ಚಾಮರಾಜನಗರ: ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ರಾಜಿ ಆಗಬಹುದಾದ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಜಿಲ್ಲೆಯ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್, ಕುಟುಂಬ ನ್ಯಾಯಾಲಯದ ಪ್ರಕರಣಗಳು, ಚೆಕ್ ಅಮಾನ್ಯ, ಸಾಲ ವಸೂಲಾತಿ, ಮೋಟಾರ್ ಅಪಘಾತ ಪರಿಹಾರ, ಕಾರ್ಮಿಕರ ವಿವಾದ, ಭೂಮಿ ಸ್ವಾಧೀನ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನು ಕಕ್ಷಿದಾರರು ಹಾಗೂ ವಕೀಲರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಒಂದಾದ ದಂಪತಿ: ಗುಂಡ್ಲುಪೇಟೆಯ ಅನಿಲ್ ರಾಜ್ ಹಾಗೂ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಭಾಗೀರಥಿ ದಂಪತಿ ಜೀವನಾಂಶ, ವಿವಾಹ ವಿಚ್ಛೇದನಕ್ಕಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕಳೆದ 5 ವರ್ಷಗಳಿಂದಲೂ ಪ್ರಕರಣ ನಡೆಯುತ್ತಿತ್ತು. ಲೋಕ ಅದಾಲತ್‍ನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿಕೊಂಡಿದ್ದು ಮತ್ತೆ ಒಂದಾದರು.
ಭಾಗೀರಥಿ ಪರವಾಗಿ ವಕೀಲ ನಂಜಯ್ಯ ಹಾಗೂ ಅನಿಲ್ ರಾಜ್ ಪರ ವಕೀಲ ಸಿದ್ದರಾಜು ವಾದ ಮಂಡಿಸಿದ್ದರು. ಎರಡು ಕಡೆಯ ವಕೀಲರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ದಂಪತಿ ಒಂದಾದರು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್.ಭಾರತಿ, ಕೃಷ್ಣ, ಲೋಕಪ್ಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ, ಪ್ರಧಾನ ಕಾರ್ಯದರ್ಶಿ ದೊಡ್ಡಮೋಳೆ ರಂಗಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.