ADVERTISEMENT

ಮಾವಿನಹಣ್ಣುಗಳಿಗೆ ಹೆಚ್ಚಿದ ಬೇಡಿಕೆ

ಮೊಟ್ಟೆ ಧಾರಣೆ ಇಳಿಕೆ: ಮಾಂಸ ಯಥಾಸ್ಥಿತಿ, ಬೀನ್ಸ್‌ ಆಲೂಗೆಡ್ಡೆ ತುಟ್ಟಿ

​ಪ್ರಜಾವಾಣಿ ವಾರ್ತೆ
Published 20 ಮೇ 2019, 14:21 IST
Last Updated 20 ಮೇ 2019, 14:21 IST
ತಳ್ಳುಗಾಡಿಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿರುವ ಮಾವಿನಹಣ್ಣು
ತಳ್ಳುಗಾಡಿಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿರುವ ಮಾವಿನಹಣ್ಣು   

ಚಾಮರಾಜನಗರ: ಮಾರುಕಟ್ಟೆಯಲ್ಲೀಗ ಬಾದಾಮಿ, ರಸಪೂರಿ, ಸೆಂದೂರ, ತೋತಾಪುರಿ, ಮಲಗೋವಾ ಸೇರಿದಂತೆ ವಿವಿಧ ತಳಿ ಮಾವಿನಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಮಲಗೋವಾ, ರಸಪೂರಿ ಮಾವಿನಹಣ್ಣು ಹೆಚ್ಚಾಗಿ ಮಾರಾಟ ಆಗುತ್ತಿದೆ. ‘ರಸಪೂರಿ ಮಾವಿನಹಣ್ಣು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಕೆಜಿ ಮಾವಿನಹಣ್ಣಿನ ಬೆಲೆ₹ 50ರಿಂದ₹ 80ರ ವರೆಗೂ ಇದೆ. ತಂದ ಎರಡು ದಿನಗಳಲ್ಲಿ ಎಲ್ಲ ಹಣ್ಣುಗಳು ಮಾರಾಟವಾಗುತ್ತವೆ. ಬೇಡಿಕೆ ಹೆಚ್ಚಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬೆಳಿಗ್ಗೆ ಸುಡುವ ಬಿಸಿಲಿನ ತಾಪಕ್ಕೆ ಜನರು ಹಣ್ಣು ಹಾಗೂ ಹಣ್ಣಿನ ರಸಕ್ಕೆ ಮೊರೆ ಹೋಗಿದ್ದಾರೆ. ಆದರೂ ಹಣ್ಣುಗಳ ಬೆಲೆಯಲ್ಲಿ (ಕಿತ್ತಳೆ ಬಿಟ್ಟು) ವ್ಯತ್ಯಾಸ ಕಂಡುಬಂದಿಲ್ಲ.

ಕಿತ್ತಳೆ ₹ 20 ಹೆಚ್ಚಳ: ಕಳೆದ ವಾರ₹ 80 ಇದ್ದಂತಹ ಕೆಜಿ ಕಿತ್ತಳೆ ಬೆಲೆ ಈ ವಾರ₹ 20 ಏರಿಕೆಯಾಗಿದೆ. ಈ ವಾರ ₹100ರ ವರೆಗೆ ಇದೆ. ಉಳಿದಂತೆ ಮೂಸಂಬಿ, ಕಲ್ಲಂಗಡಿ, ಸಪೋಟಾ, ದ್ರಾಕ್ಷಿ ಸೇರಿದಂತೆ ಎಲ್ಲ ಹಣ್ಣುಗಳ ಬೆಲೆ ಸ್ಥಿರವಾಗಿದೆ.

ಬೀನ್ಸ್‌ ಏರಿಕೆ: ತರಕಾರಿಗಳ ಮಾರುಕಟ್ಟೆಯಲ್ಲಿ ಬೀನ್ಸ್‌ (₹20), ಆಲೂಗೆಡ್ಡೆ(₹5) ಬೆಲೆ ಕೊಂಚ ಹೆಚ್ಚಳವಾಗಿದೆ. ಬೂದುಗುಂಬಳಕಾಯಿ (₹ 5), ಹಸಿಮೆಣಸಿನ ಕಾಯಿ ಹಾಗೂ ಹೀರೆಕಾಯಿ (₹ 10) ಕಡಿಮೆಯಾಗಿವೆ. ಉಳಿದ ಎಲ್ಲ ತರಕಾರಿಗಳ ಬೆಲೆ ಯಥಾಸ್ಥಿತಿ ಇದೆ.

ಹೂವಿಗೆ ಬೇಡಿಕೆ ಇಳಿಕೆ: ‘ಒಂದು ವಾರದಿಂದ ಎಲ್ಲ ಬಗೆಯ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಶುಭ ಸಮಾರಂಭಗಳು ನಡೆಯುತ್ತಿಲ್ಲ. ಜಾತ್ರೆಗಳು ಕಡಿಮೆಯಾಗಿವೆ. ಇದರಿಂದ ಹೂವುಗಳ ಮಾರಾಟ ಕಡಿಮೆಯಾಗಿದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

‘ಮುಂದಿನ ತಿಂಗಳು ತಮಿಳುನಾಡಿನಲ್ಲಿ ಆರ್ಯಮಾಸ ಆರಂಭವಾಗಲಿದೆ. ಇದರಿಂದ ರಾಜ್ಯದ ಹೂವುಗಳಿಗೆ ಬೇಡಿಕೆ ಸಿಗಲಿದೆ. ಈಗ ನೆರೆ ರಾಜ್ಯದ ಅನೇಕ ಬಗೆಯ ಹೂವುಗಳು ಇಲ್ಲಿಯೂ ಮಾರಾಟವಾಗುತ್ತದೆ. ಅಲ್ಲಿ ಶುಭ ಕಾರ್ಯಕ್ರಮಗಳು ಶುರುವಾದರೆ ಅಲ್ಲಿನ ಕೆಲಹೂವುಗಳು ರಾಜ್ಯಕ್ಕೆ ಆವಕವಾಗುವುದಿಲ್ಲ. ಇದರಿಂದ ಹೂವಿಗೆ ಬೇಡಿಕೆಯಾಗಲಿದೆ’ ಎಂದು ಹೂವಿನ ವ್ಯಾಪಾರಿ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಟ್ಟೆ ಇಳಿಕೆ, ಮಾಂಸ ಯಥಾಸ್ಥಿತಿ: ಮೊಟ್ಟೆಯ ದರ (100ಕ್ಕೆ) ಕಳೆದ ವಾರಕ್ಕಿಂತ ₹ 30 ಕಡಿಮೆಯಾಗಿದೆ. ಸೋಮವಾರ ₹ 383 ಇತ್ತು. ಮಾಂಸ ಹಾಗೂ ಮೀನು ಮಾರುಕಟ್ಟೆಯಲ್ಲಿನ ದರದಲ್ಲಿ ಬದಲಾವಣೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.