ADVERTISEMENT

ಚಾಮರಾಜನಗರ | ಮುಂಗಾರು ಮಳೆ ಕೊರತೆ: ಬಿತ್ತನೆ ಹಿನ್ನಡೆ

1,07,914 ಹೆಕ್ಟೇರ್ ಬಿತ್ತನೆ ಗುರಿಗೆ 78,695 ಹೆಕ್ಟೇರ್‌ ಬಿತ್ತನೆ; ಶೇ 27.08 ಕುಸಿತ; ಹಿಂಗಾರು ನಿರೀಕ್ಷೆಯಲ್ಲಿ ಅನ್ನದಾತ

ಬಾಲಚಂದ್ರ ಎಚ್.
Published 21 ಸೆಪ್ಟೆಂಬರ್ 2025, 4:31 IST
Last Updated 21 ಸೆಪ್ಟೆಂಬರ್ 2025, 4:31 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗಿರುವ ಪರಿಣಾಮ ಬಿತ್ತನೆ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ 1,07,914 ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 78,695 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು ಶೇ 72.92ರಷ್ಟು ಗುರಿ ಸಾಧನೆಯಾಗಿದೆ. ಶೇ ನಿಗದಿತ ಅವಧಿಗೆ ಮಳೆ ಬೀಳದ ಪರಿಣಾಮ ಶೇ 27.08ರಷ್ಟು ಭೂಮಿಯಲ್ಲಿ ಬಿತ್ತನೆ ನಡೆದಿಲ್ಲ.

ಜಿಲ್ಲೆ ಶೇ 51ರಷ್ಟು ಅರಣ್ಯ ಭೂಮಿ ಹೊಂದಿದ್ದರೂ ಮಳೆಯ ಪ್ರಮಾಣವು ಮಾನ್ಸೂನ್ ಮಾರುತದ ಪ್ರಭಾವಕ್ಕೊಳಪಟ್ಟಿರುವುದು ಹಾಗೂ ಮಳೆ ನೆರಳಿನ ಭೌಗೋಳಿಕ ಪರಿಸರ ಹೊಂದಿರುವುದು ಮಳೆಯ ಕೊರತೆಗೆ ಕಾರಣ. ಜಿಲ್ಲೆಯ ಬಹುಭಾಗ ಭೂಮಿ ಮಳೆಯಾಶ್ರಿತ ಕೃಷಿಯಾಗಿದ್ದು ನೈರುತ್ಯ ಹಾಗೂ ಈಶಾನ್ಯ ಮಾನ್ಸೂನ್ ಮಾರುತಗಳ ಪ್ರಭಾವ ಹೆಚ್ಚಾದರೆ ಮಾತ್ರ ಬಿರುಸು ಮಳೆಯಾಗಿ ನಿರೀಕ್ಷೆಯಷ್ಟು ಬಿತ್ತನೆ ಚಟುವಟಿಕೆಗಳು ನಡೆಯುತ್ತವೆ.

ಶೇ 11.3ರಷ್ಟು ಮಳೆ ಕೊರತೆ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಜ.1ರಿಂದ ಸೆ.17ರವರೆಗೂ ಸರಾಸರಿ 451 ಮಿ.ಮೀ ವಾಡಿಕೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ 400 ಮಿ.ಮೀ ಮಾತ್ರ ಮಳೆ ಸುರಿದಿದ್ದು ಶೇ 11.3ರಷ್ಟು ಕೊರತೆ ಎದುರಾಗಿದೆ. ಯಳಂದೂರು ತಾಲ್ಲೂಕಿನಲ್ಲಿ 501 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 361 ಮಿ.ಮೀ ಮಾತ್ರ ಮಳೆ ಸುರಿದಿದ್ದು ಶೇ 28ರಷ್ಟು ಕೊರತೆಯಾಗಿದೆ. ಜಿಲ್ಲೆಯಲ್ಲೇ ಅತಿ ಕಡಿಮೆ ಪ್ರಮಾಣದ ಮಳೆಯಾಗಿದೆ.

ADVERTISEMENT

ಕೊಳ್ಳೇಗಾಲ ತಾಲ್ಲೂಕಿನಲ್ಲಿ ವಾಡಿಕೆ 487 ಮಿ.ಮೀ ಮಳೆಗೆ ಪ್ರತಿಯಾಗಿ 396 ಮಿ.ಮೀ (ಶೇ 18.8 ಕೊರತೆ), ಹನೂರಿನಲ್ಲಿ ವಾಡಿಕೆ 407 ಮಿ.ಮೀ ಮಳೆಗೆ ಪ್ರತಿಯಾಗಿ 343 ಮಿ.ಮೀ (ಶೇ 15.8 ಕೊರತೆ) ಚಾಮರಾಜನಗರದಲ್ಲಿ 434 ಮಿ.ಮೀ ವಾಡಿಕೆ ಮಳೆಗೆ 391 ಮಿ.ಮೀ (ಶೇ 90.8 ಮಿ.ಮೀ ಕೊರತೆ) ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮಾತ್ರ ವಾಡಿಕೆ 438 ಮಿ.ಮೀ ಮಳೆಗೆ ಪ್ರತಿಯಾಗಿ 525 ಮಿ.ಮೀ ಮಳೆಯಾಗಿದ್ದು ಶೇ 20ರಷ್ಟು ಹೆಚ್ಚು ಮಳೆ ಸುರಿದಿದೆ.

