ADVERTISEMENT

ಚಾಮರಾಜನಗರ: ಹೆಚ್ಚುತ್ತಿದೆ ಮಾದಪ್ಪನ ಆದಾಯ

ಹುಂಡಿ ಕಾಣಿಕೆ: ವರ್ಷದಲ್ಲಿ ₹2.5 ಕೋಟಿ ಹೆಚ್ಚಳ, ಕ್ಷೇತ್ರದ ಅಭಿವೃದ್ಧಿಗೆ ಒತ್ತು–ಆಡಳಿತ ಮಂಡಳಿ

ಸೂರ್ಯನಾರಾಯಣ ವಿ
Published 12 ಜನವರಿ 2020, 20:00 IST
Last Updated 12 ಜನವರಿ 2020, 20:00 IST
ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡುತ್ತಿರುವುದು
ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡುತ್ತಿರುವುದು   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ರಾಜ್ಯದಲ್ಲೇ ಹೆಚ್ಚು ಆದಾಯ ತರುವ ಎರಡನೇ ದೇವಾಲಯ ಎಂಬ ಹೆಗ್ಗಳಿಕೆ ಪಡೆದಿರುವ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿಯ ಕ್ಷೇತ್ರದ ಆದಾಯ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ.

2018 ಮತ್ತು 2019ರಲ್ಲಿ ದೇವಾಲಯದ ಹುಂಡಿಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಹೋಲಿಸಿದರೆ, ಒಂದು ವರ್ಷದ ಅವಧಿಯಲ್ಲಿ ಕಾಣಿಕೆ ರೂಪದಲ್ಲಿ ಹುಂಡಿಗೆ ಬಿದ್ದ ಹಣದ ಪ್ರಮಾಣ ₹ 2.62 ಕೋಟಿಯಷ್ಟು ಹೆಚ್ಚಾಗಿದೆ. 2018ರಲ್ಲಿ ಇಡೀ ವರ್ಷದಲ್ಲಿ ಹುಂಡಿಗಳಲ್ಲಿ ₹ 15.04 ಕೋಟಿ ಸಂಗ್ರಹವಾಗಿದ್ದರೆ, 2019ರಲ್ಲಿ ಈ ಮೊತ್ತ ₹ 17.66 ಕೋಟಿಗೆ ಹೆಚ್ಚಿದೆ.

ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಸದ್ಯ ಎರಡು ವರ್ಷಗಳ ಹುಂಡಿ ಸಂಗ್ರಹದ ಮಾಹಿತಿ ಸಂಗ್ರಹಿಸಿಟ್ಟಿದ್ದು, ಚಿನ್ನದ ತೇರು ವಿವಿಧ ಸೇವೆಗಳ ಶುಲ್ಕ, ಲಾಡು ಪ್ರಸಾದ, ಹರಕೆ ರೂಪದಲ್ಲಿ ಬಂದ ಆಭರಣಗಳು ಸೇರಿದಂತೆ ಇತರ ಮೂಲಗಳಿಂದ ಬಂದಿರುವ ವರಮಾನದ ವಿವರಗಳನ್ನು ಲೆಕ್ಕ ಹಾಕಿಲ್ಲ. ಇವುಗಳಿಂದ ಬರುತ್ತಿರುವ ಆದಾಯವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಲ್ಲಿ ಅನುಮಾನವಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಭಕ್ತರ ಸಂಖ್ಯೆ ಹೆಚ್ಚಳ: ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಜಿಲ್ಲೆಯವರು ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ತಮಿಳುನಾಡು, ಕೇರಳ ಸೇರಿದಂತೆ ಹೊರರಾಜ್ಯಗಳಿಂದಲೂ ಮಾದಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ.

ಪ್ರವಾಸೋದ್ಯಮ ಇಲಾಖೆಯಲ್ಲಿರುವ ಅಂಕಿ ಅಂಶಗಳ ಪ್ರಕಾರ2017ರಲ್ಲಿ ಬೆಟ್ಟಕ್ಕೆ 31.66 ಲಕ್ಷ,2018ರಲ್ಲಿ 29.94 ಲಕ್ಷ ಮಂದಿ ಭೇಟಿ ನೀಡಿದ್ದರೆ, 2018ರಲ್ಲಿ 36 ಲಕ್ಷಕ್ಕೂ ಹೆಚ್ಚು ಭಕ್ತರು ಮಾದಪ್ಪನ ದರ್ಶನ ಮಾಡಿದ್ದಾರೆ.

