ADVERTISEMENT

ಚಾಮರಾಜನಗರ | ಇಟ್ಟಿಗೆ ದರ ಗಗನಕ್ಕೆ: ಮನೆ ನಿರ್ಮಾಣಕ್ಕೆ ಹೊಡೆತ

ಉತ್ಪಾದನಾ ವೆಚ್ಚ ಅಧಿಕ: ಇಟ್ಟಿಗೆ ಮಾಲೀಕರ ಅಳಲು

ಸೂರ್ಯನಾರಾಯಣ ವಿ
Published 29 ಡಿಸೆಂಬರ್ 2022, 19:30 IST
Last Updated 29 ಡಿಸೆಂಬರ್ 2022, 19:30 IST
ಚಾಮರಾಜನಗರದ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಒಣಗಲು ಬಿಟ್ಟಿರುವ ಇಟ್ಟಿಗೆಗಳು
ಚಾಮರಾಜನಗರದ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಒಣಗಲು ಬಿಟ್ಟಿರುವ ಇಟ್ಟಿಗೆಗಳು   

ಚಾಮರಾಜನಗರ/ಮೈಸೂರು/ಮಂಡ್ಯ: ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಗಳಲ್ಲಿ ತಿಂಗಳಿನಿಂದೀಚೆಗೆ ಮಣ್ಣಿನ ಇಟ್ಟಿಗೆಗಳ ದರ ಗಗನಮುಖಿಯಾಗಿದ್ದು, ಮನೆಗಳ ನಿರ್ಮಾಣದ ಮೇಲೆ ಪ್ರಭಾವ ಬೀರಿದೆ.

ಇಟ್ಟಿಗೆ ಸುಡಲು ಬಳಸುವ ಭತ್ತದ ಹೊಟ್ಟು, ಕಲ್ಲಿದ್ದಲು ಬೆಲೆ ಏರಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಿದ್ದು, ಕೆಲವೇ ವಾರದ ಅವಧಿಯಲ್ಲಿ ಇಟ್ಟಿಗೆಯೊಂದರ ಬೆಲೆ ₹ 4ರಿಂದ ₹ 5 ಜಾಸ್ತಿಯಾಗಿದ್ದು, ಉತ್ಪಾದನೆ ವೆಚ್ಚ ಜಾಸ್ತಿಯಾಗಿರುವುದರಿಂದ ಜಿಲ್ಲೆಯಲ್ಲಿ ಹಲವು ಇಟ್ಟಿಗೆ ಕಾರ್ಖಾನೆಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಇನ್ನೂ ಹಲವು ಕಾರ್ಖಾನೆಗಳು ಉತ್ಪಾದನೆ ಪ್ರಮಾಣ ಕಡಿಮೆ ಮಾಡಿವೆ.

ಇಟ್ಟಿಗೆ ಬೆಲೆ ಹೆಚ್ಚಳದಿಂದ ಕಂಗೆಟ್ಟಿರುವ ಗ್ರಾಹಕರು ಮನೆ ಹಾಗೂ ಇತರ ಕಟ್ಟಡ ನಿರ್ಮಾಣ ಯೋಜನೆಯನ್ನು ಮುಂದೂಡಿದ್ದಾರೆ. ಕೆಲವರು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

ADVERTISEMENT

ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಇಟ್ಟಿಗೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಬೇಡಿಕೆ ಇದೆ. ಚಾಮರಾಜನಗರ ಜಿಲ್ಲೆಯಿಂದ ತಮಿಳುನಾಡಿಗೂ ಇಟ್ಟಿಗೆ ರವಾನೆಯಾಗುತ್ತದೆ. ಚಾಮರಾಜನಗರ ಜಿಲ್ಲೆಯಲ್ಲೇ 100ಕ್ಕೂ ಹೆಚ್ಚು ಇಟ್ಟಿಗೆ ಕಾರ್ಖಾನೆಗಳಿವೆ. ತಿಂಗಳ ಹಿಂದೆ ಒಂದು ಇಟ್ಟಿಗೆ ದರ ₹ 6.50ರಿಂದ ₹ 7ರವರೆಗೆ ಇತ್ತು. ಈಗ ₹ 10.50ರಿಂದ ₹11ರವರೆಗೆ ಆಗಿದೆ.

