ADVERTISEMENT

ಮಹದೇಶ್ವರ ವನ್ಯಧಾಮ: ಕದ್ದ ಗಂಧದ ಮರಗಳಿಗೆ ಹುಡುಕಾಟ

ಕಾರ್ಯಾಚರಣೆಗೆ ಪ್ರತ್ಯೇಕ ತಂಡ, ಎರಡು ದಿನದ ಕೂಂಬಿಂಗ್‌

ಬಿ.ಬಸವರಾಜು
Published 1 ಮೇ 2020, 20:00 IST
Last Updated 1 ಮೇ 2020, 20:00 IST
ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಕೂಂಬಿಂಗ್‌ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಕೂಂಬಿಂಗ್‌ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ ಇತ್ತೀಚೆಗೆ ನಡೆದಿರುವ ಗಂಧದ ಮರ ಕಳ್ಳತನದ ತನಿಖೆಯನ್ನು ಬಿರುಸುಗೊಳಿಸಿರುವ ಅರಣ್ಯ ಇಲಾಖೆ, ಕಳ್ಳತನವಾಗಿರುವ ಗಂಧದ ಮರಗಳಿಗೆ ಹುಡುಕಾಟ ನಡೆಸಿದೆ.

ಕೋವಿಡ್‌–19ರ ಕಾರಣದಿಂದ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಯುತ್ತಿರುವುದರಿಂದ ಮರಗಳ್ಳರಿಂದ ಗಂಧದ ತುಂಡುಗಳನ್ನು ಸಾಗಿಸಲು ಸಾಧ್ಯವೇ ಇಲ್ಲ. ಎಲ್ಲಿಯಾದರೂ ಅಡಗಿಸಿಟ್ಟಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿರುವ ಅಧಿಕಾರಿಗಳು ಈಗ ಅದರ ಬೆನ್ನು ಬಿದ್ದಿದ್ದಾರೆ.

ಮಲೆ ಮಹದೇಶ್ವರ ವನ್ಯಧಾಮದ ಆಡಳಿತ ಮಂಡಳಿ ಅಧಿಕಾರಿಗಳು ಇದೇ ಉದ್ದೇಶದಿಂದ ಪ್ರತ್ಯೇಕ ತಂಡವನ್ನೂ ರಚಿಸಿದ್ದಾರೆ. ಗಂಧದ ತುಂಡುಗಳ ಪತ್ತೆಗೆ ಕೂಂಬಿಂಗ್‌ ಕೂಡ ಆರಂಭಿಸಿದ್ದಾರೆ.

ADVERTISEMENT

ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ತಾಳಬೆಟ್ಟದ ಆರು ತಿರುವುಗಳಲ್ಲಿ ಬೆಳೆದಿದ್ದ ಏಳು ಗಂಧದ ಮರಗಳನ್ನು ಕಳವು ಮಾಡಲಾಗಿತ್ತು. ಮರಗಳು ಕಡಿತಲೆಯಾಗಿ ಐದಾರು ದಿನಗಳ ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು.ಮರಗಳನ್ನು ಹಣಕ್ಕಾಗಿ ಕಡಿಯಲಾಗಿದೆಯೋ ಅಥವಾ ಇಲಾಖೆಗೆ ಕೆಟ್ಟ ಹೆಸರು ತರುವುದಕ್ಕಾಗಿ ಕಡಿಯಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಇದೆ.

ಮರಗಳ್ಳರು ಕೆಲವು ರೆಂಬೆಕೊಂಬೆಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು. ಇದರ, ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಸುತ್ತಮುತ್ತಲ ಗ್ರಾಮಗಳಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡುವ ವ್ಯಕ್ತಿಗಳ ನಿಗಾ ಇಟ್ಟಿದ್ದಾರೆ.

‘ಮರ ಕಡಿಯುವ ಮುನ್ನ ಆ ಮಾರ್ಗದಲ್ಲಿ ಓಡಾಡಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇದನ್ನು ಸಂಗ್ರಹಿಸಲಾಗುತ್ತಿದ್ದು, ಅವರ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶೋಧ ಕಾರ್ಯಾಚರಣೆ: ‘ಗಂಧದ ತುಂಡುಗಳನ್ನು ಅರಣ್ಯದೊಳಗೆ ಅಡಗಿಸಿಟ್ಟಿರುವ ಬಗ್ಗೆ ಅನುಮಾನ ಇದೆ. ಹಾಗಾಗಿ, ಎರಡು ದಿನಗಳಿಂದ ಕೂಂಬಿಂಗ್‌ ನಡೆಸಲಾಗುತ್ತಿದೆ. ಆನತಲೆದಿಂಬದಿಂದ ತಾಳಬೆಟ್ಟದವರೆಗೆ ಬೆಳಿಗ್ಗೆ ಹಾಗೂ ರಾತ್ರಿ ಪಾಳಿಯಲ್ಲಿ ಗಸ್ತು ಮಾಡಲಾಗುತ್ತಿದೆ. ಅಲ್ಲದೇ ಮರಗಳು ಕಡಿತಲೆಯಾದ ಸುತ್ತಮುತ್ತಲ ಐದಾರು ಕಿ.ಮೀ ದೂರದವರೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

8 ವರ್ಷಗಳ ಬಳಿಕ ಮರುಕಳಿಸಿದ ಪ್ರಕರಣ

ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿಕಾಡುಗಳ್ಳ ವೀರಪ್ಪನ್ ಅವಧಿಯಲ್ಲಿ ಅವ್ಯಾಹತವಾಗಿ ಗಂಧದ ಮರಗಳ ಕಳ್ಳತನ ನಡೆಯುತ್ತಿತ್ತು. ಆತನ ಸಾವಿನ ಬಳಿಕ ಕೊಂಚ ಇಳಿಮುಖವಾಗಿತ್ತು.

2012ರಲ್ಲಿ ಇದೇ ರೀತಿ ಗಂಧದ ಮರಗಳ ಕಳ್ಳತನವಾಗಿತ್ತು. ನಿರಂತರವಾಗಿ ಗಂಧದ ಮರಗಳ ಲೂಟಿಯಲ್ಲಿ ತೊಡಗಿದ್ದ ಆರೋಪಿಗಳನ್ನು ಅಂದಿನ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಎಂಟು ವರ್ಷಗಳ ಬಳಿಕ ಪುನಃ ಗಂಧದ ಮರಗಳ ಕಳ್ಳತನ ಮರುಕಳಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಪರಿಸರ ಪ್ರಿಯರು ಕಳವಳ ವ್ಯಕ್ತಪಡಿಸುತ್ತಾರೆ.

ಗಂಧದ ಮರಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮರಗಳ ಹುಡುಕಾಟಕ್ಕೆ 2 ದಿನಗಳಿಂದ ಕೂಂಬಿಂಗ್‌ ನಡೆಸಲಾಗುತ್ತಿದೆ.
–ವಿ.ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.