ADVERTISEMENT

ಇದ್ದೂ ಇಲ್ಲದಂತಾದ ಪ್ರಾಥಮಿಕ ಆರೋಗ್ಯ ಕೇಂದ್ರ

ಹನೂರು: ಜನರಿಗೆ ಸಿಗದ ಕನಿಷ್ಠ ಚಿಕಿತ್ಸೆ, ಖಾಸಗಿ ಆಸ್ಪತ್ರೆ, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ಅವಲಂಬಿಸಿಬೇಕಾದ ಪರಿಸ್ಥಿತಿ

ಬಿ.ಬಸವರಾಜು
Published 10 ಫೆಬ್ರುವರಿ 2020, 11:00 IST
Last Updated 10 ಫೆಬ್ರುವರಿ 2020, 11:00 IST
ಹನೂರು ಪ್ರಾಥಮಿಕ ಕೇಂದ್ರದ ನೋಟ
ಹನೂರು ಪ್ರಾಥಮಿಕ ಕೇಂದ್ರದ ನೋಟ   

ಹನೂರು: ತಾಲ್ಲೂಕು ಕೇಂದ್ರ ಹನೂರಿನಲ್ಲಿರುವಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ಪಟ್ಟಣ ಹಾಗೂ ತಾಲ್ಲೂಕಿನ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಆಸ್ಪತ್ರೆಯು ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಜನರು ಸಾಮಾನ್ಯ ರೋಗಗಳಿಗೂ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆ ಅಥವಾ ಕೊಳ್ಳೇಗಾಲದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯು ಸಾಕಷ್ಟು ವಿಶಾಲವಾದ ಆವರಣ ಹೊಂದಿದೆ. ಆದರೆ, ಸುತ್ತು ಗೋಡೆ ಇಲ್ಲದಿರುವುದರಿಂದ ಬಿಡಾಡಿ ಜಾನುವಾರುಗಳ ಆವಾಸ ಸ್ಥಾನವಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಿರ್ವಹಣೆಯ ಕೊರತೆ ಯಿಂದ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.

ADVERTISEMENT

ವೈದ್ಯರ ಕೊರತೆ

ಹನೂರು ಪ್ರತ್ಯೇಕ ತಾಲ್ಲೂಕು ಎಂದು ಘೋಷಣೆ ಯಾದರೂ, ಆಸ್ಪತ್ರೆ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರವೇ ಆಗಿದೆ. ಇಲ್ಲಿ ಒಬ್ಬರೇ ವೈದ್ಯರಿದ್ದು,ಗ್ರಾಮೀಣ ಭಾಗದಿಂದ ಬರುವ ಜನರ ಚಿಕಿತ್ಸೆಗೆ ಸಮಸ್ಯೆಯಾಗಿದೆ.

ಹೆರಿಗೆಗೆಂದು ಮೀಸಲಾದ ಕೊಠಡಿಯೂ ಇಲ್ಲಿದೆ. ಆದರೆ, ಸೌಲಭ್ಯ ಕೊರತೆಯಿಂದ ಆ ಕೊಠಡಿ ಪಾಳು ಬಿದ್ದಿದೆ. ಗ್ರಾಮೀಣ ಭಾಗದಿಂದ ಬರುವ ಜನರು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸುತ್ತಿದ್ದಾರೆ.

ಹೆಸರಿಗಷ್ಟೇ 24X7 ಸೇವೆ

ಜನಸಾಮಾನ್ಯರಿಗೆ ದಿನದ 24 ಗಂಟೆಗಳ ಕಾಲವೂ ಆರೋಗ್ಯ ಸೌಲಭ್ಯ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಆರಂಭಿಸಿದ 24X7 ಆರೋಗ್ಯ ಸೌಲಭ್ಯ ಪಟ್ಟಣದ ಜನತೆಗೆ ಮರೀಚಿಕೆಯಾಗಿದೆ.

ದಿನಪೂರ್ತಿ ಜನರಿಗೆ ಚಿಕಿತ್ಸಾ ಸೌಲಭ್ಯ ನೀಡಬೇಕು ಎಂದರೆ ಅದಕ್ಕೆ ತಕ್ಕಂತೆ ವೈದ್ಯಕೀಯ ಉಪಕರಣಗಳು ಇರಬೇಕು. ಆದರೆ, ಇಲ್ಲಿ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯವಿಲ್ಲದ ಕಾರಣ 24 ಗಂಟೆ ಸೇವೆ ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ ಎಂಬುದು ನಾಗರಿಕರ ಆರೋಪ.

