ADVERTISEMENT

ಅರಣ್ಯ ಹುತಾತ್ಮರ ದಿನ: ಸವಾಲು, ಸಾವಿನ ನಡುವೆ ಅರಣ್ಯ ರಕ್ಷಣೆ

ಕರ್ತವ್ಯದಲ್ಲಿದ್ದಾಗಲೇ ಪ್ರಾಣ ತ್ಯಾಗ ಮಾಡಿದ ಕಾಡಿನ ಯೋಧರ ಸ್ಮರಣೆ

ಸೂರ್ಯನಾರಾಯಣ ವಿ
Published 11 ಸೆಪ್ಟೆಂಬರ್ 2021, 6:29 IST
Last Updated 11 ಸೆಪ್ಟೆಂಬರ್ 2021, 6:29 IST
ಹನೂರು ತಾಲ್ಲೂಕಿನ ಗೋಪಿನಾಥಂ ಸಮೀಪದಲ್ಲಿರುವ ಎರಕೆಯಂನಲ್ಲಿರುವ ಪಿ.ಶ್ರೀನಿವಾಸ್‌ ಅವರ ಸ್ಮಾರಕ
ಹನೂರು ತಾಲ್ಲೂಕಿನ ಗೋಪಿನಾಥಂ ಸಮೀಪದಲ್ಲಿರುವ ಎರಕೆಯಂನಲ್ಲಿರುವ ಪಿ.ಶ್ರೀನಿವಾಸ್‌ ಅವರ ಸ್ಮಾರಕ   

ಚಾಮರಾಜನಗರ: ಒಟ್ಟು ಭೂಭಾಗದಲ್ಲಿ ಶೇ 49ರಷ್ಟು ಕಾಡನ್ನೇ ಹೊಂದಿರುವ ಗಡಿ ಜಿಲ್ಲೆಯಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸುವುದು ಸುಲಭದ ಮಾತಲ್ಲ. 1966ರಿಂದ ಇಲ್ಲಿಯವರೆಗೆ 10 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ವನಸಂಪತ್ತಿನ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.

ರಾಜ್ಯದಲ್ಲಿ ಈವರೆಗೆ 54 ಮಂದಿ ಅರಣ್ಯ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಒಂದಿಲ್ಲೊಂದು ಕಾರಣಕ್ಕೆ ಮೃತಪಟ್ಟಿದ್ದಾರೆ. ಈ ಪೈಕಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ.

ದಂತಚೋರ ವೀರಪ್ಪನ್ ಉಪಟಳ ಹೆಚ್ಚಾಗಿದ್ದ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಪಿ.ಶ್ರೀನಿವಾಸ್‌ ಅವರ ಹತ್ಯೆಯು ಜಿಲ್ಲೆಯಲ್ಲಿ ಅರಣ್ಯ ಸಿಬ್ಬಂದಿಯ ಮೇಲೆ ನಡೆದ ಬಹುದೊಡ್ಡ ಕ್ರೌರ್ಯ. ವೀರಪ್ಪನ್‌ನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ಶ್ರೀನಿವಾಸ್‌ ಅವರು ಗೋಪಿನಾಥಂ ಸಮೀಪದ ಎರಕೆಯಂ ಪ್ರದೇಶದಲ್ಲಿ 1991ರ ನವೆಂಬರ್‌ 10ರಂದು ಕಾಡುಕಳ್ಳ ಹೂಡಿದ್ದ ಸಂಚಿಗೆ ಬಲಿಯಾಗಿದ್ದರು. ‘ಕೀರ್ತಿಚಕ್ರ’ ಶ್ರೀನಿವಾಸ್‌ ಅವರನ್ನು ಆತ ನಿರ್ದಯವಾಗಿ ಕೊಲೆ ಮಾಡಿದ್ದ.

ADVERTISEMENT

ಸವಾಲಿನ ಕೆಲಸ: ‘ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಅಪಾಯದ ಸಾಧ್ಯತೆ ಇರುವ ಉದ್ಯೋಗ ಎಂದರೆ ಅದು ಅರಣ್ಯ ರಕ್ಷಣೆ. ಹಿಂದಿನ ಕಾಲಕ್ಕೂ ಈಗಿನ ಪರಿಸ್ಥಿತಿಗೂ ಸಿಬ್ಬಂದಿಯ ಕಾರ್ಯವಿಧಾನ ಬದಲಾಗಿದ್ದರೂ ಹಸಿರು ಸಂಪತ್ತಿನ ರಕ್ಷಣೆಯ ಸವಾಲಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎಂದು ಹೇಳುತ್ತಾರೆ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ ಕುಮಾರ್‌ ಅವರು.

