ADVERTISEMENT

ಕೃಷಿ ಇಲಾಖೆಯಿಂದ ಮೊಬೈಲ್‌ ಆ್ಯಪ್: ಬೆಳೆ ಸಮೀಕ್ಷೆ; ರೈತರಿಗೇ ಜವಾಬ್ದಾರಿ

24ರೊಳಗೆ ಮಾಹಿತಿ ಅಪ್‌ಲೋಡ್‌ ಮಾಡಲು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 3:23 IST
Last Updated 14 ಆಗಸ್ಟ್ 2020, 3:23 IST
ಬೆಳೆ ಸಮೀಕ್ಷೆ ಆ್ಯಪ್‌ ನೋಟ
ಬೆಳೆ ಸಮೀಕ್ಷೆ ಆ್ಯಪ್‌ ನೋಟ   

ಚಾಮರಾಜನಗರ: ಕೃಷಿ ಇಲಾಖೆಯು 2020–21ನೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡುವ ಜಾವಾಬ್ದಾರಿಯನ್ನು ರೈತರಿಗೇ ನೀಡಿದೆ.

ಇದೇ ಉದ್ದೇಶಕ್ಕಾಗಿ ಕೃಷಿ ಇಲಾಖೆಯು ಬೆಳೆ ‘ಸಮೀಕ್ಷೆ ಆ್ಯಪ್‌ (farmers crop survey app 2020-21) ಅನ್ನು ಅಭಿವೃದ್ಧಿ ಪಡಿಸಿದ್ದು, ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಗಳಲ್ಲಿ ಲಭ್ಯವಿದೆ.

ಈ ಯೋಜನೆ ಅಡಿಯಲ್ಲಿ ರೈತರು, ಈ ಆ್ಯಪ್‌ ಮೂಲಕ ತಾವು ಬೆಳೆದಿರುವ ಬೆಳೆಗಳ ಮಾಹಿತಿ, ಚಿತ್ರಗಳನ್ನು ಅಪ್‌ಲೋಡ್‌ ಮಾಡಬೇಕು. ಆಗಸ್ಟ್‌ 10ರಂದು ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಸಮೀಕ್ಷೆ ನಡೆಸಲು ಇದೇ 24ರವರೆಗೆ ಅವಕಾಶ ಇದೆ.

ADVERTISEMENT

‘ರೈತರು ತಮ್ಮ ಜಮೀನುಗಳ ಸರ್ವೆ ನಂಬರ್‌ ಮತ್ತು ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ ಬೆಳೆಗಳನ್ನು ಹಾಗೂ ತಮ್ಮ ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ನಮೂದಿಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ ಬೆಳೆ ವಿಮೆ ಯೋಜನೆಯ ಸರ್ವೆ ನಂಬರ್‌ ವಾರು ಬೆಳೆ ಪರಿಶೀಲನೆ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಸರ್ವೆ ನಂಬರ್ ಆಯ್ಕೆ ಮಾಡುವಾಗ, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸುವಲ್ಲಿ ಹಾನಿಗೊಳಗಾದ ಬೆಳೆ ವಿಸ್ತೀರ್ಣದ ಮಾಹಿತಿ ಸಿದ್ದಪಡಿಸುವಲ್ಲಿ ಮತ್ತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭಗಳಲ್ಲಿ ನಡೆಸಿರುವ ಬೆಳೆಸಮೀಕ್ಷೆ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಬೆಳೆ ಸಮೀಕ್ಷೆ ದತ್ತಾಂಶ ಸಿದ್ಧಪಡಿಸಲಾಗಿದೆ. ಹಾಗಾಗಿ ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇತರೆ ಬೆಳೆಗಳ ವಿವರಗಳನ್ನು ರೈತರ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನಮೂದಿಸಬೇಕು.

ನಿಗದಿತ ಸಮಯದೊಳಗೆ ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಆಪ್‌ಲೋಡ್ ಮಾಡಬೇಕು. ಮಾಡದೇ ಇದ್ದಲ್ಲಿ, ಕಾಲಾವಧಿ ಪೂರ್ಣಗೊಂಡ ಬಳಿಕ ಅಂದರೆ ಆಗಸ್ಟ್‌ 24ರ ನಂತರ ಖಾಸಗಿ ವ್ಯಕ್ತಿಗಳ ಸಹಾಯದಿಂದ ತಮ್ಮ ಜಮೀನುಗಳ ಬೆಳೆ ಮಾಹಿತಿಯನ್ನು ಛಾಯಾ ಚಿತ್ರದೊಂದಿಗೆ ಆಪ್‌ಲೋಡ್ ಮಾಡಬೇಕು ಎಂದು ಚಂದ್ರಕಲಾ ಅವರು ಹೇಳಿದ್ದಾರೆ.

ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.