ADVERTISEMENT

ಮಹದೇಶ್ವರ ಬೆಟ್ಟ; ಕಾಮಗಾರಿ ತ್ವರಿತಕ್ಕೆ ಸೂಚನೆ

19ರಂದು ವಾಸ್ತವ್ಯದ ಜೊತೆಗೆ ಮತ್ತೆ ಸಭೆ ನಡೆಸುವೆ– ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 2:21 IST
Last Updated 2 ಮಾರ್ಚ್ 2022, 2:21 IST
ಮಹದೇಶ್ವರ ಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭಕ್ತರಿಗಾಗಿ ಸಿದ್ಧಪಡಿಸುತ್ತಿದ್ದ ಆಹಾರವನ್ನು ಪರಿಶೀಲಿಸಿದರು
ಮಹದೇಶ್ವರ ಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭಕ್ತರಿಗಾಗಿ ಸಿದ್ಧಪಡಿಸುತ್ತಿದ್ದ ಆಹಾರವನ್ನು ಪರಿಶೀಲಿಸಿದರು   

ಮಹದೇಶ್ವರಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಧಿಕಾರದ ಉಪಾಧ್ಯಕ್ಷ ವಿ.ಸೋಮಣ್ದ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಟ್ಟದಲ್ಲಿ ಮಂಗಳವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ’ಇದೇ 19ರಂದು ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಗೆ ಇರಲಿದ್ದಾರೆ ಎಂದರು.

’ಮಹದೇಶ್ವರಬೆಟ್ಟದಲ್ಲಿ ಭಕ್ತರು ನೀಡುವ ಕಾಣಿಕೆ ಗೌರವ ಸಂಕೇತವಾಗಿದೆ. ಹೀಗಾಗಿ ಎಲ್ಲ ಭಕ್ತರಿಗೆ ಅನುಕೂಲವಾಗಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಲ್ಲರ ಸಹಕಾರ ಪಡೆದು ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು. 512 ಕೊಠಡಿಯ ವಸತಿಗೃಹ ಮೂರು ವರ್ಷಗಳಿಂದ ವಿಳಂಬವಾಗುತ್ತಿದೆ. ತಂಬಡಗೇರಿಯಲ್ಲಿ ರಸ್ತೆ ಬದಿ ಕೆಲಸ ಬಾಕಿ ಉಳಿದಿದೆ. ಮಹದೇಶ್ವರಬೆಟ್ಟದಲ್ಲಿ ಒಳಚರಂಡಿ, ಮಹದೇಶ್ವರರ ಪ್ರತಿಮೆ, ಮೆಟ್ಟಿಲು ನಿರ್ಮಾಣ ಕಾಮಗಾರಿ, ಲಾಡು ತಯಾರಿ ಮನೆ, ದೊಡ್ಡಕೆರೆ ಅಭಿವೃದ್ಧಿ ಕೆಲಸಗಳು ಶೀಘ್ರದಲ್ಲಿ ಪೂರ್ಣಗೊಳ್ಳಬೇಕು. ಕ್ಷೇತ್ರವನ್ನು ತಿರುಪತಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮಾದರಿಯಲ್ಲಿ ಅಭಿವೃದ್ದಿ ಪಡಿಸಬೇಕು‘ ಎಂದು ತಿಳಿಸಿದರು.

ADVERTISEMENT

ಶುಚಿತ್ವ ಕಾಪಾಡಿ: ’ಅಡುಗೆ ಮನೆ, ದಾಸೋಹ ಭವನ, ಡಾರ್ಮೆಟರಿ ಸೇರಿದ ಬೆಟ್ಟದಾದ್ಯಂತ ಶುಚಿತ್ವ ಕಾಪಾಡಿಕೊಳ್ಳಬೇಕು. ಭಕ್ತರಿಗೆ ಹೊರೆಯಾದಂತೆ ಕೆಲಸ, ಶುಲ್ಕ ನಿಗದಿ ಬಗ್ಗೆ ಪರಿಶೀಲನೆ ನಡೆಸಿ, ಅರಣ್ಯ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದು ಅಭಿವೃದ್ಧಿ ಕೆಲಸ ಮಾಡಬೇಕು‘ ಎಂದರು.