ಹಾಸನ ಜಿಲ್ಲೆಯಲ್ಲಿ ಇಟ್ಟಿಗೆ ಅಭಾವ ಉಂಟಾಗಿಲ್ಲ. ಆದರೆ, ದರದಲ್ಲಿ ಏರಿಕೆಯಾಗಿದೆ. ಕೆಲ ದಿನದ ಹಿಂದೆ ₹ 7.50ರಿಂದ ₹ 8ಕ್ಕೆ ಇಟ್ಟಿಗೆ ದೊರೆಯುತ್ತಿತ್ತು. ಈಗ ₹ 9 ಆಗಿದೆ.

‘ಎರಡು ಕೊಠಡಿ ನಿರ್ಮಿಸುವುದಕ್ಕಾಗಿ ಮೂರು ವಾರದ ಹಿಂದೆ ಇಟ್ಟಿಗೆ ಖರೀದಿಸಿದೆ. ಒಂದು ಇಟ್ಟಿಗೆಗೆ ₹ 10 ಅಸಲು ಬಿತ್ತು. ಈಗ ₹ 10.75 ಆಗಿದೆ. ಬೆಲೆ ಹೆಚ್ಚಳವಾಗಿದ್ದರಿಂದ ಕೊಠಡಿಗಳ ನಿರ್ಮಾಣ ವೆಚ್ಚ ನಿರೀಕ್ಷೆ ಮೀರಿದೆ’ ಎಂದು ಚಾಮರಾಜನಗರದ ಪುರುಷೋತ್ತಮ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆ ಹೆಚ್ಚಳ:ಮೈಸೂರು, ಚಾಮರಾಜನಗರ ಭಾಗದಲ್ಲಿ‌ ಮಣ್ಣಿನ ಇಟ್ಟಿಗೆಗೆ ಕೊರತೆಯಾಗಿರುವ ಕಾರಣ ಮಂಡ್ಯದ ಗ್ರಾಮೀಣ ಪ್ರದೇಶದಲ್ಲಿರುವ ಇಟ್ಟಿಗೆ ಕಾರ್ಖಾನೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಗ್ರಾಮೀಣ ಭಾಗದಲ್ಲೇ ಹೆಚ್ಚು ಕಾರ್ಖಾನೆಗಳಿವೆ. ಶ್ರೀರಂಗಪಟ್ಟಣ ಭಾಗದಿಂದ ಮೈಸೂರಿಗೆ ಹೆಚ್ಚು ಇಟ್ಟಿಗೆ ರವಾನೆಯಾಗುತ್ತಿದೆ. ಪ್ರತಿ ಇಟ್ಟಿಗೆ ₹ 10.50ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ₹ 6.50 ಇತ್ತು.

ಅಸಲು ಬರುವುದಿಲ್ಲ: ‘ಈಗಾಗಲೇ ಕೆಂಪು ಮಣ್ಣಿನ ಕೊರತೆ ಎದುರಿಸುತ್ತಿದ್ದೇವೆ. ಅದರೊಂದಿಗೆ ಈಗ ಭತ್ತದ ಹೊಟ್ಟು ದುಬಾರಿಯಾಗಿದೆ. ₹6,000–₹7000ಕ್ಕೆ (ಪ್ರತಿ ಟನ್‌ಗೆ) ಸಿಗುತ್ತಿದ್ದ ಭತ್ತದ ಹೊಟ್ಟಿಗೆ ಈಗ ₹ 10,500–₹ 12 ಸಾವಿರ ಹೇಳುತ್ತಿದ್ದಾರೆ. ಈಗಿನ ತಯಾರಿಕಾ ವೆಚ್ಚದಲ್ಲಿ ಒಂದು ಇಟ್ಟಿಗೆಗೆ ₹ 12 ನಿಗದಿ ಮಾಡಿದರೂ ನಮಗೆ ಏನೂ ಲಾಭವಾಗುವುದಿಲ್ಲ’ ಎಂದು ಚಾಮರಾಜನಗರದ ಇಟ್ಟಿಗೆ ತಯಾರಕ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ದಿನ 4,000 ಇಟ್ಟಿಗೆ ಮಾಡುತ್ತಿದ್ದೆವು. ಈಗ 700ರಷ್ಟು ಮಾಡುತ್ತಿದ್ದೇವೆ. ತಿಂಗಳಿಂದ ಇಟ್ಟಿಗೆ ಗೂಡಿಗೆ ಬೆಂಕಿಯನ್ನೇ ಹಾಕಿಲ್ಲ. ಸೌದೆ ಉರಿಸಿ ಮಾಡಬಹುದು. ಆದರೆ ಅದು, ಭತ್ತದ ಹೊಟ್ಟಿನ ಉರಿಯಲ್ಲಿ ಸುಟ್ಟಟ್ಟು ಗುಣಮಟ್ಟ ಬರುವುದಿಲ್ಲ’ ಎಂದು ವಿವರಿಸಿದರು.