ರಾತ್ರಿ ಹೊತ್ತು ಸಿಬ್ಬಂದಿ ಇರುವುದಿಲ್ಲ. 24 ಗಂಟೆಗಳ ಕಾಲವು ಚಿಕಿತ್ಸೆ ಇದೆ ಎಂದು ತುರ್ತು ಸಂದರ್ಭದಲ್ಲಿ ಬಂದರೆ ನಿರಾಸೆ ಕಟ್ಟಿಟ್ಟಬುತ್ತಿ.ಈಚೆಗೆ ಪಟ್ಟಣದ ವ್ಯಕ್ತಿಯೊಬ್ಬರಿಗೆ ರಕ್ತದೊತ್ತಡ ಸಮಸ್ಯೆಯಾಗಿ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಇಂತಹ ಪ್ರಕರಣಗಳು ಪಟ್ಟಣದಲ್ಲಿ ಮೇಲಿಂದ ಮೇಲೆ ಜರುಗುತ್ತಿದ್ದರೂ, ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಪ್ರತಿನಿತ್ಯ ಇಲ್ಲಿಗೆ ನೂರಾರು ಮಂದಿ ಚಿಕಿತ್ಸೆಗೆ ಬರುತ್ತಾರೆ. ರಕ್ತಪರೀಕ್ಷೆ ಬಿಟ್ಟು ಮೂತ್ರ ಪರೀಕ್ಷೆ, ಎಕ್ಸ್ ರೇ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಕಾಮಗೆರೆಯಲ್ಲಿರುವ ಖಾಸಗಿ ಆಸ್ಪತ್ರೆ ಅಥವಾ ಕೊಳ್ಳೇಗಾಲಕ್ಕೆ ತೆರಳಬೇಕು.

ಮೇಲ್ದರ್ಜೆಗೇರದ ಆಸ್ಪತ್ರೆ:ಹೋಬಳಿ ಕೇಂದ್ರವಾಗಿದ್ದ ಹನೂರು ತಾಲ್ಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿದ್ದರೂ, ಆರೋಗ್ಯ ಸೇವೆಗಳು ಮೇಲ್ದರ್ಜೆಗೇರಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆಯಾಗಿ ಬದಲಾದರೆ, ಪಟ್ಟಣ, ಗ್ರಾಮೀಣ ಜನರಿಗೆ ಅನುಕೂಲ ವಾಗುತ್ತದೆ. ಕನಿಷ್ಠ ಚಿಕಿತ್ಸಾ ಸೌಲಭ್ಯಗಳು ಇಲ್ಲಿಯೇ ಸಿಗುವಂತಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂಬುದು ಸ್ಥಳೀಯರ ಆಗ್ರಹ.

‘ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ’

‘ಹನೂರಿನ ಆರೋಗ್ಯ ಕೇಂದ್ರದಲ್ಲಿರುವ ಮೂಲಸೌಕರ್ಯ ಕೊರತೆ ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆದಿರುವುದು ನನ್ನ ಗಮನಕ್ಕೆ ಬಂದಿದೆ. ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಈ ಕೆಲಸವಾದರೆ ಮೂಲಸೌಕರ್ಯ, ಸಿಬ್ಬಂದಿ ಕೊರತೆ ಸಮಸ್ಯೆಗಳು ನಿವಾರಣೆಯಾಗಲಿವೆ. ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಸಂಪೂರ್ಣ ವರದಿ ಸಂಗ್ರಹಿಸಿ ಮೇಲ್ದರ್ಜೆಗೇರಿಸುವ ಸಂಬಂಧ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತುರ್ತು ನಿಗಾ ಘಟಕ ಇಲ್ಲ

ಹನೂರು ಪಟ್ಟಣ ಸಾಕಷ್ಟು ಬೆಳೆದಿದೆ. ಪ್ರತಿನಿತ್ಯ ಒಂದಿಲ್ಲೊಂದು ಅವಘಡ ಸಂಭವಿಸುತ್ತಲೇ ಇರುತ್ತದೆ. ಆದರೆ, ಅದನ್ನು ಸಮರ್ಪಕವಾಗಿ ನಿರ್ವಹಿಸಲು ಇಲ್ಲಿನ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕವೇ ಇಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು.

–ಸಿದ್ದರಾಜು, ಹನೂರು

***

ಆಸ್ಪತ್ರೆ ಇದ್ದೂ ಇಲ್ಲದಂತೆ

ತಾಲ್ಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಪಟ್ಟಣಿಗರು ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಜನರು ಚಿಕಿತ್ಸೆಗಾಗಿ ಖಾಸಗಿ ಹಾಗೂ ಕೊಳ್ಳೇಗಾಲ, ಸಂತೇಮರಳ್ಳಿ ಆಸ್ಪತ್ರೆಗೆ ಹೋಗಬೇಕಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿ ಗ್ರಾಮಗಳೇ ಇರುವುದರಿಂದ ಉತ್ತಮ ಆಸ್ಪತ್ರೆ ಅಗತ್ಯವಿದೆ.

–ಉದ್ದನೂರು ಪ್ರಸಾದ್, ಹನೂರು

***

ರಾತ್ರಿ ವೇಳೆ ಸಿಬ್ಬಂದಿ ಇಲ್ಲ

ಹೆಸರಿಗೆ ಮಾತ್ರ ದಿನದ 24 ಗಂಟೆ ಆರೋಗ್ಯ ಸೌಲಭ್ಯ ಎಂದು ಬರೆಯಲಾಗಿದೆ. ವಾಸ್ತವವಾಗಿ ರಾತ್ರಿ ವೇಳೆ ಸಿಬ್ಬಂದಿಯೇ ಇರುವುದಿಲ್ಲ. ರಾತ್ರಿ ವೇಳೆ ಚಿಕಿತ್ಸೆಗಾಗಿ ಬರುವ ಜನರು ನಿರಾಸೆಯಿಂದ ಖಾಸಗಿ ಆಸ್ಪತ್ರೆಗೆ ಹೋಗಬೇಕಿದೆ. ಹೀಗಾಗಿ, ಕೂಡಲೇ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು.

–ಜೆ.ಶಿವರಾಜು, ಹನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.