ADVERTISEMENT

ಮೂಡಲಪಾಯ ಯಕ್ಷಗಾನ ಭಾಗವತ ಬಂಗಾರ ಆಚಾರ್‌ ನಿಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:41 IST
Last Updated 29 ಸೆಪ್ಟೆಂಬರ್ 2022, 6:41 IST
ಬಂಗಾರ ಆಚಾರ್‌
ಬಂಗಾರ ಆಚಾರ್‌   

ಚಾಮರಾಜನಗರ: ಮೂಡಲಪಾಯ ಯಕ್ಷಗಾನ ಭಾಗವತ ಬಂಗಾರ ಆಚಾರ್‌ (88) ಅವರು ಜಿಲ್ಲೆಯಗುಂಡ್ಲುಪೇಟೆ ತಾಲ್ಲೂಕಿನಕಬ್ಬಳ್ಳಿಯ ನಿವಾಸದಲ್ಲಿ ‌ಬುಧವಾರ ತಡರಾತ್ರಿ ನಿಧನರಾದರು.

ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೂಡಲಪಾಯ ಯಕ್ಷಗಾನ ಪ್ರಕಾರದಲ್ಲಿ ಭಾಗವತರಾಗಿ ಗುರುತಿಸಿಕೊಂಡಿದ್ದ ಅವರು ಮದ್ದಳೆ ವಾದಕರೂ ಆಗಿದ್ದರು. ಗೊಂಬೆ ಕುಣಿಸುವುದರಲ್ಲೂ ಪರಿಣತಿ ಹೊಂದಿದ್ದರು.

ಯಕ್ಷಗಾನ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಅವರಿಗೆ 2019ರಲ್ಲಿ ಪ್ರಾರ್ತಿಸುಬ್ಬ ಪ್ರಶಸ್ತಿ ನೀಡಿ ಗೌರವಿಸಿತ್ತು. 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

ADVERTISEMENT

ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಮಗಳು ಇದ್ದಾರೆ. ಗ್ರಾಮದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.

ಕಲಾ ಸೇವಕರು:ಬಂಗಾರ ಆಚಾರ್‌ ಅವರದ್ದು ಯಕ್ಷಗಾನ ಕಲಾ ಸೇವೆಯ ಕುಟುಂಬ. ತಂದೆ ತಿಮ್ಮಾಚಾರ್‌ ಅವರಿಂದ ಯಕ್ಷಗಾನ ಕಲಿತಿದ್ದರು.

ಕಬ್ಬಳ್ಳಿಯಲ್ಲಿ ಪ್ರತಿ ವರ್ಷ ಸ್ಥಳೀಯರಿಗೆ ತರಬೇತಿ ಕೊಟ್ಟು ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡು ಬಂದಿದ್ದರು. ಮಗ ಮತ್ತು ಮೊಮ್ಮಕ್ಕಳು ಹಾಗೂ ಆಸಕ್ತಿ ಇರುವವರಿಗೂ ‌ಕಲೆಯನ್ನು ಧಾರೆ ಎರೆದಿದ್ದರು.

2020ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದ ಬಂಗಾರ ಆಚಾರ್‌, ‘ಕಲೆಗೆ ಅದಕ್ಕೆ ಆದ ಗೌರವ ಇದೆ. ಅದಕ್ಕೆ ಇರುವ ಬೆಲೆಯಿಂದಲೇ ಈ ವಯಸ್ಸಿನಲ್ಲೂ ಗೌರವ ಸಿಕ್ಕಿದೆ. ಜನರಲ್ಲಿ ಕಲೆಗಳ ಬಗೆಗೆ ಹಾಗೂ ಅವುಗಳನ್ನು ಕಲಿಯುವ ಆಸಕ್ತಿ ಕಡಿಮೆಯಾಗಿದೆ. ಹಾಗಿದ್ದರೂ, ಕಲೆಗೆ ಎಂದೂ ಸಾವಿಲ್ಲ.ಆರ್ಥಿಕ ಸಂಕಷ್ಟದಿಂದಾಗಿ ಕಲೆಯಿಂದ ದೂರವಾಗುವವರು ಇದ್ದಾರೆ. ಕಲೆಯಲ್ಲಿ ತೊಡಗಿಸಿಕೊಂಡಿರುವವರನ್ನು ಸರ್ಕಾರಗಳು ಪ್ರೋತ್ಸಾಹಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.