ADVERTISEMENT

ಮಹದೇಶ್ವರ ಬೆಟ್ಟ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ 48 ಜೋಡಿ

ಮಹದೇಶ್ವರ ಬೆಟ್ಟ: ಸಾಮೂಹಿಕ ವಿವಾಹ ಸಮಾರಂಭ, ಹಸೆಮಣೆ ಏರಿದ ಅಂಗವಿಕಲ ಜೋಡಿಗಳು

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 16:29 IST
Last Updated 23 ಜೂನ್ 2022, 16:29 IST
ಸಾಮೂಹಿಕ ವಿವಾಹ ಸಮಾರಂಭಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶೈಲಜಾ ಸೋಮಣ್ಣ, ಶಾಸಕ ಆರ್‌.ನರೇಂದ್ರ ಅವರು ನವ ವಧು ವರರಿಗೆ ಧಾರೆ ಎರೆದರು
ಸಾಮೂಹಿಕ ವಿವಾಹ ಸಮಾರಂಭಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶೈಲಜಾ ಸೋಮಣ್ಣ, ಶಾಸಕ ಆರ್‌.ನರೇಂದ್ರ ಅವರು ನವ ವಧು ವರರಿಗೆ ಧಾರೆ ಎರೆದರು   

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಗುರುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 48 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಂಗವೈಕಲ್ಯ ಹೊಂದಿರುವ ಎರಡು ಜೋಡಿಗಳು ಹಸೆಮಣೆ ಏರಿದ್ದು ಈ ಬಾರಿಯ ವಿಶೇಷ.

ದೇವಾಲಯದ ಮುಂಭಾಗದ ರಂಗಮಂದಿರದಲ್ಲಿ ಬೆಳಿಗ್ಗೆ 8.40ರ ಕಟಕ ಲಗ್ನ ಮುಹೂರ್ತದಲ್ಲಿ ನವಜೋಡಿಗಳು ವೈವಾಹಿಕ ಜೀವನದ ಹೊಸ್ತಿಲು ದಾಟಿದರು.

ADVERTISEMENT

ಸ್ಥಳೀಯ, ಹೊರ ಜಿಲ್ಲೆ ಹಾಗೂ ನೆರೆಯ ತಮಿಳುನಾಡಿನಿಂದಲೂ ನೋಂದಣಿ‌ ಮಾಡಿದ್ದ ಜೋಡಿಗಳು ಮಹದೇಶ್ವರನ ಸನ್ನಿಧಿಯಲ್ಲಿ ಹಸಮಣೆ ಏರಿದರು. ತಮಿಳುನಾಡಿನಿಂದ ಮೂರು ಜೋಡಿಗಳು ನೋಂದಣಿ ಮಾಡಿದ್ದರು.

ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಶಾಸಕ ಆರ್. ನರೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಪತ್ನಿ ಶೈಲಜಾ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ಅವರು ನವ ದಂಪತಿಗಳಿಗೆ ಶುಭ ಹಾರೈಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮ ದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ಅವರು, ‘ದೇವಾಲಯವು ಮುಜರಾಯಿ ಇಲಾಖೆಯ ಅಧೀನದಲ್ಲಿ ಇದ್ದಾಗ 1989ರಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆರಂಭಿಸಲಾಗಿತ್ತು. 2019ರವರೆಗೆ 1,782 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 2002ರಲ್ಲಿ ಅತಿ ಹೆಚ್ಚು ಅಂದರೆ 137 ಜೋಡಿಗಳು ಮದುವೆಯಾಗಿದ್ದರು. ಈ ಬಾರಿ 48 ಜೋಡಿಗಳು ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ’ ಎಂದರು.

ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ‘ಈ ಬಾರಿ ನಿರೀಕ್ಷಿಸಿದ ಮಟ್ಟದಲ್ಲಿ ಜೋಡಿಗಳು ಬಂದಿಲ್ಲ. ವಿವಾಹ ದಿನಾಂಕ ಬದಲಾವಣೆಗೊಂಡಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಹಲವಾರು ಜನರಿಗೆ ದಿನಾಂಕ ತಡವಾಗಿ ಗೊತ್ತಾಗಿದೆ. ಹೀಗಾಗಿ ಹಲವರಿಗೆ ನೋಂದಣಿ ಮಾಡುವುದಕ್ಕೆ ಆಗಿಲ್ಲ’ ಎಂದರು.

