ADVERTISEMENT

ಮಾದಪ್ಪನ ರಥೋತ್ಸವ ಕಣ್ತುಂಬಿಕೊಂಡ ಭಕ್ತಸಾಗರ

ಮಹದೇಶ್ವರ ಬೆಟ್ಟ: ತೆಪ್ಪೋತ್ಸವದ ಮೂಲಕ ದೀಪಾವಳಿ ಜಾತ್ರೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 14:59 IST
Last Updated 29 ಅಕ್ಟೋಬರ್ 2019, 14:59 IST
ನೂರಾರು ಭಕ್ತರು ಮಹದೇಶ್ವರ ಸ್ವಾಮಿಯ ರಥವನ್ನು ಎಳೆದರು
ನೂರಾರು ಭಕ್ತರು ಮಹದೇಶ್ವರ ಸ್ವಾಮಿಯ ರಥವನ್ನು ಎಳೆದರು   

ಮಹದೇಶ್ವರ ಬೆಟ್ಟ: ಪ್ರಸಿದ್ಧ ತೀರ್ಥಕ್ಷೇತ್ರವಾದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಪ್ರಯುಕ್ತ ಮಾದಪ್ಪನ ಮ‌ಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.ರಾಜ್ಯ, ಹೊರರಾಜ್ಯಗಳಿಂದ ಬಂದ ಸಹಸ್ರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.

ಬೆಳಿಗ್ಗೆ ಬೇಡಂಗಪ‍ಣ ಸಮುದಾಯದ ಧಾರ್ಮಿಕ ವಿಧಿ ವಿಧಾನಗ‌ಳಂತೆ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ ಮಾಡಿ, ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು.

ಬೆಳಿಗ್ಗೆ 8.50ಕ್ಕೆ ಶುಭ ಲಗ್ನ ಮುಹೂರ್ತದಲ್ಲಿ ಸಾಲೂರು ಮಠಾಧ್ಯಕ್ಷ ಗುರುಸ್ವಾಮಿ ಅವರ ನೇತೃತ್ವದಲ್ಲಿ ಮಂಗಳವಾದ್ಯಗಳ ಮೇಳಗಳೊಂದಿಗೆ ಬೇಡಗಂಪಣ ಸಮುದಾಯದ ಪುಟ್ಟ ಬಾಲಕಿಯರು ಮಹದೇಶ್ವರ ಸ್ವಾಮಿಗೆ ಬೆಲ್ಲದ ಆರತಿ ಬೆಳಗುವುದರ ಮೂಲಕ ರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಕಿಕ್ಕಿರಿದು ತುಂಬಿದ್ದ ಭಕ್ತಸ್ತೋಮದ ನಡುವೆ ದೇವಾಲಯದ ಸುತ್ತಲೂ ಸಾಗಿದ ರಥ 10 ಗಂಟೆ ಸುಮಾರಿಗೆ ಸ್ವಸ್ಥಾನ ತಲುಪಿತು.

ADVERTISEMENT

ಮಾದಪ್ಪನ ದರ್ಶನ ಪಡೆಯಲು ದೂರದ ಊರುಗಳಿಂದ ಬಂದಿದ್ದ ಭಕ್ತರು ರಥಕ್ಕೆ ಹಣ್ಣು, ಜವನ, ನಾಣ್ಯಗಳನ್ನು ಎಸೆದು ಹರಕೆ ತೀರಿಸಿದರು. ಭಕ್ತರ ’ಉಘೇ ಉಘೇ ಮಾದಪ್ಪ‘ ಎಂಬ ಉದ್ಗಾರ ಮುಗಿಲು ಮುಟ್ಟಿತ್ತು. ರಥೋತ್ಸವದ ಬಳಿಕಪಲ್ಲಕ್ಕಿ ಉತ್ಸವವೂ ನಡೆಯಿತು. ರಾತ್ರಿ 10 ಗಂಟೆಗೆ ತೆಪ್ಪೋತ್ಸವದೊಂದಿಗೆ ದೀಪಾವಳಿ ಜಾತ್ರೆ ಮುಕ್ತಾಯ ಕಂಡಿತು.

3 ಲಕ್ಷ ಜನ: 26ರಂದು ಜಾತ್ರೆ ಆರಂಭವಾದಾಗಿನಿಂದ ಇದುವರಗೆ ಎರಡೂವರೆಯಿಂದ ಮೂರು ಲಕ್ಷ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿದ್ದಾರೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಚಿನ್ನದ ತೇರು ದಾಖಲೆ: ಜಾತ್ರೆ ನಡೆದ ನಾಲ್ಕು ದಿನಗಳಲ್ಲಿ ದಾಖಲೆ ಪ್ರಮಾಣದ ಭಕ್ತರು ಚಿನ್ನದ ತೇರಿನ ಹರಕೆ ತೋರಿಸಿದ್ದಾರೆ. ಚಿನ್ನದ ರಥೋತ್ಸವದ ಟಿಕೆಟ್‌ ಮಾಡಿಸಿದ ಭಕ್ತರ ನಿಖರ ಸಂಖ್ಯೆ ಇನ್ನಷ್ಟೆ ತಿಳಿಯಬೇಕಿದೆ. ಆದರೆ, ಸೋಮವಾರ ಒಂದೇ ದಿನ 872 ಮಂದಿ ಚಿನ್ನದ ತೇರಿನ ಟಿಕೆಟ್‌ ಮಾಡಿಸಿದ್ದಾರೆ. ಒಂದು ಟಿಕೆಟ್‌ ಶುಲ್ಕ ₹ 2,501.

ಮೂಲಸೌಕರ್ಯಕ್ಕೆ ಒತ್ತು: ಕಾರ್ಯದರ್ಶಿ

ರಥೋತ್ಸವದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ. 220 ಕ್ವಿಂಟಲ್ ಅಕ್ಕಿ ಹಾಗೂ ಅದಕ್ಕೆ ಸಮನಾಗಿ ಬೇಳೆ, ಸಕ್ಕರೆ, ಬೆಲ್ಲ ಇನ್ನಿತರ ಸಾಮಾಗ್ರಿಗಳನ್ನು ಬಳಸಿ 3 ದಿನಗಳ ಕಾಲ ನಿರಂತರವಾಗಿ ಅನ್ನದಾಸೋಹ ನಡೆಸಲಾಗಿದೆ’ ಎಂದರು.

‘ಭಕ್ತರಿಗೆ ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿತ್ತು. ದೇವಾಲಯ ಬೆಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದರು.

‘ಜೇನುಮಲೆ ಭವನ ಹಾಗೂ ಡಾರ್ಮೆಂಟರಿಗಳಿಗೆ ಸಂಪೂರ್ಣ ಸಲಕರಣೆಗಳನ್ನು ಈಗಾಗಲೇ ಪೂರೈಸಲಾಗಿದ್ದು, ಒಂದು ತಿಂಗಳಿನಲ್ಲಿ ಭಕ್ತರ ಬಳಕೆಗೆ ಮುಕ್ತಗೊಳಿಸಲಾಗುವುದು. ಒಳಚರಂಡಿ, ಮಹದೇಶ್ವರನ ಪ್ರತಿಮೆ ಕಾಮಗಾರಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.