ಜಾತ್ರೆಗಳಲ್ಲಿ ಭಕ್ತ ಸಂದಣಿ: ವರ್ಷದ ಅವಧಿಯಲ್ಲಿ ಮಾದಪ್ಪನ ದೇವಾಲಯದಲ್ಲಿ ನಡೆಯುವ ವಿವಿಧ ಜಾತ್ರಾ ಮಹೋತ್ಸವದ ಸಂದರ್ಭದಲ್ಲೂ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಬರುತ್ತಾರೆ. ಈ ಸಂದರ್ಭದಲ್ಲೂ ಭಾರಿ ಪ್ರಮಾಣದಲ್ಲಿ ಆದಾಯ ಬರುತ್ತದೆ.

2019ರ ದೀಪಾವಳಿ ಜಾತ್ರಾ ಮಹೋತ್ಸವದ ಐದು ದಿನಗಳಲ್ಲಿ (ಅಕ್ಟೋಬರ್‌ 25ರಿಂದ 29) ಹುಂಡಿ ಕಾಣಿಕೆಯನ್ನು ಬಿಟ್ಟು ಭಕ್ತರು ಮಾಡಿಸಿದ ಚಿನ್ನದ ತೇರು ಹಾಗೂವಿವಿಧ ಸೇವೆಗಳು, ಲಾಡು ಪ್ರಸಾದಗಳಿಂದಾಗಿ ₹ 1.22 ಕೋಟಿಯಷ್ಟು ಸಂಗ್ರಹವಾಗಿತ್ತು.

ಆ ಐದು ದಿನಗಳಲ್ಲಿ 2,022 ಮಂದಿ ಚಿನ್ನದ ತೇರಿನ ಉತ್ಸವದ ಹರಕೆ ತೀರಿಸಿದ್ದರು. ಇದರಿಂದಾಗಿ ₹ 50,57,022 ಸಂಗ್ರಹವಾಗಿತ್ತು. (ಚಿನ್ನದ ತೇರು ಉತ್ಸವದ ಶುಲ್ಕ ₹ 2,501). ರುದ್ರಾಕ್ಷಿ ಮಂಟಪ, ಬಸವ ವಾಹನ, ಹುಲಿವಾಹನ ಉತ್ಸವಗಳ ಮೂಲಕ ₹ 27,16,245 ಆದಾಯ ಬಂದಿತ್ತು. ಲಾಡು, ಕಲ್ಲುಸಕ್ಕರೆ, ತೀರ್ಥ ಪ್ರಸಾದದಿಂದಾಗಿ ₹ 34,43,595 ಸಂಗ್ರಹವಾಗಿತ್ತು. ಅಭಿಷೇಕ ಸೇವೆಗಳಿಂದ ₹ 6,66,800, ಅತಿಥಿಗೃಹಗಳಿಂದ₹ 3,23,965 ಸಂಗ್ರಹವಾಗಿತ್ತು.

ಮೂಲಸೌಕರ್ಯಕ್ಕೆ ಒತ್ತು: ಕಾರ್ಯದರ್ಶಿ
‘ದೇವಸ್ಥಾನದ ಆದಾಯ ಹೆಚ್ಚಾಗುತ್ತಿರುವುದು ಸಂತಸದ ವಿಚಾರ. ಬೆಟ್ಟದಲ್ಲಿಬರುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಗಮನ ನೀಡಬೇಕು’ ಎಂಬುದು ಭಕ್ತರ ಆಗ್ರಹ.

