ADVERTISEMENT

ಬಂಡೀಪುರ: ಸಫಾರಿಗೆ ಮೊಬೈಲ್‌ ಕೊಂಡೊಯ್ಯುವಂತಿಲ್ಲ

ಕ್ಯಾಮೆರಾಗಳಲ್ಲಿ ಮಾತ್ರ ಫೋಟೊ ತೆಗೆಯಲು ಅವಕಾಶ–ಹೊಸ ನಿಯಮ

ಮಲ್ಲೇಶ ಎಂ.
Published 5 ಸೆಪ್ಟೆಂಬರ್ 2020, 19:30 IST
Last Updated 5 ಸೆಪ್ಟೆಂಬರ್ 2020, 19:30 IST
ಬಂಡೀಪುರ
ಬಂಡೀಪುರ   

ಗುಂಡ್ಲುಪೇಟೆ: ಬಂಡೀಪುರ ಸಫಾರಿಗೆ ತೆರಳುವ ಪ್ರವಾಸಿಗರು ಇನ್ನು ಮುಂದೆ ಮೊಬೈಲ್‌ ಕೊಂಡೊಯ್ಯುವಂತಿಲ್ಲ. ಶುಲ್ಕ ಪಾವತಿಸಿ ತೆಗೆದುಕೊಂಡು ಹೋಗುವ ಕ್ಯಾಮೆರಾಗಳಲ್ಲಿ ಮಾತ್ರ ಚಿತ್ರಗಳನ್ನು ಸೆರೆ ಹಿಡಿಯಲು ಅವಕಾಶ.

ಮೊಬೈಲ್‌ನಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಪ್ರಯತ್ನಿಸುವುದರಿಂದ ಕಾಡು ಪ್ರಾಣಿಗಳಿಗೆ ಹಾಗೂ ಇತರೆ ಪ್ರವಾಸಿಗರಿಗೆ ಆಗುವ ಕಿರಿಕಿರಿಯನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಸಫಾರಿ ವೇಳೆಯಲ್ಲಿ ಕಾಡು ಪ್ರಾಣಿಗಳು ಕಂಡಾಗ ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯುವವರಿಗಿಂತ ಮೊಬೈಲ್‌ನಲ್ಲಿ ಸೆರೆ ಹಿಡಿಯುವವರೇ ಹೆಚ್ಚಾಗಿದ್ದರು. ಇದರಿಂದಾಗಿ ಪ್ರಾಣಿಗಳಿಗೆ ಕಿರಿಕಿರಿ ಆಗುತ್ತಿತ್ತು. ಜೊತೆಗೆ ಸದ್ದುಗದ್ದಲವಿಲ್ಲದೇ ಕಾಡು ಮತ್ತು ಪ್ರಾಣಿಗಳನ್ನು ವೀಕ್ಷಿಸಲು ಬರುವವರಿಂದ ಅನೇಕ ಬಂದಿದ್ದವು. ಇದರಿಂದಾಗಿ ಮೊಬೈಲ್ ತರುವಂತಿಲ್ಲ ಎಂದು ಕಟ್ಟು ನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ. ತಂದರೆ ವಶ ಪಡಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಕ್ಯಾಮೆರಾ ಮೂಲಕ ಪ್ರಾಣಿಗಳನ್ನು ಸೆರೆ ಹಿಡಿಯಲು ಅವಕಾಶ ಇದೆ. ಇವುಗಳಿಗೆ ಶುಲ್ಕವನ್ನೂ ನಿಗದಿ ಮಾಡಲಾಗಿದೆ. ಪ್ರವಾಸಿಗರು ಮೊಬೈಲ್ ಅನ್ನು ತೆಗೆದು ಪ್ರಾಣಿಗಳು ಕಂಡಾಕ್ಷಣ ಅಲ್ಲಿ.. ಇಲ್ಲಿ... ಎಂದು ಸದ್ದು ಮಾಡುವುದರಿಂದ ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಆಗುತ್ತದೆ. ಕೆಲವೊಂದು ಬಾರಿ ಆನೆಯು ಮರಿಯ ಜೊತೆಗೆ ಇದ್ದಾಗ ಈ ರೀತಿಯಲ್ಲಿ ಗದ್ದಲ ಮಾಡುವುದರಿಂದ ದಾಳಿ ಮಾಡಲು ಮುಂದಾಗುತ್ತದೆ. ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಸಫಾರಿಯಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಬಾಡಿ ಮಾಧವ್ ಅವರು ನಿರ್ದೇಶಕರಾಗಿದ್ದಾಗ ಸಫಾರಿ ವಾಹನಗಳ ಚಾಲಕರು ಮೊಬೈಲ್ ಬಳಕೆ ಮಾಡಬಾರದು ಎಂದು ಆದೇಶ ಹೊರಡಿಸಿದ್ದರು. ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಪ್ರಾಣಿಗಳನ್ನು ಕಂಡಾಗ ಇಂತಹ ಜಾಗದಲ್ಲಿ ಪ್ರಾಣಿಗಳು ಇದೆ ಎಂದು ಚಾಲಕರು ಒಬ್ಬರಿಗೊಬ್ಬರು ಮಾಹಿತಿ ರವಾನೆ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಎಲ್ಲ ವಾಹನಗಳು ಒಂದೇ ಜಾಗಕ್ಕೆ ಹೋಗುವುದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತಿತ್ತು. ಜೊತೆಗೆ, ಪ್ರಾಣಿಗಳನ್ನು ತೋರಿಸುವ ಭರದಲ್ಲಿ ಕಾಡಿನ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ ಎಂದು ಕೆಲ ಪ್ರವಾಸಿಗರು ದೂರು ನೀಡಿದ್ದರು. ಇದರಿಂದಾಗಿ ಮೊಬೈಲ್ ನಿಷೇಧ ಮಾಡಲಾಗಿತ್ತು. ಇದೀಗ ಪ್ರವಾಸಿಗರ ಮೊಬೈಲ್ ಸಫಾರಿ ವೇಳೆಯಲ್ಲಿ ನಿಷೇಧ ಮಾಡಿರುವುದು ಖುಷಿಯ ವಿಚಾರ’ ಎಂದು ವನ್ಯ ಛಾಯಾಗ್ರಾಹಕ ರಾಬಿನ್ಸನ್ ಅವರು ತಿಳಿಸಿದರು.

‘ಪ್ರಾಣಿಗಳ ಚಿತ್ರಗಳನ್ನು ಸೆರೆ ಹಿಡಿಯುವುದಕ್ಕಾಗಿ ಶುಲ್ಕ ‍ಪಾವತಿಸಿ ಕ್ಯಾಮೆರಾ ತಂದಿರುತ್ತೇವೆ. ಉಳಿದವರು ಮೊಬೈಲ್ ಪ್ರಾಣಿಗಳ ಫೋಟೊ ತೆಗೆಯುವುದರ ಜೊತೆಗೆ ಗದ್ದಲ ಮಾಡುತ್ತಾರೆ. ಇದರಿಂದಾಗಿ ಪ್ರಾಣಿಗಳು ಮರೆಯಾಗುತ್ತವೆ. ಇದರಿಂದಾಗಿ ವೃತ್ತಿ ಛಾಯಾಗ್ರಾಹಕರಿಗೆ ತೊಂದರೆಯಾಗುತ್ತದೆ’ ಎಂದು ಶ್ರೀಕಂಠ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.