ADVERTISEMENT

ಆಕರ್ಷಿಸುತ್ತಿದೆ ಹೂ ರಾಣಿಯರ ಚೆಲುವು

ಬಿಳಿಗಿರಿರಂಗನಬೆಟ್ಟ: ವರುಣನ ಸಿಂಚನದ ನಡುವೆ ಮೈದಳೆದ ಕಾಡು ಹೂ,ಸಸ್ಯ ಲೋಕ

ನಾ.ಮಂಜುನಾಥ ಸ್ವಾಮಿ
Published 15 ಸೆಪ್ಟೆಂಬರ್ 2019, 11:33 IST
Last Updated 15 ಸೆಪ್ಟೆಂಬರ್ 2019, 11:33 IST
ಕಡ್ಡಿಕಳ್ಳಿ ಹೂವಿಂದ ಮಕರಂದ ಹೀರುತ್ತಿರುವ ಜೇನ್ನೊಣ
ಕಡ್ಡಿಕಳ್ಳಿ ಹೂವಿಂದ ಮಕರಂದ ಹೀರುತ್ತಿರುವ ಜೇನ್ನೊಣ   

ಯಳಂದೂರು:ವರುಣನ ಸಿಂಚನಕ್ಕೆ ಭೂರಮೆ ತಂಪಾಗುತ್ತಿದ್ದಾಳೆ. ಒದ್ದೆ ನೆಲದ ನಡುವೆ ಸುಳಿಗಾಳಿಗೆಮೈಯೊಡ್ಡಿ ಬೀಗುತ್ತಿರುವ ಸಸ್ಯಗಳು ಒಂದೊಂದಾಗಿ ಚೆಂದ ಚೆಂದ ಹೂ ರಾಣಿಯರಿಗೆ ಜನ್ಮ ನೀಡುತ್ತಿವೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸೋಡಿಗದ್ದೆಸಾಲು, ಗುಡ್ಡಗಾಡು, ಬಯಲು ಪ್ರದೇಶಗಳಲ್ಲಿ ಈ ಬಾರಿ ನಿರೀಕ್ಷಿಸಿದಷ್ಟು ಮಳೆ ಬಿದ್ದಿಲ್ಲ. ಆದರೆ, ತುಂತುರು ಹನಿಗಳು ನೆಲ ತೋಯಿಸುವುದನ್ನು ಮಾತ್ರ ತಪ್ಪಿಸಿಲ್ಲ. ಆಗಾಗ ಉದುರುವ ಹನಿಗಳು ಧರೆಗೆ ಹಸಿರಸೀರೆ ಉಡಿಸಿವೆ.ಒಣಗಿದ ಬಳ್ಳಿಗಳಿಗೆ ಮತ್ತೆ ಜೀವ ತುಂಬಿದೆ.

ಹೆಸರೇ ಗೊತ್ತಿಲ್ಲದ ಕಿರುಸಸ್ಯ, ನೀರು ಬೇಡದ ಕಳ್ಳಿ ಹಾಗೂ ಅಡವಿ ಮುಂದಿನ ಹುಲ್ಲುಸಾಲು, ಹೊಲ, ಗದ್ದೆಗಳೂ ಈಗ ಚೆಲುವಿನಲ್ಲಿ ಪೈಪೋಟಿಗೆ ನಿಂತಿವೆ. ಮುಂಗಾರಿಗೂ ಮುನ್ನ ಕಾಣದಾದ ಎಷ್ಟೋ ತರಾವರಿ ಸಸ್ಯಜಾತಿ ಈಗ ಕಾಲಿಗೆ ತೊಡರುತ್ತಿವೆ. ಚಿತ್ತಾರದ ಲತೆಗಳಲ್ಲಿ ಜೀವಾಂಕುರವಾಗಿದೆ.

ADVERTISEMENT

ಬೇಲಿ ಬದಿಯಲ್ಲೂ, ಮನೆಯ ಹಿತ್ತಲಲ್ಲೂ, ಕಳೆ ಸಸ್ಯಗಳ ನಡುವೆ ಕಂಡು ಬರುವ ಸಸ್ಯಗಳು ತಮ್ಮ ಅಲ್ಪ ಸಮಯದ ಜೀವಿತ ಅವಧಿಯಲ್ಲಿ ಮನುಕುಲವನ್ನು ಆಕರ್ಷಿಸುತ್ತಿವೆ. ಎಷ್ಟೋ ಗಿಡಗಳು ಮೂಲಿಕೆಗಳಾಗಿ ಜನರ ನೋವನ್ನು ಶಮನಗೊಳಿಸುತ್ತಿವೆ.