ನಿಗದಿತ ಸಮಯಕ್ಕೆ ಮಳೆ ಬೀಳದ ಪರಿಣಾಮ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಸಂಪೂರ್ಣ ಮಳೆಯಾಶ್ರಿತ ಭೂಮಿ ಹೊಂದಿರುವ ಹನೂರು ತಾಲ್ಲೂಕಿನಲ್ಲಿ 23,335 ಹೆಕ್ಟೇರ್ ಗುರಿಗೆ ಪ್ರತಿಯಾಗಿ 12167 ಹೆಕ್ಟೇರ್‌ ಬಿತ್ತನೆಯಾಗಿದ್ದು ಶೇ 52.14ರಷ್ಟು ಪ್ರಗತಿಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 20,765 ಹೆಕ್ಟೇರ್ ಬಿತ್ತನೆ ಗುರಿಗೆ 13,982 ಹೆಕ್ಟೇರ್ ಬಿತ್ತನೆ ನಡೆದಿದ್ದು ಶೇ 67.33, ಗುಂಡ್ಲುಪೇಟೆಯಲ್ಲಿ 40,144 ಹೆಕ್ಟೇರ್‌ ಗುರಿಗೆ 32,296 ಹೆಕ್ಟೇರ್ ಬಿತ್ತನೆಯಾಗಿದ್ದು ಶೇ 80.45 ಗುರಿ ಸಾಧನೆ, ಯಳಂದೂರು ತಾಲ್ಲೂಕಿನಲ್ಲಿ 9,800 ಹೆಕ್ಟೇರ್‌ ಗುರಿಗೆ 8,178 ಹೆಕ್ಟೇರ್ ಬಿತ್ತನೆಯಾಗಿದ್ದು ಶೇ 83.45 ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 13,870 ಹೆಕ್ಟೇರ್ ಗುರಿಗೆ 12,072 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 

ನಿರೀಕ್ಷಿತ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆಯಾಗದೆ ಏಕದಳ ದಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು ಹಾಗೂ ವಾಣಿಜ್ಯ ಬೆಳೆಗಳ ಬಿತ್ತನೆ ಪ್ರಮಾಣ ಇಳಿಮುಖವಾಗಿತ್ತು. ಹತ್ತಿ ಬಿತ್ತನೆ ಕ್ಷೇತ್ರ ಭಾರಿ ಪ್ರಮಾಣದಲ್ಲಿ ಕುಸಿತವಾಗಿತ್ತು. ಚಾಮರಾಜಗರದಲ್ಲಿ 365 ಹೆಕ್ಟೇರ್‌ ಗುರಿಗೆ ಕೇವಲ 26, ಗುಂಡ್ಲುಪೇಟೆಯಲ್ಲಿ 7,860 ಹೆಕ್ಟೇರ್ ಗುರಿಗೆ 3,023, ಹನೂರಿನಲ್ಲಿ 450 ಹೆಕ್ಟೇರ್‌ ಗುರಿಗೆ 12 ಹೆಕ್ಟೇರ್ ಮಾತ್ರ ಹತ್ತಿ ಬಿತ್ತನೆ ಮಾಡಲಾಗಿತ್ತು.

ತೋಟಗಾರಿಕಾ ಬೆಳೆ: ‘ಜಿಲ್ಲೆಯಲ್ಲಿ ಹೆಕ್ಟೇರ್ ತೋಟಗಾರಿಕಾ ಬೆಳೆ ಇದ್ದು ತೆಂಗು 12,500, ಅರಿಶಿನ 8,500, 12,771, ಟೊಮೆಟೊ 4,000, ಸಾಂಬಾರ್ ಈರುಳ್ಳಿ 4200 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಾಗುತ್ತದೆ. ತೋಟಗಾರಿಕಾ ಬೆಳೆಗಳು ಸಂಪೂರ್ಣ ನೀರಾವರಿ ಮೂಲಗಳ ಆಶ್ರಿತವಾಗಿರುವುದರಿಂದ ಬಿತ್ತನೆಗೆ ಹಿನ್ನಡೆಯಾಗಿಲ್ಲ. ಮಳೆ ಕೊರತೆಯಿಂದ ತೆಂಗಿನ ನಾಟಿ ಶೇ 30ರಷ್ಟು ಕುಸಿತವಾಗಿರಬಹುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಲ್‌.ಶಿವಪ್ರಸಾದ್ ಮಾಹಿತಿ ನೀಡಿದರು.

‘ಕೈಕೊಟ್ಟ ಪೂರ್ವ ಮುಂಗಾರು’

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಹತ್ತಿ ಬಿತ್ತನೆ ಕ್ಷೇತ್ರ ಇಳಿಮುಖವಾಯಿತು. ಬಳಿಕ ನಿಗಧಿತ ಸಮಯಕ್ಕೆ ಮಳೆಯಾಗದೆ ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಯಿತು. ಇತರೆ ಜಿಲ್ಲೆಗಳಲ್ಲಿ ಆಗಸ್ಟ್‌ ಅಂತ್ಯಕ್ಕೆ ಬಿತ್ತನೆ ಬೀಜ ವಿತರಣೆ ನಿಲ್ಲಿಸಿದರೆ ಮಳೆ ಕೊರತೆಯ ಪರಿಣಾಮ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಸೆಪ್ಟೆಂಬರ್‌ನಲ್ಲೂ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬೀಜ ಖರೀದಿಸಿರುವ ರೈತರು ಹದ ಮಳೆಗೆ ಕಾಯುತ್ತಿದ್ದು ಸೆಪ್ಟೆಂಬರ್ ಅಂತ್ಯದವರೆಗೂ ಮುಂಗಾರು ಬಿತ್ತನೆ ನಡೆಯುತ್ತದೆ. ಹಿಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದ್ದು ಹುರುಳಿ ಹಸಿಕಡಲೆ ಬಿತ್ತನೆ ಚುರುಕಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಬಿದ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.