ADVERTISEMENT

ಹುಲಿ ಯೋಜನೆ ಪ್ರಸ್ತಾವ ಕೈಬಿಡಿ: ಒತ್ತಾಯ

ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವ ಸಂಬಂಧ ಜನಾಭಿಪ್ರಾಯ ಸಂಗ್ರಹ ಸಭೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:16 IST
Last Updated 1 ನವೆಂಬರ್ 2025, 4:16 IST
ಮಲೆ ಮಹದೇಶ್ವವ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವ ಪ್ರಸ್ತಾವನೆ ಸಂಬಂಧ ತಾಲ್ಲೂಕಿನ ‌ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಸಭಾಂಗಣದಲ್ಲಿ ಶುಕ್ರವಾರ ಜನಾಭಿಪ್ರಾಯ ಸಂಗ್ರಹ ಸಭೆ ನಡೆಯಿತು
ಮಲೆ ಮಹದೇಶ್ವವ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವ ಪ್ರಸ್ತಾವನೆ ಸಂಬಂಧ ತಾಲ್ಲೂಕಿನ ‌ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಸಭಾಂಗಣದಲ್ಲಿ ಶುಕ್ರವಾರ ಜನಾಭಿಪ್ರಾಯ ಸಂಗ್ರಹ ಸಭೆ ನಡೆಯಿತು   

ಮಹದೇಶ್ವರ ಬೆಟ್ಟ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವ ಪ್ರಸ್ತಾವನೆ ಸಂಬಂಧ ತಾಲ್ಲೂಕಿನ ‌ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಸಭಾಂಗಣದಲ್ಲಿ ಶುಕ್ರವಾರ ಜನಾಭಿಪ್ರಾಯ ಸಂಗ್ರಹ ಸಭೆ ನಡೆಯಿತು.

ಸಾಲೂರು ಬೃಹನ್ಮಠದ ಅಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ‘ಪರಂಪರೆಯಿಂದಲೂ ಈ ಭಾಗದ ರೈತರು, ಬುಡುಕಟ್ಟು ಸೋಲಿಗರು ಕಾಡಿನಂಚಿನಲ್ಲಿ ವಾಸವಿದ್ದು ಬದುಕು ಕಟ್ಟಿಕೊಂಡಿದ್ದಾರೆ. ಪ್ರಕೃತಿಯನ್ನು ಉಳಿಸಿ ಬೆಳೆಸುವುದು, ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡುವುದು ಕಾಡುವಾಸಿಗಳ ಜವಾಬ್ದಾರಿಯಾಗಿದೆ ಎಂದರು.

ಮಲೆ ಮಹದೇಶ್ವರ ವನ್ಯಧಾಮ‌ವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಣೆ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಬೇಕು, 2018ರಲ್ಲಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಯ ಕುರಿತು ಸಾಧಕ ಬಾದಕಗಳ ಚರ್ಚೆ ನಡೆಯುತ್ತಾ ಬಂದಿದೆ. ಈಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿನ ಬಳಿಕ ಹುಲಿ ಯೋಜನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ADVERTISEMENT

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪೊನ್ನಾಚಿ, ರಾಮಾಪುರ ಸೇರಿದಂತೆ ಅರಣ್ಯ ಪ್ರದೇಶದಂಚಿನ ಹಲವು ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಮೊದಲು ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು, ಹುಲಿ ಸಂರಕ್ಷಿತ ಅರಣ್ಯ ಘೋಷಣೆ ಪ್ರಸ್ತಾವಕ್ಕೆ ಕಾಡಂಚಿನ ಜನರ ವಿರೋಧವಿದ್ದು ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಿ ಯೋಜನೆ ಜಾರಿ ಪ್ರಸ್ತಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಕಾನೂನುಗಳ ಹೆಸರಿನಲ್ಲಿ ಶತಮಾನಗಳಿಂದ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಸ್ಥಳೀಯರು, ಬುಡಕಟ್ಟು ನಿವಾಸಿಗಳು, ರೈತರ ಮೇಲೆ ದೌರ್ಜನ್ಯ ಸಲ್ಲದು. ಸರ್ಕಾರ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವ ಮುನ್ನ ಕಾಡಂಚಿನ ಗ್ರಾಮಗಳಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು, ಶಾಲೆ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಪೊನ್ನಾಚಿ ಮಹದೇವಸ್ವಾಮಿ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಚಂಗಡಿ ಕರಿಯಪ್ಪ, ಶಾಗ್ಯ ಪ್ರಸಾದ್, ರಾಮಪುರ ರಾಜೇಂದ್ರ, ಡಿ.ಕೆ.ರಾಜು, ಮುತ್ತಯ್ಯ, ಕುಮಾರ್, ಮಾದೇಶ್ ಸೇರಿದಂತೆ ಮುಖಂಡರು ಅಭಿಪ್ರಾಯ ಹಂಚಿಕೊಂಡು ಮಲೆ ಮಹದೇಶ್ವರ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವನೆ ಕೈಬಿಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಮೈಸೂರು–ಚಾಮರಾಜನಗರ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಎಂಎಂ ಹಿಲ್ಸ್‌ ಡಿಎಫ್ಒ ಭಾಸ್ಕರ್ ಮಾತನಾಡಿ, ಹುಲಿ ಸಂರಕ್ಷಿತ ಯೋಜನೆಗೆ ಸ್ಥಳೀಯರು, ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಸ್ಥಳೀಯರು

‘ನೆಲೆ ಕಳೆದುಕೊಳ್ಳುವ ಅರಣ್ಯವಾಸಿಗಳು’ 

ಬಿಆರ್‌ಟಿ ಹಾಗೂ ಬಂಡೀಪುರ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಿದ ನಂತರ ಕಾನೂನುಗಳ ಹೆಸರಿನಲ್ಲಿ ಅರಣ್ಯವಾಸಿಗಳನ್ನು ಕಾಡಿನಿಂದ ಹೊರದಬ್ಬಲಾಗಿದೆ. ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಮಾಡಲಾಗುತ್ತಿದೆ ಮೂಲನಿವಾಸಿಗಳು ನೆಲೆ ಕಳೆದುಕೊಂಡಿದ್ದಾರೆ ಅಂತಹ ಪರಿಸ್ಥಿತಿ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬರಲು ಅವಕಾಶ ನೀಡುವುದಿಲ್ಲ. ಸರ್ಕಾರ ಸಂಘ ಸಂಸ್ಥೆಗಳು ಎನ್‌ಜಿಒಗಳು ಹಾಗೂ ಪರಿಸರವಾದಿಗಳನ್ನು ಬದಿಗಿಟ್ಟು ಅರಣ್ಯವಾಸಿಗಳ ನೋವು ಆಲಿಸಬೇಕು ರೈತರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಮಾಡಬೇಕು ಎಂದು ಹೊನ್ನೂರು ಪ್ರಕಾಶ್ ಅಭಿಪ್ರಾಯ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.