‘ಈಗ ಅರಣ್ಯದ ಒಳಗಡೆ ರಕ್ಷಣೆಯ ಕೆಲಸ ಕಡಿಮೆ. ಮರಗಳ ಕಳ್ಳತನ, ದಿಮ್ಮಿಗಳ ಮಾರಾಟ ನಿಂತು ಹೋಗಿದೆ. ಅರಣ್ಯದ ಅಂಚಿನಲ್ಲಿ ಹಾಗೂ ಅರಣ್ಯದ ಹೊರಗಡೆಯೇ ನಾವು ಹೆಚ್ಚು ಕಾವಲು ಕಾಯಬೇಕಾಗಿದೆ. ಮಾನವ ವನ್ಯಜೀವಿ ಸಂಘರ್ಷ ನಮ್ಮ ಮುಂದಿರುವ ಬಹುದೊಡ್ಡ ಸವಾಲು’ ಎಂದು ಅವರು ಹೇಳುತ್ತಾರೆ.

ಹೆಚ್ಚಿದ ಹಲ್ಲೆಗಳು: ‘ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆಯಾಗುತ್ತಿರುವ ಪ್ರಕರಣಗಳು ದೇಶದಾದ್ಯಂತ ಹೆಚ್ಚುತ್ತಿವೆ. ಕಲ್ಲು, ಖನಿಜ ಗಣಿಗಾರಿಕೆ ನಡೆಸುವವರು, ವನ್ಯಜೀವಿಗಳ ಹಾವಳಿಗೆ ತುತ್ತಾದವರು, ರೈತರು.. ಹೀಗೆ ಎಲ್ಲರಿಂದಲೂ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಬರುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ಹೊರಟರೆ, ಅವರಿಂದ ತೀವ್ರ ಪ್ರತಿರೋಧ ಬರುತ್ತದೆ. ಅದನ್ನು ಎದುರಿಸಿಕೊಂಡು ಸಿಬ್ಬಂದಿ ಕೆಲಸ ಮಾಡಬೇಕಾಗುತ್ತದೆ. ಇದರ ಜೊತೆಗೆ ಜನರು, ಕಾಡಂಚಿನ ಪ್ರದೇಶಗಳಲ್ಲಿ ವಾಸವಿರುವವರ ಹತಾಶೆಯೂ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಅವರು ವಿವರಿಸುತ್ತಾರೆ.

ಆಧುನಿಕ ತಂತ್ರಜ್ಞಾನದ ಕೊರತೆ: ಭದ್ರತೆ, ಸುರಕ್ಷತೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಈಗ ಆಧುನಿಕ ಶಸ್ತ್ರಾಸ್ತ್ರಗಳು, ಆಧುನಿಕ ತಂತ್ರಜ್ಞಾನಗಳು ಬಂದಿವೆ. ಆದರೆ, ಇವ್ಯಾವುದನ್ನೂ ಅರಣ್ಯ ಇಲಾಖೆ ಇನ್ನೂ ಅಳವಡಿಸಿಕೊಂಡಿಲ್ಲ.

ಕಾಲಾಳುಗಳಾಗಿ ನಿಂತು ಅರಣ್ಯ ಕಾಯುವ ಸಿಬ್ಬಂದಿಯ ಬಳಿ ಇನ್ನೂ ಹಳೆಯ ಕಾಲದ ಬಂದೂಕೇ ಇದೆ. ಅರಣ್ಯದ ಅಂಚಿನಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವಂತಹ ಆಧುನಿಕ ವ್ಯವಸ್ಥೆಯೂ ಅಧಿಕಾರಿ, ಸಿಬ್ಬಂದಿ ಬಳಿ ಇಲ್ಲ.