‘ಮಹದೇಶ್ವರ ಸ್ವಾಮಿಯ ಸನ್ನಿಧಾನ ದಲ್ಲಿ ವಿವಾಹವಾದ ಹಲವಾರು ಜೋಡಿಗಳು ಇಂದು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದು, ಇಂದು ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳು ಕೂಡ ಮನೆಯಲ್ಲಿ ಎಲ್ಲರೊಂದಿಗೆ ಹೊಂದಾ ಣಿಕೆಯಿಂದ ಜೀವನ ಸಾಗಿಸಬೇಕು’ ಎಂದು ಕಿವಿಮಾತು ಹೇಳಿದರು.

ನೂತನ ವಧು– ವರರನ್ನು ಆಶೀರ್ವದಿಸಿ ಮಾತನಾಡಿದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿ ಅವರು. ‘ಈ ಸನ್ನಿಧಿಯಲ್ಲಿ ಮದುವೆಯಾದವರು ಪುಣ್ಯವಂತರು. ಇಂದಿನ ದಿನಗಳಲ್ಲಿ ಮದುವೆ ಎಂಬುದು ಕಬ್ಬಿಣದ ಕಡಲೆಕಾಯಿಯಂತಾಗಿದೆ. ಸರ್ಕಾರ ಬಡವರಿಗಾಗಿಯೇ ಈ ಉಚಿತ ಸಾಮೂಹಿಕ ವಿವಾಹ ಮಹೋತ್ವವವನ್ನು ಹಮ್ಮಿಕೊಳ್ಳುತ್ತಿದ್ದು, ಹೆಚ್ಚು ಜೋಡಿಗಳು ನೋಂದಣಿ ಮಾಡಿಕೊಂಡು ಇದರ ಸೌಲಭ್ಯ ಪಡೆಯಬೇಕು’ ಎಂದರು.

‘ಮುಂದಿನ ದಿನಗಳಲ್ಲಿ ದೇವಾಲಯದಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭದ ಬಗ್ಗೆ ಎರಡು ತಿಂಗಳ ಮುಂಚಿತವಾಗಿಯೇ ಪ್ರಚಾರ ಮಾಡಲಾಗುವುದು’ ಎಂದು ಸ್ವಾಮೀಜಿ ಹೇಳಿದರು.

ಹಸಮಣೆ ಏರಿದ ಅಂಗವಿಕಲ ಜೋಡಿಗಳು
ಎರಡು ಅಂಗವಿಕಲ ಜೋಡಿಗಳು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು ವಿಶೇಷವಾಗಿತ್ತು.

ಮಾತು ಬಾರದ ಹಾಗೂ ಶ್ರವಣ ದೋಷ ಹೊಂದಿರುವ ಕೊಳ್ಳೇಗಾಲದ ಬಾಪುನಗರದ ಸಿದ್ದಪ್ಪ ಹಾಗೂ ಬಸ್ತೀಪುರ ಗ್ರಾಮದ ಕಾಮಾಕ್ಷಿ ಅವರುಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ದ‍ಪ್ಪ ಅವರು ಬಿಕಾಂ ಮಾಡಿದ್ದು, ಕಾಮಾಕ್ಷಿ ಡಿಪ್ಲೊಮಾ ಮುಗಿಸಿದ್ದಾರೆ. ಕಾಮಾಕ್ಷಿಗೆ ತಂದೆ ತಾಯಿ ಇಲ್ಲದ ಕಾರಣ ವರನ ಕುಟುಂಬವೇ ಮುಂದೆ ನಿಂತು ಮದುವೆ ಮಾಡಿದ್ದಾರೆ.

ಶಿವಮೊಗ್ಗದ ಕುಮಾರ್‌ ಹಾಗೂ ದಾವಣಗೆರೆಯ ಜೋಗ ಪಾಲಮ್ಮ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮತ್ತೊಂದು ಅಂಗವಿಕಲ ಜೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.