‘ಮೂರು ವರ್ಷಗಳಿಂದ ಸರ್ಕಾರದ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ನೀಡಿರಲಿಲ್ಲ. ಈ ವರ್ಷ ಇಂದಿರಾ ಆವಾಸ್‌, ರಾಜೀವ್‌ ಆವಾಸ್‌ ಯೋಜನೆಯಡಿ ಮನೆಗಳು ಮಂಜೂರಾಗಿದ್ದು, ನಿರ್ಮಾಣ ನಡೆದಿದೆ. ಅಕಾಲಿಕ ಮಳೆಯಾಗುತ್ತಿದ್ದು, ಇಟ್ಟಿಗೆ ಒಣಗಿಸುವುದು ಕೂಡ ಸವಾಲಿನಿಂದ ಕೂಡಿದೆ. ಈ ಎಲ್ಲಾ ಕಾರಣದಿಂದ, ಬೇಡಿಕೆಗೆ ತಕ್ಕಂತೆ ಇಟ್ಟಿಗೆ ಪೂರೈಸುವುದು ಸವಾಲಿನ ವಿಚಾರ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ’ ಎಂದು ಮೈಸೂರು ಜಿಲ್ಲೆಯಬಿಳಿಕೆರೆ ಹೋಬಳಿಯಲ್ಲಿ ಇಟ್ಟಿಗೆ ಫ್ಯಾಕ್ಟರಿ ನಡೆಸುತ್ತಿರುವ ಕುಮಾರ್‌ ತಿಳಿಸಿದರು.

ಕ್ರಷರ್‌ ಬಂದ್‌: ಎಂ.ಸ್ಯಾಂಡ್‌, ಜಲ್ಲಿ ಕೊರತೆ ಆತಂಕ
ಎರಡು ಬಾರಿ ರಾಜಧನ ಪಡೆಯುವುದನ್ನು ಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಕ್ರಷರ್‌ ಮಾಲೀಕರು ಡಿ.22ರಿಂದ ಕ್ರಷರ್‌ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಎಂ.ಸ್ಯಾಂಡ್‌, ಜಲ್ಲಿ, ಸೈಜು ಕಲ್ಲುಗಳ ಕೊರತೆ ಉಂಟಾಗುವ ಆತಂಕ ಎದುರಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಡಗು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಕಟ್ಟಡ ಸಾಮಗ್ರಿಗಳ ಅಭಾವ ತಲೆದೋರಲು ಆರಂಭಿಸಿದೆ. ‘ಕ್ರಷರ್‌ಗಳು ಬಂದ್‌ ಆಗಿರುವುದರಿಂದ ನಷ್ಟವಾಗಿದೆ’ ಎಂದು ಲಾರಿ ಚಾಲಕರು, ಮಾಲೀಕರ ಸಂಘಗಳು ಹೇಳಿವೆ.

*
ಇಟ್ಟಿಗೆ ಧಾರಣೆ ₹6ರಿಂದ ₹8.50ಕ್ಕೆ ಏರಿಕೆಯಾಗಿರುವ ಕಾರಣ, ನಮ್ಮ ಮನೆ ನಿರ್ಮಾಣ ವೆಚ್ಚದಲ್ಲಿ ಶೇ 20ರಷ್ಟು ಹೆಚ್ಚು ಖರ್ಚಾಗಲಿದೆ
-ಬಸವ ಹಿರೇಮಠ, ಕುವೆಂಪು ನಗರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.