ಚಾಮರಾಜನಗರ: ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ಹೋಗುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟ ನಂತರ ರಾಜ್ಯದ ವಿವಿಧ ಜಿಲ್ಲೆಗಳಿಂದ ಗಡಿ ಜಿಲ್ಲೆಗೆ ಗುರುವಾರ ತಡ ರಾತ್ರಿವರೆಗೆ 1,450 ಕಾರ್ಮಿಕರು ಬಂದಿದ್ದಾರೆ.
ಇವರಲ್ಲಿ ಕೊಡಗಿನ ಕಾಫಿ ಎಸ್ಟೇಟ್‌ಗಳಿಗೆ ಕೂಲಿ ಕೆಲಸಕ್ಕಾಗಿ ಹೋಗಿದ್ದ ಜಿಲ್ಲೆಯ ವಿವಿಧ ಪೋಡುಗಳು 450 ಕೂಲಿ ಕಾರ್ಮಿಕರು ಸೇರಿದ್ದಾರೆ. ಇದುವರೆಗೆ ಜಿಲ್ಲೆಗೆ ಬಂದವರಲ್ಲಿ ಹೆಚ್ಚಿನವರು ಬೆಂಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಇದ್ದವರು.
ಆಯಾ ಜಿಲ್ಲಾಡಳಿತಗಳು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಾರ್ಮಿಕರನ್ನು ಕಳುಹಿಸುತ್ತಿದ್ದು, ಇಲ್ಲಿನ ಜಿಲ್ಲಾಡಳಿತ ಚೆಕ್‌ಪೋಸ್ಟ್‌ಗಳಲ್ಲಿ ಅವರು ಬರಮಾಡಿಕೊಳ್ಳುತ್ತಿದೆ.
‘ಗುರುವಾರ ರಾತ್ರಿವರೆಗೆ 1,450 ಮಂದಿ ಬಂದಿದ್ದಾರೆ. ನಂತರವೂ ಕೆಲವು ಬಸ್‌ಗಳು ಬಂದಿವೆ’ ಎಂದು ಉಪವಿಭಾಗಾಧಿಕಾರಿ ಹಾಗೂ ವಲಸೆ ಕಾರ್ಮಿಕರ ಉಸ್ತುವಾರಿ ಹೊತ್ತಿರುವ ನಿಖಿತಾ ಎಂ.ಚಿನ್ನಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಆರೋಗ್ಯ ತಪಾಸಣೆ
‘ಚೆಕ್‌ಪೋಸ್ಟ್‌ನಲ್ಲಿ ಎಲ್ಲರನ್ನೂ ಇಳಿಸಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರನ್ನು ಇರಿಸಿಕೊಳ್ಳುವುದಕ್ಕಾಗಿ ಎಲ್ಲ ತಾಲ್ಲೂಕುಗಳಲ್ಲಿ ಹಾಸ್ಟೆಲ್‌ಗಳನ್ನು ಗುರುತಿಸಲಾಗಿದ್ದು, ಚೆಕ್‌ಪೋಸ್ಟ್‌ನಿಂದ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.
‘ಎಲ್ಲ ಕಾರ್ಮಿಕರನ್ನು ಕ್ವಾರಂಟೈನ್ ಮಾಡುತ್ತಿಲ್ಲ. ಯಾರಲ್ಲಾದರೂ ರೋಗ ಲಕ್ಷಣ ಕಂಡು ಬಂದರೆ, ಅಂತಹವರ ಗಂಟಲಿನ ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಅಗತ್ಯ ಬಿದ್ದರೆ ಮಾತ್ರ ಕ್ವಾರಂಟೈನ್ ಮಾಡಲಾಗುವುದು. ಇಲ್ಲದಿದ್ದರೆ ಅವರ ಊರಿಗೆ ಕಳುಹಿಸಿ ಕೊಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.