ADVERTISEMENT

ಯಳಂದೂರು | ಘಟ್ಟ ಸಾಲಿನಲ್ಲಿ ಮೇಘಗಳ ಮಿಂಚಿನ ಸಂಚಾರ

ಜಿಲ್ಲೆಯಲ್ಲಿ ಮುಂಗಾರಿನ ಸಿಂಚನ, ಕೃಷಿಕರಿಗೆ ಸಂಭ್ರಮ

ನಾ.ಮಂಜುನಾಥ ಸ್ವಾಮಿ
Published 3 ಜುಲೈ 2020, 16:59 IST
Last Updated 3 ಜುಲೈ 2020, 16:59 IST
ಯಳಂದೂರಿನ ಆಗಸದಲ್ಲಿ ಕಂಡ ಮೋಡಗಳ ಸಾಲು
ಯಳಂದೂರಿನ ಆಗಸದಲ್ಲಿ ಕಂಡ ಮೋಡಗಳ ಸಾಲು   

ಯಳಂದೂರು: ಚಾಮರಾಜನಗರಜಿಲ್ಲೆಯಾದ್ಯಂತ ಮೇಘ ಮಾಲೆಗಳ ಆಟೋಟ ಸಾಗಿದೆ. ಇದರ ಜೊತೆ ಜೊತೆಗೆ ಮುಂಗಾರು ಮಾರುತಗಳ ಮೆರವಣಿಗೆ ಶುರುವಾಗಿದೆ.

ಕೆಲವು ದಿನಗಳಿಂದೀಚೆಗೆಕ್ಷಣ ಕ್ಷಣಕ್ಕೂ ಬದಲಾಗುವ ಆಕಾಶದ ನೀಲಿ, ಕರಿ ಮೋಡಗಳ ಸಾಲು, ಮಳೆಯ ಸಿಂಚನ ಜನರಿಗೆ ಹಿತಕರ ಅನುಭವ ನೀಡುತ್ತಿದೆ.

ಬಿಳಿಗಿರಿರಂಗನಬೆಟ್ಟ ಸೇರಿದಂತೆ ತಾಲ್ಲೂಕಿನಾದ್ಯಂತ ಕೆಲವು ದಿನಗಳಿಂದ ಮಳೆಯಾಗುತ್ತಿದೆ.ಪಟ್ಟಣದ ಸುತ್ತಮುತ್ತ ಹದವಾದ ವರ್ಷಧಾರೆಯಾದರೆ, ಬನದ ಸುತ್ತಮುತ್ತ ತುಂತುರು ಮಳೆಯ ಸೋನೆ ಸುತ್ತಮುತ್ತಲ ಮುಸ್ಸಂಜೆಯ ಸೊಬಗನ್ನು ಮತ್ತಷ್ಟು ಇಮ್ಮಡಿಸುತ್ತಿದೆ. ಹಸಿರು ಹೊದ್ದ ಕಾಡು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ADVERTISEMENT

‘ಕೆರೆ, ಕಟ್ಟೆಗಳ ಬಳಿಯ ಗುಡ್ಡಗಳು, ಅಣೆಕಟ್ಟೆಗಳು, ಹೊಲ, ಗದ್ದೆಗಳು ಇವುಗಳನ್ನು ತಬ್ಬಿಕೊಂಡ ಮಂಜುಮಯ ಪರಿಸರ, ದಟ್ಟ ಮಳೆ ಕಾಡುಗಳು, ಇಲ್ಲಿಂದ ಬಯಲಿನ ಕಡೆ ತೇಲಿ ಬರುವ ಮೋಡಗಳ ಓಡಾಟದ ಮನಮೋಹಕ ದೃಶ್ಯ ಕಣ್ಣಿಗೆ ತಂಪು ತುಂಬಿದರೆ, ಮನಕ್ಕೆ ಮನೋಲ್ಲಾಸ ನೀಡುತ್ತದೆ’ ಎಂದು ಹೇಳುತ್ತಾರೆ ಮಳೆ ಮಾಹಿತಿ ನೀಡುವ ರಾಮಾಚಾರಿ ಮತ್ತು ನಾಗೇಶ್.

‘ಜುಲೈನಿಂದ ಡಿಸೆಂಬರ್ ತನಕ ಘಟ್ಟ ಪ್ರದೇಶಗಳಲ್ಲಿ ಸುತ್ತಾಡುವುದು ಅದ್ಭುತವಾದ ಅನುಭೂತಿ ಕಟ್ಟಿಕೊಡುತ್ತದೆ. ಪ್ರತಿ ಕ್ಷಣವೂ, ಮೋಡಗಳ ಆಕಾರ ಬದಲಾಯಿಸಿ, ಮುಂದೆ ಸಾಗುವಾಗ ಹಸಿರು ಕಾನನದ ನಡುವೆ, ಬಿಳಿಯ ಮೋಡಗಳು ಚಲಿಸಿದಂತೆ ಆಗುತ್ತದೆ. ಈ ದೃಶ್ಯವನ್ನು ನೋಡುವುದೇ ಒಂದು ಸುಯೋಗ’ ಎನ್ನುತ್ತಾರೆ ಇವರು.

