ADVERTISEMENT

ಚಾಮರಾಜನಗರ: ಬಿಸಿಯೂಟ ಬದಲು ಮಕ್ಕಳಿಗೆ ಅಕ್ಕಿ, ಗೋಧಿ ಬೇಳೆ

ಚಾಮರಾಜನಗರ ಜಿಲ್ಲೆಯಾದ್ಯಂತ ಮೊದಲ ಹಂತದಲ್ಲಿ ಎರಡು ತಿಂಗಳ ಆಹಾರ ಧಾನ್ಯ ವಿತರಣೆ

ಸೂರ್ಯನಾರಾಯಣ ವಿ
Published 7 ಡಿಸೆಂಬರ್ 2020, 19:30 IST
Last Updated 7 ಡಿಸೆಂಬರ್ 2020, 19:30 IST
ಮಕ್ಕಳಿಗೆ ವಿತರಿಸಲು ಅಕ್ಕಿಯ ಪೊಟ್ಟಣವನ್ನು ಸಿದ್ಧಪಡಿಸುತ್ತಿರುವ ಸಿಬ್ಬಂದಿ
ಮಕ್ಕಳಿಗೆ ವಿತರಿಸಲು ಅಕ್ಕಿಯ ಪೊಟ್ಟಣವನ್ನು ಸಿದ್ಧಪಡಿಸುತ್ತಿರುವ ಸಿಬ್ಬಂದಿ   

ಚಾಮರಾಜನಗರ: ಕೋವಿಡ್‌ನಿಂದಾಗಿ 2020–21ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗದೇ ಇರುವುದರಿಂದ, ಜೂನ್‌ನಿಂದ ಅಕ್ಟೋಬರ್‌ವರೆಗಿನ ಅವಧಿಗೆ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ವಿತರಿಸಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡ ನಂತರ, ಜಿಲ್ಲೆಯಲ್ಲೂ ತಿಂಗಳಿನಿಂದೀಚೆಗೆ ಅಕ್ಕಿ, ಗೋಧಿ ಮತ್ತು ಬೇಳೆ ವಿತರಿಸಲಾಗುತ್ತಿದೆ.

ಸಾರ್ವತ್ರಿಕ ರಜಾ ದಿನಗಳನ್ನು ಬಿಟ್ಟು, ಐದು ತಿಂಗಳ ಅವಧಿಯ 108 ದಿನಗಳಿಗೆ ಅಕ್ಕಿ ಮತ್ತು ಗೋಧಿ ವಿತರಿಸಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಈ ಸಂಬಂಧ, ನವೆಂಬರ್‌ 5ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಬಿಸಿಯೂಟದಲ್ಲಿ ಬಳಸುವ ತರಕಾರಿ ಸಾಂಬಾರ್‌ನ ಬದಲಿಗೆ (ಪರಿವರ್ತನಾ ವೆಚ್ಚ) ತೊಗರಿಬೇಳೆಯನ್ನು ವಿತರಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿತ್ತು.

ಮೊದಲ ಹಂತದಲ್ಲಿ ಜೂನ್‌ ಮತ್ತು ಜುಲೈ ತಿಂಗಳ 53 ದಿನಗಳಿಗೆ (45 ದಿನಗಳಿಗೆ ಅಕ್ಕಿ, 8 ದಿನಗಳಿಗೆ ಗೋಧಿ) ಹಾಗೂ ಎರಡನೇ ಹಂತದಲ್ಲಿ ಉಳಿದ ಮೂರು ತಿಂಗಳ 55 ದಿನಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು.

ADVERTISEMENT

ಅದರಂತೆ ಮೊದಲ ಹಂತದ ವಿತರಣೆ ಪ್ರಕ್ರಿಯೆ ರಾಜ್ಯದಾದ್ಯಂತ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಬಹುತೇಕ ಅಂತಿಮ ಹಂತ ತಲುಪಿದೆ. ಅಕ್ಕಿ ಹಾಗೂ ಗೋಧಿಯನ್ನು ಈಗಾಗಲೇ ವಿತರಿಸಲಾಗಿದ್ದು, ಬೇಳೆ ವಿತರಣೆ ನಡೆಯುತ್ತಿದೆ ಎಂದು ಬಿಸಿಯೂಟ ಯೋಜನೆಯ ಜಿಲ್ಲಾ ಅಧಿಕಾರಿ ಎನ್‌.ಗುರುಲಿಂಗಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಕ್ಕಿ, ಗೋಧಿ, ಬೇಳೆ ಪ್ರಮಾಣ: 1ರಿಂದ 5ನೇ ತರಗತಿವರೆಗೆ ಪ್ರತಿ ದಿನಕ್ಕೆ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಗೆ 100 ಗ್ರಾಂ ಅಕ್ಕಿ/ಗೋಧಿ ಮತ್ತು ಪ್ರತಿಯೊಬ್ಬರಿಗೂ ನಿಗದಿ ಪಡಿಸಿರುವ ಪರಿವರ್ತನಾ ವೆಚ್ಚ ₹4.97 ಮೊತ್ತಕ್ಕೆ ಸಮನಾಗಿ ಪ್ರತಿ ದಿನ 58 ಗ್ರಾಂ ತೊಗರಿಬೇಳೆ ವಿತರಿಸಲು ಇಲಾಖೆ ಸೂಚಿಸಿದೆ. ಈ ಲೆಕ್ಕಾಚಾರದಂತೆ ಈ ತರಗತಿಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ 53 ದಿನಗಳ ಅವಧಿಗೆ ತಲಾ 4.5 ಕೆಜಿ ಅಕ್ಕಿ (45 ದಿನಗಳಿಗೆ), 800 ಗ್ರಾಂ ಗೋಧಿ ಹಾಗೂ 3.74 ಕೆಜಿ ತೊಗರಿ ಬೇಳೆ ನೀಡಲಾಗುತ್ತಿದೆ.