ರಕ್ಷಣಾ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಇಲಾಖೆ ಯೋಚಿಸಿಯೇ ಇಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು. ಆಧುನಿಕ ತಂತ್ರಜ್ಞಾನ, ಶಸ್ತ್ರಾಸ್ತ್ರಗಳು ಸಿಕ್ಕರೆ ಅರಣ್ಯ ರಕ್ಷಣೆ ಪರಿಣಾಮಕಾರಿಯಾಬಹುದು ಎಂದು ಹೇಳುತ್ತಾರೆ ಅವರು.

‘ವಿರೋಧದ ನಡುವೆಯೇ ಕೆಲಸ’

ಕರ್ತವ್ಯದಲ್ಲಿರುವಾಗ ನಮಗೆ ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇರುತ್ತವೆ. ರೈಲ್ವೆ ಕಂಬಿ ನಿರ್ಮಾಣಕ್ಕೂ ಮೊದಲು ಆನೆಗಳ ಹಾವಳಿ ವಿಪರೀತವಾಗಿತ್ತು. ಕಂಬಿ‌ ನಿರ್ಮಾಣವಾದ ಮೇಲೆ ಅದು ನಿಂಯತ್ರಣಕ್ಕೆ ಬಂದಿದೆ. ನಮ್ಮ ಕಡೆಯಿಂದ ಆನೆಗಳು ಜಮೀನುಗಳಿಗೆ ಈಗ ನುಗ್ಗುತ್ತಿಲ್ಲ. ಆದರೆ, ನಮ್ಮ ಅರಣ್ಯ ತಮಿಳುನಾಡಿಗೆ ಹೊಂದಿಕೊಂಡಿರುವುದರಿಂದ ಅಲ್ಲಿಂದ ಬರುವ ಆನೆಗಳು ಇಲ್ಲಿನ ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಹೀಗಿದ್ದರೂ ರೈತರು ನಮ್ಮ ಮೇಲೆಯೇ ಆರೋಪ ಮಾಡುತ್ತಾರೆ. ನಾವು ಅವರ ನಡುವೆಯೇ ಇದ್ದುಕೊಂಡು‌ ಕೆಲಸ ಮಾಡಿದರೂ ಸಮಯ ಸಂದರ್ಭಗಳು ಒಮ್ಮೊಮ್ಮೆ ಅವರು ನಮ್ಮ ವಿರುದ್ಧವೇ ತಿರುಗಿ ಬೀಳುವಂತೆ ಮಾಡುತ್ತವೆ. ಎಂಟು ವರ್ಷಗಳಿಂದ‌ ಅರಣ್ಯ ರಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ನನಗೆ ಇದು ಸಾಕಷ್ಟು ಬಾರಿ ಅನುಭವ ಆಗಿದೆ.

– ಕೃಷ್ಣಪ್ಪನಾಯ್ಕ, ಅರಣ್ಯ ರಕ್ಷಕ, ಪಿ.ಜಿ.ಪಾಳ್ಯ ವನ್ಯಜೀವಿ ವಲಯ, ಮಲೆಮಹದೇಶ್ವರ ವನ್ಯಧಾಮ.

–––

ಸೆ.11: ಅರಣ್ಯ ಹುತಾತ್ಮರ ದಿನ

ಪಿ.ಶ್ರೀನಿವಾಸ್‌ ಸ್ಮರಣಾರ್ಥ ಮೊದಲಿಗೆ ಕರ್ನಾಟಕ ಪ್ರತಿ ವರ್ಷ ನವೆಂಬರ್‌ 11ರಂದು ಅರಣ್ಯ ಹುತಾತ್ಮರ ದಿನ ಆಚರಿಸಲು ಆರಂಭಿಸಿತು. ಇದನ್ನು ಕಂಡು ಬೇರೆ ರಾಜ್ಯಗಳ ಅರಣ್ಯ ಇಲಾಖೆಗಳು ಕೂಡ ಕರ್ತವ್ಯದಲ್ಲಿದ್ದಾಗಲೇ ಪ್ರಾಣ ತ್ಯಾಗ ಮಾಡಿದ ಸಿಬ್ಬಂದಿಯ ಸ್ಮರಣೆಗಾಗಿ ಒಂದು ದಿನ ಮೀಸಲು ಇಡಲು ಆರಂಭಿಸಿದವು. ಕೊನೆಗೆ ಕೇಂದ್ರ ಸರ್ಕಾರವೇ 2013ರಲ್ಲಿ ಇದಕ್ಕಾಗಿ ಪ್ರತ್ಯೇಕ ಒಂದು ದಿನ ನಿಗದಿ ಮಾಡಿ ಘೋಷಣೆ ಮಾಡಿತು.