‘ಇತ್ತೀಚಿನ ವರ್ಷಗಳಲ್ಲಿ ನೂರಾರು ಝರಿ, ಜಲಪಾತಗಳು, ಹಳ್ಳ, ಕೊಳ್ಳಗಳು ಬತ್ತಿ ಹೋಗಿ ಅವುಗಳ ಸಹಜತೆಗೆ ಭಾರಿ ಅಡಚಣೆ ಆಗಿದೆ ಎನ್ನುವುದು ವಾಸ್ತವ. ಮುಂಗಾರಿನ ಅಬ್ಬರ ಅಷ್ಟಾಗಿ ಇಲ್ಲ. ಆದರೂ, ಈ ವರ್ಷ ಮುಂಗಾರು ಪೂರ್ವ ಮಳೆ ಕೃಷಿಕರ ಪಾಲಿಗೆ ನವ ಚೈತನ್ಯ ತುಂಬಿದೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ’ ಎಂದು ಕೃಷಿ ಇಲಾಖೆಯ ಎ.ವೆಂಕಟರಂಗಶೆಟ್ಟಿ ಅವರು ಹೇಳಿದರು.

‘ಆರ್ದ್ರಾ ಮಳೆ ನಕ್ಷತ್ರಕ್ಕೆ ಅದರದೇ ಆದ ವೈಶಿಷ್ಟ್ಯ ಇದೆ. ಗ್ರಾಮೀಣ ಭಾಗದಲ್ಲಿ ’ಆರ್ದ್ರಾ ಇಲ್ಲವಾದರೆ ದರಿದ್ರ’ ಎನ್ನುವ ಮಾತು ಜನ ಜನಿತವಾಗಿದೆ. ಈ ಸಮಯದಲ್ಲಿ ಮುರಿದ ಮರದ ಗೆಲ್ಲುಗಳು ಆರ್ದ್ರಾ ಮಳೆ ಕಂಡೊಡನೆ ಚಿಗುರುತ್ತವೆ. ವರ್ಷದ ಬೆಳೆ ಈ ಮಳೆಯ ಕಾರಣದಿಂದ ನಿರ್ಧಾರ ಆಗುತ್ತದೆ‌. ಹೀಗಾಗಿ, ಈ ಸಮಯದಲ್ಲಿ ಕೃಷಿ ಚಟುವಟಿಕೆ ಹೆಚ್ಚು ಎಂದು ಕೆಸ್ತೂರಿನ ಸುಬ್ಬಪ್ಪ ಅವರು ತಿಳಿಸಿದರು.

ಮಳೆಯ ನಿರೀಕ್ಷೆಯಲ್ಲಿ...:ಘಟ್ಟದ ಸೆರಗಿನಲ್ಲಿ ಇರುವ ಹಲವು ಪರ್ವತ ಶ್ರೇಣಿಗಳು ಹಚ್ಚ ಹಸಿರಿನ ಹೊದಿಕೆಯಿಂದ ನಳನಳಿಸುತ್ತಿವೆ. ಆದರೆ,ಕಣಿವೆ, ದಟ್ಟ ಕಾನನದಿಂದ ಉಕ್ಕುತ್ತಿದ್ದ ತೊರೆಗಳು, ಝರಿಗಳು ಹಾಗೂ ಜಲಮೂಲಗಳಲ್ಲಿ ಇನ್ನೂ ನೀರಿನ ಸೆಲೆ ಉಂಟಾಗಿಲ್ಲ. ಭೂ ಒಡಲೊಳಗಿರುವ ಝರಿ ಜಲಪಾತಗಳು ತಮ್ಮ ವೈಭವ ಮೆರೆಸಲು ಮುಂಗಾರಿನ ರಭಸವಾದ ಮಳೆಯ ಆರ್ಭಟದ ನಿರೀಕ್ಷೆಯಲ್ಲಿ ಇದ್ದರೆ, ಕೆರೆ, ಕಟ್ಟೆಗಳು ಮಳೆ ಋತುವನ್ನು ಆಹ್ವಾನಿಸುತ್ತಿವೆ.

ಜಿಲ್ಲೆಯಲ್ಲಿ ಮುಂದುವರಿದ ಮಳೆ

ಈ ಮಧ್ಯೆ, ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರವೂ ಮಳೆಯಾಗಿದೆ. ಮೂರ್ನಾಲ್ಕು ದಿನಗಳಿಂದ ಪ್ರತಿ ದಿನ ಮಧ್ಯಾಹ್ನದ ಮೇಲೆ ಮಳೆಯಾಗುತ್ತಿದೆ.

ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಸೇರಿದಂತೆ ಸಾಧಾರಣ ಗಾಳಿ ಮಳೆಯಾಗಿದೆ.

ಗುರುವಾರ ಬೆಳಿಗ್ಗೆ 8.30ರಿಂದ ಶುಕ್ರವಾರ ಬೆಳಿಗ್ಗೆ 8.30ವರೆಗಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 0.9 ಸೆಂ.ಮೀ ಮಳೆಯಾಗಿದೆ. ಕೊಳ್ಳೇಗಾಲದಲ್ಲಿ ಅತಿ ಹೆಚ್ಚು ಅಂದರೆ 1.8 ಸೆಂ.ಮೀ ಮಳೆಯಾಗಿದೆ. ಹನೂರಿನಲ್ಲಿ 1.2 ಸೆಂ.ಮೀ ಮಳೆ ಸುರಿದಿದೆ.ಕೊಳ್ಳೇಗಾಲ ಹೋಬಳಿಯಲ್ಲಿ 2.6 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.