ಮಹದೇಶ್ವರ ಬೆಟ್ಟ: ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಬಾಲಕನಿಗೆ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ, ಹೆಚ್ಚಿನ ಚಿಕಿತ್ಸೆಗೆ ಬೇರೊಂದು ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್ ವ್ಯವಸ್ಥೆಯೂ ದೊರೆಯದೆ ನೋವಿನಲ್ಲಿಯೇ ನರಳಾಡಬೇಕಾದ ಪ್ರಸಂಗ ಭಾನುವಾರ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಬೆಟ್ಟದ ಕಾಡುಹೊಲ ಗ್ರಾಮದ 11 ವರ್ಷದ ಬಾಲಕ ಮರದಿಂದ ಬಿದ್ದು ಗಾಯಗೊಂಡು ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬಂದಾಗ ಅಲ್ಲಿ ವೈದ್ಯರು ಲಭ್ಯವಿಲ್ಲದೆ ಪರಿತಪಿಸಬೇಕಾಯಿತು. ಬೇರೆ ಆಸ್ಪತ್ರೆಗೆ ಕರೆದೊಯ್ಯಲು 108 ಅಂಬುಲೆನ್ಸ್‌ಗೆ ಕರೆ ಮಾಡಿದರೆ ಹನೂರಿನಿಂದ ಬರಲು ಎರಡು ತಾಸು ಬೇಕಾಗುತ್ತದೆ ಎಂಬ ಹಾರಿಕೆಯ ಉತ್ತರ ಬಂತು ಎಂದು ಬಾಲಕನ ಸಂಬಂಧಿಗಳು ದೂರಿದರು.
‘ಅನಿವಾರ್ಯವಾಗಿ ಖಾಸಗಿ ವಾಹನದಲ್ಲಿ ಬಾಲಕನಿಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಬೆಟ್ಟದ ಸುತ್ತಮುತ್ತ ಕಾಡಂಚಿನ ಗ್ರಾಮಗಳು ಹೆಚ್ಚಾಗಿದ್ದು, ಅವಘಡಗಳು ಸಂಭವಿಸಿದರೆ ತುರ್ತು ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಶುಶ್ರೂಷಕರು ಸಹಿತ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ನೋವಿನ ಸಂಗತಿ’ ಎಂದು ಸಂಬಂಧಿಗಳು ಅಸಮಾಧಾನ ವ್ಯಕ್ತಪಡಿಸಿದರು.
‘ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದರೂ ದುರಸ್ತಿಯಲ್ಲಿರುವುದರಿಂದ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಅವಘಡಗಳಾದರೆ ಮಾದಪ್ಪನೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.
‘ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಲ್ಲಿ ಒಂದು ಆಂಬುಲೆನ್ಸ್ ಇದ್ದು ರೋಗಿಗಳ ಸೇವೆಗೆ ಸಿಗದಂತಾಗಿದೆ. ಆಂಬುಲೆನ್ಸ್ ಸೇವೆ ಪಡೆಯಲು ಯಾರಿಗೆ ಕರೆ ಮಾಡಬೇಕು ಎಂಬ ಮಾಹಿತಿಯೇ ಸಾರ್ವಜನಿಕರಿಗೆ ನೀಡಿಲ್ಲ. ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಕರೆ ಮಾಡಿದರೆ ಸ್ಪಂದನ ಸಿಗುವುದಿಲ್ಲ’ ಎಂದು ಸ್ಥಳೀಯರಾದ ಮಹದೇವಪ್ಪ ಆರೋಪಿಸುತ್ತಾರೆ.
ಮಹದೇಶ್ವರ ಬೆಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಂಬುಲೆನ್ಸ್ ಇದ್ದರೂ ರೋಗಿಗಳಿಗೆ ನೆರವಿಗೆ ಬಾರದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಆಂಬುಲೆನ್ಸ್ ಬ್ಯಾಟರಿ ದುರಸ್ತಿ’
ಮರದಿಂದ ಬಿದ್ದು ಬಾಲಕನ ದವಡೆಗೆ ಗಂಭೀರವಾಗಿ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಮೇಲ್ದರ್ಜೆಯ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಯಿತು. ಆರೋಗ್ಯ ಕೇಂದ್ರದಲ್ಲಿರುವ ಆಂಬುಲೆನ್ಸ್ ಬ್ಯಾಟರಿ ದುರಸ್ತಿಯಲ್ಲಿರುವುದರಿಂದ ರೋಗಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿಲ್ಲ. ಮಹದೇಶ್ವರ ಬೆಟ್ಟಕ್ಕೆ ನಿಯೋಜನೆಗೊಂಡಿರುವ 108 ಆಂಬುಲೆನ್ಸ್ ಕೊಳ್ಳೇಗಾಲಕ್ಕೆ ನಿಯೋಜನೆಯಾಗಿದೆ. ಪ್ರಾಧಿಕಾರದ ಆಂಬುಲೆನ್ಸ್‌ಗೆ ನಂಬರ್ ಪ್ಲೇಟ್ ಬಾರದಿರುವುದರಿಂದ ಸೇವೆಗೆ ಲಭ್ಯವಾಗಿಲ್ಲ’ ಎಂದು ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಜಾಹ್ನವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.