ಸೆ.11ರಂದು ಯಾಕೆ?: ಅರಣ್ಯ ಹುತಾತ್ಮರ ದಿನದ ಆಯ್ಕೆಯ ಹಿಂದೆ ಇತಿಹಾಸದ ಕಾರಣವೊಂದಿದೆ. 1730ರ ಸೆ.11ರಂದು ನಡೆದಿದ್ದ ಖೇಜರ್ಲಿ ಹತ್ಯಾಕಾಂಡದ ಸ್ಮರಣಾರ್ಥ ಆ ದಿನವನ್ನು ನಿಗದಿ ಮಾಡಲಾಗಿದೆ.

ರಾಜಸ್ಥಾನದ ಮಹಾರಾಜ ಅಭಯ್‌ ಸಿಂಗ್‌ ಎಂಬಾತ ಖೇಜರ್ಲಿ (ಜಾಲಿ ಮರದ ಜಾತಿಗೆ ಸೇರಿದ್ದು ) ಮರಗಳನ್ನು ಕಡಿಯಲು ಆದೇಶಿಸುತ್ತಾನೆ. ರಾಜಸ್ಥಾನದ ಖೇಜರ್ಲಿ ಎಂಬ ಗ್ರಾಮದ ಬಿಷ್ಣೊಯಿ ಸಮುದಾಯದ ಜನರು ಈ ಮರವನ್ನು ಪೂಜಿಸುತ್ತಿದ್ದರು.

ರಾಜನ ನಿರ್ಧಾರವನ್ನು ವಿರೋಧಿಸಿಸಮುದಾಯದ ಅಮೃತಾ ದೇವಿ ಎಂಬ ಮಹಿಳೆ ಮರವನ್ನು ಕಡಿಯುವ ಬದಲಿಗೆ ತನ್ನ ತಲೆ ಕಡಿಯುವಂತೆ ಹೇಳುತ್ತಾಳೆ. ರಾಜ ತನ್ನ ಸೇನೆಯ ಮೂಲಕ ಆಕೆ ಹಾಗೂ ಅವಳ ಮೂರು ಪುತ್ರಿಯರ ತಲೆ ಕಡಿಸುತ್ತಾನೆ. ಈ ಘಟನೆ ತೀವ್ರ ರೂಪ ತಾಳಿ, ಮರ ಕಡಿಯಲು ವಿರೋಧ ವ್ಯಕ್ತಪಡಿಸಿದ ಇನ್ನೂ 359 ಜನರನ್ನು ಸೇನಾ ಸಿಬ್ಬಂದಿ ಹತ್ಯೆ ಮಾಡುತ್ತಾರೆ. ಈ ವಿಚಾರ ತಿಳಿದ ಅಭಯ್‌ ಸಿಂಗ್‌ ದುಃಖಿತವಾಗಿ ಮರ ಕಡಿಸುವುದನ್ನು ಸ್ಥಗಿತಗೊಳಿಸುವುದರ ಜೊತೆಗೆ‌, ಖೇಜರ್ಲಿ ಗ್ರಾಮದಲ್ಲಿ ಮರಗಳನ್ನು ಕಡಿಯದಂತೆ, ಬೇಟೆಯಾಡದಂತೆ ಆದೇಶ ಹೊರಡಿಸುತ್ತಾನೆ.

----

ಅರಣ್ಯ ರಕ್ಷಣೆ ಅತ್ಯಂತ ಅಪಾಯಕಾರಿ ಕೆಲಸ. ನಮ್ಮಲ್ಲಿ ಈಗ ಸಿಬ್ಬಂದಿಗೆ ಕೊರತೆ ಇಲ್ಲ. ಆದರೆ, ವನ ಸಂಪತ್ತಿನ ರಕ್ಷಣೆಯ ವಿಚಾರದಲ್ಲಿ ಹೊಸ ಹೊಸ ಸವಾಲುಗಳು ಬರುತ್ತಿವೆ
-ಮನೋಜ್‌ ಕುಮಾರ್‌, ಸಿಸಿಎಫ್‌, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.