ADVERTISEMENT

ಸಹಜ ಸ್ಥಿತಿಯತ್ತ ಮಾರುಕಟ್ಟೆ ವಹಿವಾಟು

ಹಣ್ಣುಗಳ ರಾಜ ಮಾವು ಲಗ್ಗೆ, ತರಕಾರಿ, ಹಣ್ಣು, ಹೂವುಗಳಿಗೆ ಬೇಡಿಕೆ ಕುಸಿತ

ಸೂರ್ಯನಾರಾಯಣ ವಿ
Published 11 ಮೇ 2020, 20:00 IST
Last Updated 11 ಮೇ 2020, 20:00 IST
ಚಾಮರಾಜನಗರದ ಸಗಟು ಮಾರಾಟ ಮಳಿಗೆಯೊಂದರಲ್ಲಿ ರಾಶಿ ಹಾಕಲಾಗಿರುವ ಮಾವು
ಚಾಮರಾಜನಗರದ ಸಗಟು ಮಾರಾಟ ಮಳಿಗೆಯೊಂದರಲ್ಲಿ ರಾಶಿ ಹಾಕಲಾಗಿರುವ ಮಾವು   

ಚಾಮರಾಜನಗರ: ಹಸಿರು ವಲಯದಲ್ಲಿರುವ ಗಡಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿ ವಾರ ಕಳೆಯುತ್ತಿದ್ದಂತೆಯೇ ಮಾರುಕಟ್ಟೆ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ.

ಜಿಲ್ಲೆಯಾದ್ಯಂತ ಬಹುತೇಕ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರಿಂದ ನಗರ ಪಟ್ಟಣ ಪ್ರದೇಶಗಳಿಗೆ ಬರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ತರಕಾರಿ, ಹಣ್ಣುಗಳು ಸೇರಿದಂತೆ ಅಗತ್ಯವಸ್ತುಗಳ ಖರೀದಿ ವ್ಯವಹಾರಗಳು ಬಿರುಸು ಪಡೆದಿದೆ.

ತರಕಾರಿ, ಹೂ, ಹಣ್ಣು, ಮೊಟ್ಟೆಗಳಿಗೆಇನ್ನೂ ಹೆಚ್ಚು ಬೇಡಿಕೆ ಬಂದಿಲ್ಲ. ಹಾಗಾಗಿ, ಬೆಲೆ ಹೆಚ್ಚಾಗಿಲ್ಲ. ಮೀನು, ಚಿಕನ್‌ ಮತ್ತು ಮಟನ್‌ ಬೆಲೆ ಮಾತ್ರ ಸ್ವಲ್ಪ ದುಬಾರಿ ಇದೆ. ವಾರದ ಹಿಂದೆ ಲಾಕ್‌ಡೌನ್‌ ಜಾರಿಯಲ್ಲಿ ಇರುವಾಗಲೇ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದ್ದು, ಈಗ ಸ್ವಲ್ಪ ಬೇಡಿಕೆ ಕಂಡು ಬರುತ್ತಿದೆ. ಹಾಗಿದ್ದರೂ, ವಿವಿಧ ತಳಿಯ ಮಾವಿನ ಹಣ್ಣುಗಳ ಬೆಲೆ ಕೆಜಿಗೆ₹80ರ ಒಳಗೆಯೇ ಇದೆ.

ADVERTISEMENT

ತರಕಾರಿ: ಬೀನ್ಸ್‌ ಬಿಟ್ಟು ಉಳಿದೆಲ್ಲ ತರಕಾರಿಗಳ ಬೆಲೆ ₹25–₹35 ಆಸುಪಾಸಿನಲ್ಲಿದೆ. ಹಾಪ್‌ಕಾಮ್ಸ್‌ನಲ್ಲಿ ಬೀನ್ಸ್‌ ಕೆಜಿಗೆ ₹80 ಇದೆ. ಈರುಳ್ಳಿ ಬೆಲೆ ದಿನೇ ದಿನೇ ಕುಸಿಯುತ್ತಿದ್ದು, ಕೆಜಿ ಈರುಳ್ಳಿ ₹20 ಒಳಗೆ ಸಿಗುತ್ತಿದೆ. ಟೊಮೆಟೊ ಬೆಲೆಯೂ ₹10ರಿಂದ ₹15ರ ನಡುವೆ ಇದೆ. ಶುಂಠಿ ₹60ರಿಂದ ₹80 ಮಾರಾಟವಾಗುತ್ತಿದ್ದರೆ, ಬೆಳ್ಳುಳ್ಳಿ ಕೆಜಿಗೆ ₹80ರಿಂದ ₹100ರವರೆಗೆ ಇದೆ. ಸೊಪ್ಪುಗಳ ಕಟ್ಟು ಒಂದಕ್ಕೆ ₹5ರಿಂದ ₹10ವರೆಗೆ ಬೆಲೆ ಇದೆ.

