ADVERTISEMENT

ಚಾಮರಾಜನಗರ: ಈರುಳ್ಳಿ, ಮಲ್ಲಿಗೆ ಧಾರಣೆ ಏರುಮುಖ

ಹಣ್ಣು, ಮಾಂಸಗಳ ಬೆಲೆ ಯಥಾಸ್ಥಿತಿ, ಬೀನ್ಸ್‌ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 15:47 IST
Last Updated 12 ಅಕ್ಟೋಬರ್ 2020, 15:47 IST
ಹೂವಿನ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿರುವ ಹಾರಗಳು
ಹೂವಿನ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿರುವ ಹಾರಗಳು   

ಚಾಮರಾಜನಗರ: ತರಕಾರಿ ಹಾಗೂ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಈವಾರ ಧಾರಣೆಯಲ್ಲಿ ಏರಿಳಿತ ಕಂಡು ಬಂದಿದೆ.

ತರಕಾರಿಗಳಲ್ಲಿ ಈರುಳ್ಳಿ ಸ್ವಲ್ಪ ತುಟ್ಟಿಯಾಗಿದ್ದರೆ, ಬೀನ್ಸ್‌, ತೊಂಡೆಕಾಯಿ ಅಗ್ಗವಾಗಿದೆ. ಹೂವುಗಳಲ್ಲಿ ಮಲ್ಲಿಗೆ, ಕಾಕಡದ ದರ ಗಣನೀಯವಾಗಿ ಹೆಚ್ಚಾಗಿದೆ. ಹಣ್ಣುಗಳು ಹಾಗೂ ಮಾಂಸದ ಮಾರುಕಟ್ಟೆಗಳಲ್ಲಿ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಮೂರು ವಾರಗಳಿಂದ ಏರುಮುಖಿಯಾಗಿದ್ದ ಈರುಳ್ಳಿಯ ಬೆಲೆ ಕಳೆದ ವಾರ ಬದಲಾಗಿರಲಿಲ್ಲ. ಈ ವಾರ ಸ್ವಲ್ಪ ಏರಿಕೆಯಾಗಿದೆ. ಹಾಪ್‌ ಕಾಮ್ಸ್‌ನಲ್ಲಿ ಕೆಜಿ ಈರುಳ್ಳಿ ಬೆಲೆ ₹5 ಹೆಚ್ಚಾಗಿದೆ. ₹45ರಿಂದ ₹50ವರೆಗೆ ಬೆಲೆ ಇದೆ. ಕಳೆದ ವಾರ ₹40–₹45ರವರೆಗೆ ಇತ್ತು.

ADVERTISEMENT

ಕಳೆದ ವಾರ ಕೆಜಿಗೆ ₹40 ಇದ್ದ ಬೀನ್ಸ್,‌ ಈ ವಾರ ₹30ಕ್ಕೆ ಇಳಿದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀನ್ಸ್‌ ಬರುತ್ತಿರುವುದರಿಂದ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಹೋದ ವಾರ ₹50 ಇದ್ದ ತೊಂಡೆಕಾಯಿ ಬೆಲೆ ₹10 ಕಡಿಮೆಯಾಗಿದೆ. ಟೊಮೆಟೊ (₹20–₹25), ಕ್ಯಾರೆಟ್‌ (₹60) ಸೇರಿದಂತೆ ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಸೇಬು ಹಾಗೂ ಮೂಸಂಬಿಗಳು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ನಗರದ ವಿವಿಧ ಕಡೆ ವ್ಯಾಪಾರಿಗಳುತಳ್ಳುಗಾಡಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದಾರೆ.

ಮಲ್ಲಿಗೆಗೆ ಹೆಚ್ಚಿದ ಬೇಡಿಕೆ:ದಸರಾ ಹತ್ತಿರವಾಗುತ್ತಿದ್ದಂತೆಯೇ ಹೂವುಗಳಿಗೆ ಬೇಡಿಕೆ ಹೆಚ್ಚಾಗಲು ಆರಂಭವಾಗಿದೆ. ಮಲ್ಲಿಗೆ ಹಾಗೂ ಕಾಕಡಗಳಿಗೆ ಹೆಚ್ಚು ಬೇಡಿಕೆ ಬಂದಿದೆ.

ಬಿಡಿಹೂವಿನ ಮಾರುಕಟ್ಟೆಯಲ್ಲಿ ಕಳೆದವಾರ ಮಲ್ಲಿಗೆಗೆ ಕೆಜಿಗೆ ₹120–₹160 ಇತ್ತು. ಸೋಮವಾರ ಅದು ₹400–₹500ವರೆಗೆ ಏರಿದೆ. ₹80ರಿಂದ ₹100ರವರೆಗೆ ಇದ್ದ ಕಾಕಡ ₹240ರಿಂದ ₹280ರವರೆಗೆ ಆಗಿದೆ. ಚೆಂಡು ಹೂ, ಸುಗಂಧರಾಜ ಹೂವುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ.

‘ಮಲ್ಲಿಗೆ ಸೀಸನ್‌ ಮುಗಿಯುತ್ತಾ ಬಂದಿದೆ. ಹಾಗಾಗಿ, ಮಾರುಕಟ್ಟೆಗೆ ಹೆಚ್ಚು ಬರುತ್ತಿಲ್ಲ. ಅದಕ್ಕಾಗಿ ಬೆಲೆ ಜಾಸ್ತಿಯಾಗಿದೆ. ದಸರಾ ಸಮಯಕ್ಕೆ ಎಲ್ಲ ಹೂವುಗಳ ಬೆಲೆ ಹೆಚ್ಚಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 100ಕ್ಕೆ ₹530 ಇದೆ. ಅಂಗಡಿಗಳಲ್ಲಿ ಒಂದು ಮೊಟ್ಟೆಗೆ ₹6ರಿಂದ ₹7 ದರವಿದೆ. ಚಿಕನ್‌, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.