆ. ಸದ್ಯ ಈ ಕಾಯಿಗೆ ಬೇಡಿಕೆ ಹೆಚ್ಚಿದೆ. ರಸಪುರಿ, ಬಾದಾಮಿ, ಗಿಣಿಮೂತಿ ಮಾವಿನ ಉತ್ಕೃಷ್ಟ ತಳಿಯ ಹಣ್ಣುಗಳ ಕೊಯ್ಲಿಗೆ ಮಳೆಯಿಂದ ಹಿನ್ನಡೆ ಆಗಿದೆ. ಸದ್ಯ ಕಾಯಿ ಬಲಿತಿರುವುದರಿಂದ ಗುಣಮಟ್ಟ ಕುಸಿಯದು. ಸಾವಯವ ಪದ್ಧತಿಯಲ್ಲಿ ಬೆಳೆದಿರುವುದರಿಂದ ಹೊಲದಿಂದಲೇ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಮೂರು ತೋಟಗಳಲ್ಲಿ ಕೊಯ್ಲು ಆರಂಭವಾಗಿದೆ. ಇಮಾಂ ಫಸಂದ್ ಸವಿರುಚಿ ಹೊಂದಿದೆ. 3 ಮಾವು 2 ಕೆ.ಜಿ ತೂಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹200ರವರೆಗೆ ಖರೀದಿ ನಡೆದಿದೆ. ಇದೇ ಹಣ್ಣು ಬೆಂಗಳೂರು ನಗರದ ಮಾಲ್‌ಗಳಲ್ಲಿ ₹350ಕ್ಕೆ ಮಾರಾಟವಾಗುತ್ತಿದೆ. ಸದ್ಯ ಆನ್ಲೈನ್ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಈ ಬಾರಿ ಬೇಡಿಕೆಗೆ ತಕ್ಕಂತೆ ಕಾಯಿ ಬಂದಿಲ್ಲ. ಹಾಗಾಗಿ, ಬೆಳೆಗಾರರಿಗೆ ಉತ್ತಮ ಬೆಲೆ ತಂದಿತ್ತಿದೆ ಎನ್ನುತ್ತಾರೆ ಬೆಳೆಗಾರ ಕೆಸ್ತೂರು ಬಸವರಾಜಪ್ಪ.

ADVERTISEMENT

ಮಳೆ ಹೆಚ್ಚಾದರೆ ಸಮಸ್ಯೆ ಇಲ್ಲ

‘ಗಿಡಗಳಿಗೆ ಹಟ್ಟಿ ಗೊಬ್ಬರ ಮತ್ತು ಘನ ಜೀವಾಮೃತ ಸೇರಿಸಿ ರಸಾಯನಿಕಗಳಿಂದ ಮುಕ್ತಗೊಳಿಸಲಾಗಿದೆ. ವಾತಾವರಣದಲ್ಲಿ ಉಂಟಾದ ವ್ಯತ್ಯಯದಿಂದ ಶೇ 25 ಇಳುವರಿ ಕಡಿಮೆಯಾಗಿದೆ. ರೋಗ ರುಜಿನ ಭೀತಿ ಇಲ್ಲದೆ ಇರುವುದರಿಂದ ಮಳೆ ಸುರಿದರೆ ಮಾವಿನ ಕಟಾವಿಗೆ ತೊಂದರೆ ಇಲ್ಲ. ಗುಣಮಟ್ಟವೂ ಕುಸಿಯದು. ಆದರೆ ಬಿರುಗಾಳಿ ಮತ್ತು ಆಲಿಕಲ್ಲು ಸುರಿದರೆ ಕಾಯಿ ಉದುರಲಿದೆ’ ಎನ್ನುತ್ತಾರೆ ಬೆಳೆಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.