‘ಬೀನ್ಸ್‌ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಹೀಗಾಗಿ, ಹೆಚ್ಚು ಬೆಲೆ ಇದೆ. ಉಳಿದೆಲ್ಲ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಲಾಕ್‌ಡೌನ್‌ ಸಡಿಲಿಕೆ ಆದ ನಂತರ ಸ್ವಲ್ಪ ವ್ಯಾಪಾರ ಹೆಚ್ಚಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ವ್ಯಾಪಾರ ಸ್ವಲ್ಪ ಹೆಚ್ಚಾಗಿದೆ. ಜನರು ಇನ್ನೂ ಪೂರ್ಣ ಪ್ರಮಾಣದಲ್ಲಿ ಬರಲು ಆರಂಭಿಸಿಲ್ಲ’ ಎಂದು ಮಹಿಳಾ ವ್ಯಾಪಾರಿಯೊಬ್ಬರು ಹೇಳಿದರು.

ಹೂವಿಗೆ ಇಲ್ಲ ಬೇಡಿಕೆ: ಲಾಕ್‌ಡೌನ್‌ ಹೊಡೆತದಿಂದ ಹೂವಿನ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಆದರೆ, ಸ್ಥಳೀಯವಾಗಲ್ಲದೇ ತಮಿಳುನಾಡಿನಿಂದಲೂ ಹೂವುಗಳ ಪೂರೈಕೆ ಆರಂಭವಾಗಿದೆ.

‘ವ್ಯಾಪಾರವನ್ನು ಆರಂಭಿಸಿದ್ದೇವೆ. ಹೂವುಗಳೂ ಬರುತ್ತಿವೆ. ಆದರೆ ಬೇಡಿಕೆ ಇಲ್ಲ. ಕಡಿಮೆ ಬೆಲೆಗೆ ಮಾರುತ್ತಿದ್ದೇವೆ’ ಎಂದು ಚೆನ್ನೀಪುರದ ಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಇದೇ ಸಮಯದಲ್ಲಿ ಮಲ್ಲಿಗೆಗೆ ಕೆಜಿಗೆ ₹240ರಿಂದ ₹280ರವರೆಗೆ ಇತ್ತು. ಈಗ ಕೇವಲ ₹60 ಇದೆ. ಸುಗಂಧರಾಜ ಹೂವು ಕೆಜಿಗೆ ₹100–₹120 ಕ್ಕೆಲ್ಲ ಮಾರಾಟವಾಗುತ್ತಿತ್ತು. ಈಗ ₹20ಕ್ಕೆ ಕೊಡುತ್ತಿದ್ದೇವೆ’ ಎಂದು ಹೇಳಿದರು.

‘ದೇವಸ್ಥಾನಗಳು ತೆರೆಯುವವರೆಗೆ, ಶುಭ ಸಮಾರಂಭಗಳಿಗೆ ಅವಕಾಶ ನೀಡುವವರೆಗೆ ಹೂವುಗಳಿಗೆ ಬೇಡಿಕೆ ಬರುವುದಿಲ್ಲ. ಇದಕ್ಕೆ ಇನ್ನೂ ಸ್ವಲ್ಪ ದಿನ ಕಾಯಬೇಕು. ವಹಿವಾಟು ನಡೆಯುತ್ತಿರಲಿ ಎಂಬ ಕಾರಣಕ್ಕೆ ಕಡಿಮೆ ಬೆಲೆಗೆ ಮಾರಾಟ ನಡೆಯುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಮಾಂಸ ಮಾರುಕಟ್ಟೆಯಲ್ಲಿ ಮೀನು, ಚಿಕನ್‌ ಮಟನ್‌ಗಳ ದರ ಸ್ವಲ್ಪ ಹೆಚ್ಚೇ ಇದೆ. ಕೆಜಿ ಮೀನಿನ ಬೆಲೆ ₹180 ಇದ್ದರೆ ಚಿಕನ್‌ಗೆ ₹160ರವರೆಗೂ ಬೆಲೆ ಇದೆ. ಕೆಜಿ ಮಟನ್‌ ಬೇಕಾದರೆ ಗ್ರಾಹಕ ₹600 ತೆರಬೇಕು.

