ಚಾಮರಾಜನಗರ: ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿರುವ ಟೊಮೆಟೊ ದರ ಚೇತರಿಕೆ ಕಂಡಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮೆಟೊ ಕೆ.ಜಿಗೆ ₹ 15 ರಿಂದ ₹ 20 ಇದೆ. ದರ ಕುಸಿತದಿಂದ ಗ್ರಾಹಕರು ಖುಷಿಯಲ್ಲಿದ್ದರೆ ಬೆಳೆದ ರೈತರು ಮಾತ್ರ ಕಂಗಾಲಾಗಿದ್ದಾರೆ.
ಮಾರುಕಟ್ಟೆಗೆ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿರುವುದು ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಟೊಮೆಟೊ ದರ ಅಲ್ಪ ಹೆಚ್ಚಾಗಿದೆ. ಮಾರುಕಟ್ಟೆಗೆ ಪೂರೈಕೆ ತಗ್ಗಿದರೆ ದರ ನಿಧಾನವಾಗಿ ಹೆಚ್ಚಾಗುವ ಸಾಧ್ಯತೆಗಳು ಇವೆ ಎನ್ನುತ್ತಾರೆ ವ್ಯಾಪಾರಿಗಳು.
ನೆರೆಯ ಜಿಲ್ಲೆಗಳು ಹಾಗೂ ರಾಜ್ಯಗಳಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆದಿರುವುದರಿಂದ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ರಫ್ತು ಕುಸಿತವಾಗಿದೆ. ಬೇಡಿಕೆ ಕುಸಿದಿರುವುದರಿಂದ ಸಹಜವಾಗಿ ದರ ಇಳಿದಿದೆ ಎನ್ನುತ್ತಾರೆ ಅವರು.
ಬೀಟ್‌ರೂಟ್, ಮೂಲಂಗಿ, ಕ್ಯಾರೆಟ್, ಬೀನ್ಸ್, ಬದನೆಕಾಯಿ ದರ ಇಳಿಕೆಯಾಗಿದೆ. ಬೀಟ್‌ರೂಟ್ ಬೆಲೆ ತಿಂಗಳಿನಿಂದಲೂ ಕೆ.ಜಿಗೆ ₹ 15 ರಿಂದ ₹ 20ರ ನಡುವೆ ಇದ್ದು ಗ್ರಾಹಕರಿಗೆ ಅಗ್ಗದ ದರದಲ್ಲಿ ದೊರೆಯುತ್ತಿದೆ. ಮೂಲಂಗಿ ಕೆ.ಜಿಗೆ ₹ 15 ರಿಂದ ₹ 20 ದರವಿದ್ದು, ಕ್ಯಾರೆಟ್ ಹಾಗೂ ಬೀನ್ಸ್ ₹ 40ಕ್ಕೆ ಮಾರಾಟವಾಗುತ್ತಿದೆ.
ಇಳಿಯದ ತೆಂಗಿನಕಾಯಿ ದರ:
ಎಲ್ಲ ಮಾದರಿಯ ಅಡುಗೆಗಳಲ್ಲಿ ಪ್ರಧಾನವಾಗಿ ಬಳಕೆಯಾಗುವ ತೆಂಗಿನ ಕಾಯಿ ದರ ಇಳಿಕೆಯಾಗಿಲ್ಲ. ಮಾರುಕಟ್ಟೆಯಲ್ಲಿ ಈಗಲೂ ತೆಂಗಿನಕಾಯಿ ದರ ₹ 55 ರಿಂದ ₹ 60ರವರೆಗೆ ಇದ್ದು ಗ್ರಾಹಕರಿಗೆ ಹೊರೆಯಾಗಿದೆ. ಚಟ್ನಿ ಸಹಿತ ಮಸಾಲೆ ಪದಾರ್ಥಗಳ ತಯಾರಿಕೆಗೆ ತೆಂಗಿನಕಾಯಿ ಅಗತ್ಯವಾಗಿರುವುದರಿಂದ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ದರ ಏರಿಕೆ ಬಿಸಿ ತಟ್ಟಿದೆ.
ಹೂವಿನ ದರ ಇಳಿಕೆ:
ಕಳೆದವಾರ ಏರಿಕೆ ಕಂಡಿದ್ದ ಹೂವಿನ ದರ ಸೋಮವಾರ ಅಲ್ಪ ಇಳಿಕೆಯಾಗಿದೆ. ಸೇವಂತಿಗೆ ಕೆಜಿಗೆ ₹ 160ರಿಂದ₹ 200, ಗುಲಾಬಿ ₹ 160ರಿಂದ₹ 200, ಸುಗಂಧರಾಜರಾಜ ₹ 120ರಿಂದ₹ 160, ಚೆಂಡು ಹೂ ₹ 20ರಿಂದ₹ 30, ಕನಕಾಂಬರ ₹ 600ರಿಂದ₹ 800, ಮಲ್ಲಿಗೆ ₹ 300ರಿಂದ₹ 400, ಸಣ್ಣ ಮಲ್ಲಿಗೆ ₹ 300ರಿಂದ ₹ 400 ದರ ಇದೆ.
ಕಳೆದವಾರ ಹೂವಿನ ಆವಕ ಕಡಿಮೆಯಾಗಿದ್ದರಿಂದ ಶುಭ ಸಮಾರಂಭಗಳು ಹೆಚ್ಚಾಗಿದ್ದರಿಂದ ದರ ಹೆಚ್ಚಾಗಿತ್ತು. ಎಲ್ಲ ಬಗೆಯ ಹೂವಿನ ದರ ಕನಿಷ್ಠ ₹ 50 ರಿಂದ ₹ 150ರವರೆಗೂ ಹೆಚ್ಚಾಗಿತ್ತು ಎನ್ನುತ್ತಾರೆ ಹೂವಿನ ವ್ಯಾಪಾರಿ ರವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.