6ರಿಂದ 10ನೇ ತರಗತಿವರೆಗೆ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಗೆ 150 ಗ್ರಾಂ ಅಕ್ಕಿ/ಗೋಧಿ ಹಾಗೂ ನಿಗದಿಪಡಿಸಿರುವ ಪರಿವರ್ತನಾ ವೆಚ್ಚ ₹7.45 ಮೊತ್ತಕ್ಕೆ ಸಮನಾಗಿ 87 ಗ್ರಾಂ ತೊಗರಿಬೇಳೆಯಂತೆ, 53 ದಿನಗಳಿಗೆ ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ 6.750 ಗ್ರಾಂ ಅಕ್ಕಿ, 1.2 ಕೆಜಿ ಗೋಧಿ ಮತ್ತು 4.611 ಕೆಜಿ ತೊಗರಿ ಬೇಳೆ ವಿತರಿಸಲಾಗುತ್ತಿದೆ.

ಜಿಲ್ಲೆಯಲ್ಲಿ 413 ಸರ್ಕಾರಿ, 36 ಅನುದಾನಿತ ಸೇರಿದಂತೆ 449 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. 83 ಸರ್ಕಾರಿ, 55 ಅನುದಾನಿತ ಸೇರಿ 138 ಪ್ರೌಢಶಾಲೆಗಳಿವೆ.

2020–21ನೇ ಶೈಕ್ಷಣಿಕ ವರ್ಷಕ್ಕೆ ಜಿಲ್ಲೆಯ 927 ಶಾಲೆಗಳ 80,900 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಬೇಕಾಗಿದೆ. ಇಷ್ಟು ಮಕ್ಕಳಿಗೆ ಇಲಾಖೆ ಸೂಚಿಸಿದಷ್ಟು ಅಕ್ಕಿ, ಗೋಧಿ ಮತ್ತು ತೊಗರಿ ಬೇಳೆಯನ್ನು ವಿತರಿಸಲಾಗುತ್ತಿದೆ.

‘ನಮಗೆ ತಿಂಗಳಿಗೆ 2,000 ಕ್ವಿಂಟಲ್ ಅಕ್ಕಿ, 560 ಕ್ವಿಂಟಲ್ ಬೇಳೆ, 140 ಕ್ವಿಂಟಲ್‌ ಗೋಧಿಯ ಅಗತ್ಯವಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು ಆಹಾರ ಧಾನ್ಯಗಳನ್ನು ಪೂರೈಸುತ್ತಿದೆ. ಮೊದಲ ಹಂತದಲ್ಲಿ ಎರಡು ತಿಂಗಳ ಅಕ್ಕಿ/ಗೋಧಿಯನ್ನು ಈಗಾಗಲೇ ಬಹುತೇಕ ಎಲ್ಲ ಕಡೆಗಳಲ್ಲೂ ವಿತರಿಸಲಾಗಿದೆ. ಬೇಳೆ ಈಗ ಬಂದಿದ್ದು, ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಗುರುಲಿಂಗಯ್ಯ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಶಾಲೆಗೆ ಬಂದು ಆಹಾರ ಧಾನ್ಯಗಳನ್ನು ಪಡೆಯಬೇಕು ಎಂಬ ಸೂಚನೆ ಇದೆ. ಅದರಂತೆ ವಿತರಿಸಲಾಗುತ್ತಿದೆ. ಎರಡನೇ ಹಂತದ ವಿತರಣೆ ಬಗ್ಗೆ ಇಲಾಖೆಯಿಂದ ಆದೇಶ ಬರಬೇಕಷ್ಟೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.