ADVERTISEMENT

ಮೋದಿ ಜನ್ಮದಿನ: ಬಿಜೆಪಿಯಿಂದ ಸೇವಾ ಪಾಕ್ಷಿಕ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 14:34 IST
Last Updated 15 ಸೆಪ್ಟೆಂಬರ್ 2022, 14:34 IST
ಆರ್‌.ಸುಂದರ್‌
ಆರ್‌.ಸುಂದರ್‌   

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಬಿಜೆಪಿ ಘಟಕವು ಶನಿವಾರದಿಂದ (ಸೆ.17) ಅ.2ರವರೆಗೆ ‘ಸೇವಾ ಪಾಕ್ಷಿಕ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್‌ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.

‘17ರಂದು ಪ್ರಧಾನಿ ಮೋದಿ, 25ರಂದು ಬಿಜೆಪಿ ಸಂಸ್ಥಾಪಕ ದೀನದಯಾಳ್ ಉಪಾಧ್ಯಾಯರು, ಅ 2ರಂದು ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜನ್ಮ ದಿನಾಚರಣೆ ನಡೆಯಲಿದೆ. ಇವುಗಳ ಪ್ರಯುಕ್ತ 15 ದಿನಗಳ ಕಾಲ ವಿವಿಧ ಸೇವಾ ಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ’ ಎಂದರು.

ADVERTISEMENT

‘ಶನಿವಾರ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಅಂಗವಿಕಲರಿಗೆ ಕೃತಕ ಕಾಲುಗಳನ್ನು ವಿತರಿಸಲಾಗುವುದು. ಜನ ಕಲ್ಯಾಣ ಯೋಜನೆಗಳ ಕುರಿತಾದ ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಪ್ರಧಾ‌ನಿ ಅವರ ಜೀವನ ಮತ್ತು ಗುರಿಯ ಕುರಿತಾಗಿ ಒಂದು ಪ್ರದರ್ಶಿನಿಯನ್ನು ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಆಯೋಜಿಸಲಾಗುವುದು. ಪ್ರತಿ ಬೂತ್‌ನಲ್ಲಿಯೂ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗುವುದು’ ಎಂದರು.

‘25ರಂದು ಪಂಡಿತ್ ದೀನ್ ದಯಾಳ್‌ ಉಪಾಧ್ಯಾಯರ ಜನ್ಮದಿನದ ಪ್ರಯುಕ್ತ ಜಿಲ್ಲೆಯ 985 ಬೂತ್‌ಗಳಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗುವುದು. ಅವರ ಕುರಿತು ಚರ್ಚೆ, ಸಂವಾದ ಕಾರ್ಯಕ್ರಮ ನಡೆಯಲಿದೆ. ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪ್ರತಿ ಬೂತ್‌ನಲ್ಲಿ ಸಾಮೂಹಿಕವಾಗಿ ಆಲಿಸುವ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು.

‍‘ಅಕ್ಟೋಬರ್‌ 2ರಂದು ಗಾಂಧಿ ಜಯಂತಿ, ಲಾಲ್‌ ಬಹದ್ದೂರು ಶಾಸ್ತ್ರಿ ಜಯಂತಿಯಂದು ಸ್ವದೇಶಿ, ಖಾದಿ, ಆತ್ಮನಿರ್ಭರತೆ, ಸರಳತೆ ಮತ್ತು ಶುಚಿತ್ವದ ಬಗ್ಗೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಖಾದಿ ಮಳಿಗೆಗಳಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸುವ ಅಭಿಯಾನವೂ ನಡೆಯಲಿದೆ’ ಎಂದು ಸುಂದರ್‌ ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೃಷಬೇಂದ್ರಪ್ಪ, ಮುಖಂಡರಾದ ಎಂ.ರಾಮಚಂದ್ರ, ಹನುಮಂತಶೆಟ್ಟಿ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.