ADVERTISEMENT

ಆಮ್ಲಜನಕ ದುರಂತ: 13 ಮಂದಿಯ ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಪರಿಹಾರಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 15:14 IST
Last Updated 21 ಆಗಸ್ಟ್ 2021, 15:14 IST
ಸಿ.ಪುಟ್ಟರಂಗಶೆಟ್ಟಿ
ಸಿ.ಪುಟ್ಟರಂಗಶೆಟ್ಟಿ   

ಚಾಮರಾಜನಗರ:ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಪೈಕಿ 13 ಜನರ ಕುಟುಂಬಗಳಿಗೆ ಮಾತ್ರ ಹೆಚ್ಚುವರಿಯಾಗಿ ತಲಾ ₹3 ಲಕ್ಷ ಪರಿಹಾರ ನೀಡಿರುವುದಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಶನಿವಾರ ಸಚಿವ ಸೋಮಶೇಖರ್‌ ನೇತೃತ್ವದಲ್ಲಿ ನಡೆದ ಶಾಸಕರು, ಅಧಿಕಾರಿಗಳ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ‘ಯಾವ ಆಧಾರದಲ್ಲಿ 13 ಜನರಿಗೆ ಮಾತ್ರ ಹೆಚ್ಚುವರಿ ಪರಿಹಾರ ಕೊಟ್ಟಿರಿ. ಉಳಿದವರ ಕುಟುಂಬಗಳಿಗೆ ಯಾಕೆ ನೀಡಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ನಾವು ಕೊಟ್ಟಿಲ್ಲ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನ ಆದೇಶದಂತೆ ಅಷ್ಟು ಕುಟುಂಬಗಳಿಗೆ ನೀಡಲಾಗಿದೆ’ ಎಂದರು.

ADVERTISEMENT

‘ಜಿಲ್ಲಾಡಳಿತ ಮೃತಪಟ್ಟವರ ಕುಟುಂಬಗಳ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ನೀಡದೆಯೇ ಕೋರ್ಟ್‌ ಆದೇಶ ಹೊರಡಿಸುತ್ತದೆಯೇ’ ಎಂದು ಪುಟ್ಟರಂಗಶೆಟ್ಟಿ ಅವರು ಮರುಪ್ರಶ್ನೆ ಎಸೆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ದಾಖಲೆಗಳನ್ನೆಲ್ಲ ನ್ಯಾಯಾಲಯ ಜಪ್ತಿ ಮಾಡಿದ್ದು, ಅದರ ಆಧಾರದಲ್ಲಿ ಆದೇಶ ನೀಡಿರುವ ಸಾಧ್ಯತೆ ಇದೆ’ ಎಂದು ಹೇಳಿದರು.

ಈ ಉತ್ತರದಿಂದ ತೃಪ್ತರಾಗದ ಪುಟ್ಟರಂಗಶೆಟ್ಟಿ ಅವರು, ‘ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲರಿಗೆ ಸಂತ್ರಸ್ತರ ಬಗ್ಗೆ ಜಿಲ್ಲಾಡಳಿತ ಬಿಟ್ಟು ಬೇರೆ ಯಾರು ಮಾಹಿತಿ, ದಾಖಲೆಗಳನ್ನು ನೀಡುತ್ತದೆ? ನೀವು ವಿವರಗಳನ್ನು ಕೊಡದೆ ಅವರು ಅಲ್ಲಿ ಹೇಗೆ ವಾದ ಮಾಡುತ್ತಾರೆ? 13 ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಪರಿಹಾರ ನೀಡಿ ಉಳಿದವರಿಗೆ ಅನ್ಯಾಯ ಮಾಡಿದ್ದೀರಿ’ ಎಂದು ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.