ಸೌಲಭ್ಯ ಪರಿಶೀಲನೆ: ಸಭೆಗೂ ಮುನ್ನ ಸೋಮಣ್ಣ ಅವರು ಬೆಟ್ಟದಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಭಕ್ತರಿಗೆ ಒದಗಿಸಲಾಗಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

ತಂಬಡಗೇರಿ ಬೀದಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು. ಸ್ಥಳೀಯ ನಿವಾಸಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಡಬೇಕು. ಬಯಲು ಮುಕ್ತ ಶೌಚಾಲಯವನ್ನಾಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗಾಗಿ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದ ಸಚಿವರು ವಾಸ್ತವ್ಯಕ್ಕಾಗಿ ಇರುವ ಡಾರ್ಮೆಟರಿಯನ್ನು ಪರಿಶೀಲಿಸಿ ಮತ್ತಷ್ಟು ಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮವಾಗಿ ನಿರ್ವಹಣೆ ಮಾಡುವಂತೆ ತಿಳಿಸಿದರು.

ದಾಸೋಹ ಭವನಕ್ಕೂ ಭೇಟಿ ಕೊಟ್ಟ ಸಚಿವರು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ದಾಸೋಹ ಭವನದಲ್ಲಿ ಪ್ರಸಾದ ವಿತರಣೆಗೆ ಮಾಡಿರುವ ವ್ಯವಸ್ಥೆ ಹಾಗೂ ಅಡುಗೆಕೋಣೆಯನ್ನು ಪರಿಶೀಲಿಸಿ ಸೌಕರ್ಯಗಳನ್ನು ಉತ್ತಮಪಡಿಸಬೇಕು ಎಂದರು. ಅಡುಗೆಕೋಣೆ ಸೇರಿದಂತೆ ದಾಸೋಹದ ಅಚ್ಚುಕಟ್ಟು ನಿರ್ವಹಣೆಗೆ ಪ್ರಸ್ತಾವ ಸಿದ್ದಪಡಿಸಲೂ ಸೂಚಿಸಿದರು.

ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಕೆ– ಶಿಪ್ ಯೋಜನೆಯ ಮುಖ್ಯ ಎಂಜಿನಿಯರ್ ಕೆ.ಪಿ.ಶಿವಕುಮಾರ್, ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು, ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್‌ಗಳಾದ ಗಣೇಶ್, ವಿನಯ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ ಇತರರು ಇದ್ದರು.

ಕೊಳ್ಳೇಗಾಲ–ಹನೂರು ರಸ್ತೆ; ಆರು ತಿಂಗಳ ಗಡುವು

ಕೊಳ್ಳೇಗಾಲ ಮತ್ತು ಹನೂರು ನಡುವಿನ 23 ಕಿ.ಮೀ ಉದ್ದದ ಕೆ–ಶಿಪ್‌ ರಸ್ತೆ ಅಭಿವೃದ್ಧಿ ಕಾಮಗಾರಿಯು ಇನ್ನು ಆರು ತಿಂಗಳಲ್ಲಿ ಮುಕ್ತಾಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಸೂಚನೆ ನೀಡಿದರು.

ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ, ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಯೋಜನೆಯ ಅನುಸಾರವಾಗಿ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದರು. ಹನೂರಿನಲ್ಲಿ ಅಂಬೇಡ್ಕರ್‌ ಪ್ರತಿಮೆಯನ್ನು ಸ್ಥಳಾಂತರ ಮಾಡಬಾರದು. ಸುತ್ತಲಿನ ಜಾಗವನ್ನು ವೃತ್ತವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸೂಚಿಸಿದರು.

ಹನೂರಿನಿಂದ ಮಹದೇಶ್ವರ ಬೆಟ್ಟದ ವರೆಗಿನ ರಸ್ತೆಯನ್ನೂ ಕೆ–ಶಿಪ್‌ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸುವ ಸಂಬಂಧ ಪ್ರಸ್ತಾವ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳನ್ನು ತಕ್ಷಣವೇ ಮುಚ್ಚಬೇಕು ಎಂದೂ ಸೋಮಣ್ಣ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.