ADVERTISEMENT

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಮಾತು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ರಾಮುಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 10:21 IST
Last Updated 12 ಜುಲೈ 2022, 10:21 IST
ಶ್ರೀರಾಮುಲು
ಶ್ರೀರಾಮುಲು   

ಕೊಳ್ಳೇಗಾಲ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡುವುದಾಗಿ ಕೊಟ್ಟ ಮಾತು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಂಗಳವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗಾಗಿ ಪರಿಶಿಷ್ಟ ಜಾತಿಗೆ ಶೇ 17ರಷ್ಟು ಹಾಗೂ ಪರಿಶಿಷ್ಟ ವರ್ಗದವರಿಗೆ ಶೇ 7.5ರಷ್ಟು ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದು ನಿಜ. ಕಾನೂನು ತೊಡಕು ಹಾಗೂ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಈಗಸುಭಾಷ್ ಬಿ.ಅಡಿ ಅವರ ವರದಿ ಸಲ್ಲಿಕೆಯಾಗಿದೆ. ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಬರುತ್ತದೆ.ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಶೀಘ್ರದಲ್ಲಿ ಸಿಹಿ ಸುದ್ದಿ ಕೊಡುತ್ತೇವೆ’ ಎಂದರು.

‘ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳನ್ನು ಮತ ಬ್ಯಾಂಕ್‌ ಆಗಿ ಮಾಡಿಕೊಂಡು 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ನಮ್ಮ ಜನಕ್ಕೆ ಏನು ಮಾಡಿದೆ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಬದಲು ಮೀಸಲಾತಿ ಹೆಚ್ಚಳ ಮಾಡಬೇಕಿತ್ತು.ಕಾಂಗ್ರೆಸ್ ‍ಪಕ್ಷವು ವಿಧಾನಸೌಧದ ಆವರಣದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿದ್ದು ಬಿಟ್ಟರೆ ಬೇರೆ ಏನು ಮಾಡಿದೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಜನ್ಮ ದಿನಾಚರಣೆ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ಸಿದ್ದರಾಮೋತ್ಸವದ ನಂತರ ಸಿದ್ದರಾಮಯ್ಯ ಕೇವಲ ಉತ್ಸವಮೂರ್ತಿಯಾಗಿಯೇ ಉಳಿಯಬೇಕಾತ್ತದೆ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯಗೆ ಉತ್ಸವಮೂರ್ತಿಯ ಪರಿಸ್ಥಿತಿ ಬರುತ್ತದೆ.ಕಾಂಗ್ರೆಸ್ ಪಕ್ಷದಿಂದ ಹೊರಗೆ ಉಳಿಯಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.