ಲಕ್ಷಾಂತರ ಭಕ್ತರು ಬರುವ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಸಂಚಾರ ದುಸ್ತರವಾಗಿದೆ. ಹೆಚ್ಚು ಆದಾಯ ಬರುತ್ತಿದ್ದರೂ ರಸ್ತೆಯನ್ನು ದುರಸ್ತಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಕ್ಷೇತ್ರಕ್ಕೆ ಭೇಟಿ ನೀಡಿದವರು ಮುಂದಿಡುತ್ತಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘512 ಕೊಠಡಿಗಳುಳ್ಳ ಐದು ಮಹಡಿಗಳ ಅತಿಥಿಗೃಹ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 96 ಕೊಠಡಿಗಳನ್ನು ಒಗೊಂಡ ಮಹಡಿ ನಿರ್ಮಾಣ ಭರದಿಂದ ಸಾಗಿದೆ. ಅಂತರಸಂತೆಯಲ್ಲಿ ಸ್ನಾನಕೊಳ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಇನ್ನೂ ಮೂರು ಕೊಳ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ತಾಳಬೆಟ್ಟದಿಂದ ಬೆಟ್ಟದವರೆಗೆ ಮೆಟ್ಟಿಲು ನಿರ್ಮಾಣ ಮಾಡುವ ಯೋಜನೆಯೂ ಚರ್ಚೆಯ ಹಂತದಲ್ಲಿದೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದ ನಂತರ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದರು.

‘ಇನ್ನೂ ಎರಡು ಡಾರ್ಮೆಟರಿ ನಿರ್ಮಿಸಲು ಯೋಜಿಸಲಾಗಿದೆ. ಉದ್ಯಾನಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾಗಿದೆ. ಎಲ್ಲ ಕೆಲಸವನ್ನು ಶೀಘ್ರವಾಗಿ ಮುಕ್ತಾಯ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

ಭಕ್ತರಿಗೆ ಮೂಲಸೌಕರ್ಯ ಹಾಗೂ ಅನುಕೂಲ ಕಲ್ಪಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ತ್ಯಾಜ್ಯ ನಿರ್ವಹಣೆ ಘಟಕ ಕಾಮಗಾರಿ ಶೀಘ್ರ
ಬೆಟ್ಟದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ ಎಂಬ ದೂರಿನ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಜಯವಿಭವಸ್ವಾಮಿ ಅವರು, ‘ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಜಾಗದ ಸಮಸ್ಯೆಯಿಂದ ವಿಳಂಬವಾಗಿತ್ತು. ಖಾಸಗಿಯವರಿಗೆ ಜಾಗ ಖರೀದಿಸಿ ಆಗಿದೆ. ತಿಂಗಳ ಒಳಗೆ ಕೆಲಸ ಆರಂಭಿಸಲಾಗುವುದು. ಇದರ ಜೊತೆಗೆ ಮಹದೇಶ್ವರ ಸ್ವಾಮಿಯ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನೂ ಶೀಘ್ರದಲ್ಲಿ ಶುರು ಮಾಡಲಾಗುವುದು’ ಎಂದರು.

ಹಾಳಾಗಿರುವ ರಸ್ತೆಯ ಬಗ್ಗೆ ಕೇಳಿದ್ದಕ್ಕೆ, ‘ಮುಖ್ಯಮಂತ್ರಿಯ ನೇತೃತ್ವದಲ್ಲಿ ಶೀಘ್ರದಲ್ಲಿ ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಎಲ್ಲ ವಿಷಯಗಳು ಚರ್ಚೆಗೆ ಬರಲಿವೆ. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಅವರು ಕೈಗೊಳ್ಳುವ ವಿಶ್ವಾಸವಿದೆ’ ಎಂದು ಉತ್ತರಿಸಿದರು.

ಅಂಕಿ ಅಂಶ

₹15.04 ಕೋಟಿ:2018ರಲ್ಲಿ ಹುಂಡಿಗಳಲ್ಲಿ ಸಂಗ್ರಹವಾಗಿರುವ ಹಣ

₹17.66 ಕೋಟಿ:2019ರಲ್ಲಿ ಹುಂಡಿಗಳಿಗೆ ಭಕ್ತರು ಹಾಕಿರುವ ಕಾಣಿಕೆ ಮೊತ್ತ

₹1.47 ಕೋಟಿ:2019ರಲ್ಲಿ ಪ್ರತಿ ತಿಂಗಳು ಹುಂಡಿಯಲ್ಲಿ ಸಂಗ್ರಹವಾದ ಸರಾಸರಿ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.