ADVERTISEMENT

ಹಬ್ಬದ ರಜೆ: ಬಂಡೀಪುರಕ್ಕೆ ಪ್ರವಾಸಿಗರ ಲಗ್ಗೆ

ಮೂರು ದಿನಗಳಲ್ಲಿ 1,500ಕ್ಕೂ ಹೆಚ್ಚು ಮಂದಿ ಭೇಟಿ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಜನರ ದಂಡು

ಮಲ್ಲೇಶ ಎಂ.
Published 27 ಅಕ್ಟೋಬರ್ 2020, 19:30 IST
Last Updated 27 ಅಕ್ಟೋಬರ್ 2020, 19:30 IST
ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಬಸ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು
ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಬಸ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು   

ಗುಂಡ್ಲುಪೇಟೆ: ಆಯುಧ ಪೂಜೆ, ವಿಜಯದಶಮಿ ರಜಾ ದಿನಗಳಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ.

ಕೋವಿಡ್‌–19 ಹಾವಳಿ ಆರಂಭಗೊಂಡ ನಂತರ ಇಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿರುವುದು ಇದೇ ಮೊದಲು. ಮೂರು ದಿನಗಳ ಅವಧಿಯಲ್ಲಿ 1,500ಕ್ಕೂ ಹೆಚ್ಚು ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

‘ಕೋವಿಡ್‌ ಆತಂಕದಿಂದ ಸಫಾರಿಗೆ ಹೆಚ್ಚು ಜನರು ಬರುತ್ತಿರಲಿಲ್ಲ. ಇದರಿಂದಾಗಿ ಆರೇಳು ತಿಂಗಳಿನಿಂದ ಆದಾಯದಲ್ಲಿ ಗಣನೀಯ ಕುಸಿತ ಕಂಡಿತ್ತು. ದಸರಾ ಸಂದರ್ಭದಲ್ಲಿ ಸಾಲು ಸಾಲು ರಜೆ ಇದ್ದುದರಿಂದ ಪ್ರವಾಸಿಗರು ಕೋವಿಡ್‌ ನಡುವೆಯೇ ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಲು ಬರುತ್ತಿದ್ದಾರೆ. ಮೂರು ದಿನಗಳಲ್ಲಿ ಅಂದಾಜು ₹8 ಲಕ್ಷ ಆದಾಯ ಬಂದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಸಫಾರಿಗೆ ಹೆಚ್ಚು ಪ್ರವಾಸಿಗರು ಬರುತ್ತಿರುವ ಕಾರಣದಿಂದ ಸುತ್ತಮುತ್ತಲಿನ ಖಾಸಗಿ ಹೋಟೆಲ್, ರೆಸಾರ್ಟ್‌ಗಳಲ್ಲೂ ಉತ್ತಮ ವಹಿವಾಟು ನಡೆಯುತ್ತಿದೆ. ರಸ್ತೆಯ ಬದಿ ವ್ಯಾಪಾರಿಗಳಿಗೂ ಒಳ್ಳೆಯ ವ್ಯಾಪಾರವಾಗುತ್ತಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಬೆಟ್ಟದಲ್ಲೂ ಜನ ಜಂಗುಳಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಇರುವ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಾಲ್ಕು ದಿನಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.

ಬೆಟ್ಟಕ್ಕೆ ಹೋಗುವುದಕ್ಕಾಗಿ ತಪ್ಪಲಿನ ಪ್ರವೇಶದ್ವಾರದಲ್ಲಿ ಜನರು ಬಸ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಪ್ರವಾಸಿಗರಿಗೆ ಸ್ವಲ್ಪ ತೊಂದರೆಯಾಯಿತು.

‘ಆರೇಳು ತಿಂಗಳುಗಳಿಂದ ಕೊರೊನಾ ವೈರಸ್‌ ಭಯದಿಂದ ಬೆಟ್ಟಕ್ಕೆ ಬರುತ್ತಿದ್ದವರ ಸಂಖ್ಯೆ ಕಡಿಮೆ ಇತ್ತು. ಈಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಕಾರಣದಿಂದ ಪ್ರವಾಸಿಗರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ’ ಎಂದು ಬೆಟ್ಟದಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕ ಗೋಪಾಲಕೃಷ್ಣ ಭಟ್ಟ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಾರ ಹೆಚ್ಚು ರಜೆಗಳು ಇದ್ದುದರಿಂದ ಪ್ರವಾಸಿಗರು ಹೆಚ್ಚಾಗಿದ್ದಾರೆ. ವಿಜಯದಶಮಿಯ ಒಂದೇ ದಿನ ಎರಡು ಲಕ್ಷ ರೂಪಾಯಿಗಳಷ್ಟು ಆದಾಯ ಬಂದಿದೆ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.