‘ಕಾಲಾಂತರದಲ್ಲಿ ದಟ್ಟವಾದ ಕಾಡು ಮಾಯವಾದವು. ಆದರೆ, ಅಲ್ಲಿ ನೆಲೆಯಾಗಿದ್ದ ಬಹಳಷ್ಟು ಸಸ್ಯ ಕುಲ ಗುಡ್ಡಗಾಡು ಮತ್ತು ಬಯಲಿಗೂ ವಿಸ್ತರಿಸಿದವು. ಕಡು ಹಸಿರು ಬಣ್ಣದ ಎಲೆಯ ನಡುವೆ ಅರಳಿದ ಹೂಗುಚ್ಛಗಳ ಸೌಂದರ್ಯವನ್ನು ಮತ್ತು ಮೂಲಿಕೆ ಪ್ರಭಾವವನ್ನು ನೋಡಿಯೇಗುರುತಿಸಬೇಕಿದೆ’ ಎಂದುಏಟ್ರೀ ಕ್ಷೇತ್ರಪಾಲಕ ಜೇಡೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂಗಾರಿನ ಸಿಂಗಾರಗಿತ್ತಿಯರು: ಮುಂಗಾರು ಬರಲಿ ಬಿಡಲಿ ‘ಸೀತೆ ದಂಡೆ’ ಮರಗಳ ಪೊಟರೆಯಲ್ಲಿ, ‘ಫಲವಂತೀ ಗಿಡ’ಗಳು ಒಣ ಮರದ ಸಂದಿಯಲ್ಲಿ ನಳನಳಿಸುತ್ತವೆ. ನಸುಗೆಂಪು ಬಣ್ಣದ ‘ತೇರು ಹೂ’, ‘ಹಳದಿ ಕುಸುಮಾವಳಿ’ ನವವಸ್ತ್ರ ತೊಟ್ಟು ಪಲ್ಲವಿಸುತ್ತವೆ. ಮನೆಯ ಮುಂದಿನ ಲಿಲ್ಲಿ ಹುಲ್ಲಿನ ಚೆಲುವು, ಕಡ್ಡಿಕಳ್ಳಿಯ ನಸು ‘ಹಳದಿ ಪುಷ್ಪ’, ವಿವಿಧ ವಿನ್ಯಾಸದ ಕೇಸರದ ಮೂಲಕ ಗಮನ ಸೆಳೆಯುವ ತರುಲುತೆಗಳ ಸಾಲುಸಾಲು ಈಗ ಕಣ್ಣಿಗೆ ಹಬ್ಬವನ್ನೇ ಉಂಟು ಮಾಡುತ್ತಿವೆ.

ಮೂಲಿಕಾ ಸಸ್ಯ ಪ್ರಪಂಚ

‘ಗ್ರಾಮೀಣ ಜನರು ದಾರಿ ಬದಿಯಲ್ಲಿ, ಬೇಲಿ ಒಡಲಲ್ಲಿ ಕಾಣಬರುವ ಆವರಿಕೆ ಹೂವನ್ನು ಕೇಶ ಕಾಂತಿಗೆ, ಕಳ್ಳಿಸಸ್ಯದ ಹಾಲನ್ನು ಸಣ್ಣಪುಟ್ಟ ಗಾಯ ಮಾಗಲು ಬಳಸುತ್ತಾರೆ. ಹಳೇ ತಲೆಮಾರಿನ ಹಳ್ಳಿಗರು ಸೊಪ್ಪುಸದೆ ಕೀಳುವಾಗ ಅಲ್ಲಲ್ಲಿ ಬೆಳೆಯುವ ಪುಟ್ಟಗಾತ್ರದ ಆಹಾರದ ಅಣಬೆಯನ್ನು ಗುರುತಿಸುತ್ತಿದ್ದರು.

ರೋಜಾ ಮತ್ತು ಎಕ್ಕದಗಿಡದ ಎಲೆಗಳ ರಸವನ್ನು ಕತ್ತಿ ಗಾಯದ ಮೇಲೆ ಹಿಂಡಿ ಗುಣಪಡಿಸುತ್ತಿದ್ದರು. ಈಗ ಇಂತಹಬಹಳಷ್ಟು ಪ್ರಭೇದಗಳು ನಾಶವಾಗಿವೆ’ ಎಂದು ಬಿಆರ್‌ಟಿ ಸಸ್ಯತಜ್ಞ ರಾಮಾಚಾರಿ ಬೇಸರದಿಂದಲೇ ‘ಪ್ರಜಾವಾಣಿ’ಗೆ ಹೇಳಿದರು.

ಕ್ಯಾಕ್ಟಸ್‌ ಜೇನ್ನೊಣಗಳಿಗೆ ಪ್ರಿಯ: ‘ಶ್ರಾವಣ ಮಾಸದಿಂದಲೇ ಕಾಡು–ನಾಡಿನನಡುವೆ ಭೇದವಿಲ್ಲದೆ ಕೆಲವು ಸಸಿಗಳು ಹೂ ಮುಡಿಯುತ್ತವೆ. ಗಣಪನ ಹಬ್ಬದ ಸಮಯದಲ್ಲಿ ಆವರಿಕೆ, ಲಂಟಾನ ಹಾಗೂ ಕಳ್ಳಿ ಜಾತಿ ಹೂ ಹಾಸಿಗೆ ಹಾಸುತ್ತವೆ. ಅಪರೂಪಕ್ಕೆ ಕ್ಯಾಕ್ಟಸ್‌ ಜಾತಿಗೆ ಸೇರಿದ ಸಸ್ಯಗಳ ಹೂ ಜೇನ್ನೋಣಗಳಿಗೆ ಬಲುಪ್ರಿಯ. ಪಾತರಗಿತ್ತಿ ಮತ್ತು ಪುಟ್ಟ ಹಕ್ಕಿಗಳ ದಂಡು ಪುಷ್ಪಗಳ ಮಧು ಪಾತ್ರೆಗೆ ಕೊಕ್ಕು ಹಾಕಿ ಜೇನು ಸವಿಯುವ ದೃಶ್ಯ ವೀಕ್ಷಿಸಲು ಈಗ ಸುಸಮಯ’ ಎಂದು ಏಟ್ರೀ ಕ್ಷೇತ್ರಪಾಲಕ ಜೇಡೆಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.