
ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಿಂದ ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಪ್ರತಿನಿತ್ಯ ಸಂಕಟ ಅನುಭವಿಸುವಂತಾಗಿದೆ.
ಹದಗೆಟ್ಟಿರುವ ರಸ್ತೆಯ ಸ್ಥಿತಿ ನೋಡಿದರೆ ರಸ್ತೆಗಳಲ್ಲಿ ಹೊಂಡಗಳು ಇವೆಯೋ, ಹೊಂಡಗಳಲ್ಲಿ ರಸ್ತೆ ಇದೆಯೋ ಎಂಬ ಅನುಮಾನ ಕಾಡದಿರದು. ಅಡಿಯುದ್ದದ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನಗಳು ಪ್ರಯಾಸದಿಂದ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಚದುರಿ ಬಿದ್ದಿರುವ ಕಲ್ಲುಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಸವಾರರು ನರಕ ಯಾತನೆ ಅನುಭವಿಸಬೇಕು. ಇನ್ನೂ ಗ್ರಾಮಸ್ಥರ ಸ್ಥಿತಿಯೂ ಭಿನ್ನವಾಗಿಲ್ಲ. ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹೆದ್ದಾರಿ ನಿರ್ವಹಣೆಯ ಹೊಣೆ ಹೊತ್ತಿರುವವರು ಕನಿಷ್ಠ ಗುಂಡಿಗಳನ್ನು ತಾತ್ಕಾಲಿವಾಗಿಯಾದರೂ ಮುಚ್ಚಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದ ಬಗ್ಗೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಗುಣಮಟ್ಟದ ರಸ್ತೆ ಮಾಡಿಕೊಡುವಲ್ಲಿ ವಿಫಲವಾಗಿರುವ ಜನಪ್ರತಿನಿಧಿಗಳಿಗೆ ಮುಂದೆ ತಕ್ಕ ಪಾಠ ಕಲಿಸುವುದಾಗಿ ಎಂದು ಮುಳ್ಳೂರು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸುಮಾರು ಮೂರು ಕಿ.ಮೀ ಉದ್ದದ ಗುಂಡಿಬಿದ್ದಿರುವ ರಸ್ತೆಯಲ್ಲಿ ಬೈಕ್, ಕಾರು, ಲಾರಿ ಸೇರಿದಂತೆ ಇತರೆ ವಾಹನಗಳು ಸರ್ಕಸ್ ಮಾಡುತ್ತ ಸಂಚರಿಸಬೇಕಾಗಿದೆ. ಹಲವು ಬಾರಿ ಗುಂಡಿಗಳನ್ನು ತಪ್ಪಿಸಲು ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆದಿವೆ. ಕೆಲವು ಬಾರಿ ಎದುರಿಗೆ ಬರುವ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ ಎನ್ನುತ್ತಾರೆ ವಾಹನ ಸವಾರರು.
ರಸ್ಯೆ ಹಲವು ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮ ವಹಿಸದ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಇದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಕೊಳ್ಳೇಗಾಲಕ್ಕೆ ಹಾಗೂ ಮೈಸೂರಿಗೆ ಸಂಚರಿಸುತ್ತಾರೆ. ಅಡಿ ಆಳದ ಗುಂಡಿಯಲ್ಲಿ ಸಂಚರಿಸುವುದು ಸವಾರರಿಗೆ ದುಸ್ತರವಾಗಿದೆ.
ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಇದಾಗಿದ್ದು ಕೆಲಸ ಮುಗಿಸಿಕೊಂಡು ರಾತ್ರಿ ಸಂಚರಿಸುವವರ ಪಾಡಂತೂ ಹೇಳತೀರದು. ವಾಹನ ಓಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಖಚಿತ. ಜೀವ ಕೈಯಲ್ಲಿ ಹಿಡಿದುಕೊಂಡು ಗುಂಡಿಗಳನ್ನು ದಾಟಿಕೊಂಡು ಹೋಗುವುದು ತೀರಾ ಕಷ್ಟವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆಯನ್ನು ತಾತ್ಕಾಲಿಕವಾಗಿಯದರೂ ದುರಸ್ತಿಗೊಳಿಸಬೇಕು ಎಂದು ಮುಳ್ಳೂರು ಗ್ರಾಮದ ನವೀನ್ ಒತ್ತಾಯಿಸುತ್ತಾರೆ.
ಗುಂಡಿಗಳಿಂದ ತುಂಬಿದ್ದ ರಸ್ತೆಗಳು ಒಂದೆಡೆಯಾದರೆ ರಸ್ತೆಯ ಬದಿಯಲ್ಲಿ ಬೆಳೆದಿರುವ ಮುಳ್ಳಿನ ಜಾಲಿಗಿಡಗಳು ಸವಾರರ ಪಾಲಿಗೆ ಕಂಟಕವಾಗಿದೆ. ಕೊಳ್ಳೇಗಾಲದಿಂದ ಆರಂಭವಾಗಿ ಮುಳ್ಳೂರು ತಲುಪುವವರೆಗೂ ಚಾಲಿ ಗಿಡಗಳು ಚಾಚಿಕೊಂಡಿದ್ದು ಬೈಕ್ ಸವಾರರ ಪಾಲಿಗೆ ಕಿರಿಕಿರಿ ಉಂಟು ಮಾಡುತ್ತಿವೆ.
ಈಚೆಗಷ್ಟೆ ಬೈಕ್ ಸವಾರನಿಗೆ ಜಾಲಿ ಮುಳ್ಳು ತಾಗಿ ಹಳ್ಳಕ್ಕೆ ಬಿದ್ದು ಅಪಘಾತವಾಗಿದೆ. ದೈತ್ಯ ಪೊದೆಯಂತೆ ಬೆಳೆದಿರುವ ಜಾಲಿಗಿಡಗಳು ರಸ್ತೆಯವರೆಗೂ ಚಾಚಿಕೊಂಡಿದ್ದು ಸವಾರರ ಕಣ್ಣುಗಳಿಗೆ ತಾಗಿ ಗಾಯಗಳಾಗುತ್ತಿವೆ. ಕಳೆಗಿಡಗಳ ತೆರವಿಗೆ ಮನವಿ ಮಾಡಿದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಮೋಹನ್ ದೂರುತ್ತಾರೆ.
ಮುಳ್ಳೂರು ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿ ಇದ್ದು ಕೂಡಲೇ ಕ್ರಿಯಾ ಯೋಜನೆ ತಯಾರು ಮಾಡಿ ರಸ್ತೆಯನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.–ಕಿರಣ್ ಲೋಕೋಪಯೋಗಿ ಇಲಾಖೆಯ ಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.