ಮೊಟ್ಟೆಗಳಿಗೆ ಇನ್ನೂ ಬೇಡಿಕೆ ಬಂದಿಲ್ಲ. ಹಾಗಾಗಿ ಬೆಲೆ ಕಡಿಮೆ ಇದೆ. 100 ಮೊಟ್ಟೆಗೆ ₹325 ಇದೆ. ‘ಸದ್ಯ ಮೊಟ್ಟೆ ಉತ್ಪಾದನೆ ಹೆಚ್ಚಾಗಿದ್ದು, ಬೇಡಿಕೆ ಇಲ್ಲ. ಹಾಗಾಗಿ ಬೆಲೆ ಕಡಿಮೆಯಾಗಿದೆ. ಗ್ರಾಹಕರು ಹೆಚ್ಚು ಮೊಟ್ಟೆಗಳನ್ನು ಖರೀದಿಸಿದರೆ ಬೆಲೆ ತನ್ನಿಂತಾನೆ ಹೆಚ್ಚಾಗುತ್ತದೆ’ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಹೆಚ್ಚಿದ ಮಾವಿನ ಘಮಲು:ಚಾಮರಾಜನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಣ್ಣುಗಳ ಮಾರುಕಟ್ಟೆಗೆ ವಿವಿಧ ಮಾವಿನ ತಳಿಗಳ ಹಣ್ಣುಗಳ ಆವಕವಾಗಿದ್ದು, ಎಲ್ಲಿ ನೋಡಿದರಲ್ಲಿ ಮಾವಿನ ಹಣ್ಣಿನ ಮಾರಾಟಗಾರರೇ ಕಾಣಿಸುತ್ತಿದ್ದಾರೆ.

ಬಾದಾಮಿ, ಸಿಂಧೂರ, ರಸಪುರಿ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿ‌ವೆ. ಹಣ್ಣುಗಳ ಅಂಗಡಿಗಳು ಮಾತ್ರವಲ್ಲದೇ ರಸ್ತೆ ಬದಿ, ತಳ್ಳುಗಾಡಿ ವ್ಯಾಪಾರಿಗಳು ಕೂಡ ಮಾವಿನ ಹಣ್ಣುಗಳನ್ನು ಗುಡ್ಡೆ ಹಾಕಿಕೊಂಡು ಮಾರಾಟ ಆರಂಭಿಸಿದ್ದಾರೆ.

ಸಗಟು ಮಾರಾಟಗಾರರು ಕೆಜಿ ಬಾದಾಮಿಯನ್ನು ₹40–₹50 ಬೆಲೆಗೆ ಮಾರಾಟ ಮಾಡಿದರೆ, ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ₹80ರವರೆಗೂ ಬೆಲೆ ಹೇಳುತ್ತಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ರಸಪುರಿ ತಳಿಗೆ ₹30–₹40, ಸಿಂಧೂರಕ್ಕೆ ₹15–₹20 ಇದೆ. ಹೊರಗಡೆ ₹40ರಿಂದ ₹50ರವರೆಗೂ ಮಾರಾಟವಾಗುತ್ತಿದೆ.

‘ಚಾಮರಾಜನಗರದಲ್ಲಿ ಮಾವಿನ ಹಣ್ಣುಗಳಿಗೆ ಸ್ವಲ್ಪ ಬೇಡಿಕೆ ಕಡಿಮೆ, ಉಳಿದ ಕಡೆಗಳಲ್ಲಿ ಹೆಚ್ಚು ಬೇಡಿಕೆ ಇದೆ’ ಎಂದು ಸಗಟು ವ್ಯಾಪಾರಿ ಆಸಿಫ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ್ಣುಗಳ ಪೈಕಿ ಸೇಬು ಬೆಲೆ ₹140ರಿಂದ ₹160ವರೆಗೂ ಇದೆ. ಕಿತ್ತಳೆಗೆ ₹120ರವೆಗೆ ಬೆಲೆ ಇದೆ. ದ್ರಾಕ್ಷಿ, ದಾಳಿಂಬೆಗಳು ₹80ರಿಂದ ₹100 ನಡುವೆ ಮಾರಾಟವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.