
ಸಂತೇಮರಹಳ್ಳಿ: ಸಮೀದ ಗಂಗವಾಡಿಯಲ್ಲಿ ಚಿರತೆ ದಾಳಿಗೆ ರಾಮಯ್ಯ ಅವರ 3 ಕರು ಮೃತಪಟ್ಟಿರುವ ಸ್ಥಳಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಸರ್ಕಾರ ಕಾಡು ಪ್ರಾಣಿಗಳಿಂದ ಮೃತಪಟ್ಟ ಹಸುಗಳಿಗೆ ₹25 ಸಾವಿರ ಪರಿಹಾರ ನಿಗದಿ ಮಾಡಿದೆ. ಚಿರತೆ ದಾಳಿಯಿಂದ ಮೃತಪಟ್ಟಿರುವ ಕರುಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಮಾಲೀಕರಿಂದ ದಾಖಲಾತಿ ಪಡೆದು ಪರಿಹಾರದ ಚೆಕ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ 2 ತಿಂಗಳ ಹಿಂದೆಯೂ ಹಸು ಹಾಗೂ ಕುರಿಮರಿಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ. ಈ ಸಂಬಂಧ ಅರಣ್ಯ ಇಲಾಖೆಯಿಂದ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಮೃತಪಟ್ಟಿರುವ ಕರುಗಳಿಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಗ್ರಾಮದಲ್ಲಿ ಇಂತಹ ಘಟನೆ ನಡೆಯದಂತೆ ಬೋನ್ ಅಳವಡಿಸಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಮೃತಪಟ್ಟಿರುವ ಕರುಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮಾಲೀಕರಿಂದ ದಾಖಲಾತಿ ಪಡೆದುಕೊಂಡು ಆನ್‌ಲೈನ್ ಮೂಲಕ ಮಾಲೀಕರ ಖಾತೆಗೆ ನೇರವಾಗಿ ಪರಿಹಾರ ಹಣ ಜಮಾ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಡಿಸಿಎಫ್ ಶ್ರೀಪತಿ, ಎಸಿಎಫ್ ಪ್ರಕಾಶ್ ಅಕ್ಷಯ್, ಆರ್‌ಎಫ್‌ಓ ಸತೀಶ್, ಡಿಆರ್‌ಎಫ್‌ಓಗಳಾದ ಲಕ್ಷ್ಮಣ, ಮಧು, ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಕುಮಾರ್, ಆರಾಧನ ಸಮಿತಿ ಸದಸ್ಯ ಮಸಣಾಪುರ ಶಿವನಂಜಯ್ಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಲ್ಕೆರೆ ಅಗ್ರಹಾರ ರೇವಣ್ಣ, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಹೊನ್ನೂರು ರೂಪೇಶ್, ಹೊಂಗನೂರು ವೀರಣ್ಣ, ಕೆಂಪರಾಜು, ಚಿಕ್ಕನಂಜಯ್ಯ, ಶಿವನಂಜಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.