ADVERTISEMENT

ಹೊಸ ವರ್ಷಾಚರಣೆ: ಬಂಡಿಪುರದಲ್ಲಿ ವಸತಿ ಗೃಹ ಸೌಲಭ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 15:57 IST
Last Updated 29 ಡಿಸೆಂಬರ್ 2024, 15:57 IST
ಸಫಾರಿಗೆ ಟಿಕೆಟ್ ಪಡೆಯಲ್ಲು ಸಾಲುಗಟ್ಟಿ ನಿಂತಿರುವ ಪ್ರವಾಸಿಗರು
ಸಫಾರಿಗೆ ಟಿಕೆಟ್ ಪಡೆಯಲ್ಲು ಸಾಲುಗಟ್ಟಿ ನಿಂತಿರುವ ಪ್ರವಾಸಿಗರು    

ಗುಂಡ್ಲುಪೇಟೆ: ಹೊಸ ವರ್ಷಾಚರಣೆ ಸಂದರ್ಭ ಪ್ರವಾಸಿಗರ ಮೋಜು ಮಸ್ತಿಯಿಂದ ಪ್ರಾಣಿಗಳ ಸಹಜ ಜೀವನಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಈ ವರ್ಷವೂ ವರ್ಷಾಂತ್ಯ ಹಾಗೂ ವರ್ಷಾರಂಭದ ದಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ವಸತಿ ಗೃಹಗಳನ್ನು ಪ್ರವಾಸಿಗರಿಗೆ ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಡಿ. 31 ಹಾಗೂ ಜ.1ರಂದು ಅರಣ್ಯ ಇಲಾಖೆ ವ್ಯಾಪ್ತಿಗೊಳಪಡುವ ವಸತಿ ಗೃಹಗಳನ್ನು ಪ್ರವಾಸಿಗರಿಗೆ ನೀಡದಿರಲು ನಿರ್ಧರಿಸಿರುವ ಅರಣ್ಯ ಇಲಾಖೆಯು ಕಾಡಂಚಿನಲ್ಲಿರುವ ಖಾಸಗಿ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳಿಗೂ ಶಬ್ದ ಮಾಲಿನ್ಯ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೊಸ ವರ್ಷಾಚರಣೆಯ ಸಂದರ್ಭ ಹೆಚ್ಚು ಶಬ್ದ ಮಾಡುವ ಡಿಜೆ ಬಳಸಬಾರದು, ಲೈಟಿಂಗ್ಸ್ ಹಾಕಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ  ಪ್ರಭಾಕರನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ಹೊಸ ವರ್ಷದ ದಿನ ಸಾಮಾನ್ಯವಾಗಿ ಮೋಜು ಮಸ್ತಿ ಇರುತ್ತದೆ. ಇದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಹೊಸ ವರ್ಷದ ಆಚರಣೆಗೆ ಬಂಡೀಪುರದ ವಸತಿ ಗೃಹಗಳನ್ನು ಕಾಯ್ದಿರಿಸಲು ಪ್ರವಾಸಿಗರಿಗೆ ಅವಕಾಶ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸಫಾರಿ ಸೌಲಭ್ಯ ಇದೆ: ವಸತಿಗೃಹಗಳ ಸೌಲಭ್ಯ ಇಲ್ಲದಿದ್ದರೂ ಸಫಾರಿ ಎಂದಿನಂತೆ ಇರಲಿದೆ. ಪ್ರವಾಸಿಗರು ಸಫಾರಿಯಲ್ಲಿ ಪ್ರಾಣಿಗಳ ವೀಕ್ಷಣೆಗೆ ಅಡ್ಡಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರ ದಟ್ಟಣೆ: ವಾರಾಂತ್ಯ ಹಾಗೂ ವರ್ಷಂತ್ಯದ ಹಿನ್ನೆಲೆಯಲ್ಲಿ ಬಂಡೀಪುರ ಸಫಾರಿಗೆ ಮತ್ತು ಗೋಪಾಲಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಸಫಾರಿ ಕ್ಯಾಂಪಸ್‌ನಲ್ಲಿ ಪ್ರವಾಸಗರು ಕಿಕ್ಕಿರಿದು ತುಂಬಿದ್ದರು. ಸಫಾರಿ ವೀಕ್ಷಣೆ ಮಾಡಲು  ಸಾಲುಗಳಲ್ಲಿ ನಿಂತು ಟಿಕೆಟ್ ಪಡೆದುಕೊಂಡರು.  ಬೆಳಿಗ್ಗೆ ಹಾಗೂ ಸಂಜೆ 3 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಸಫಾರಿ ವೀಕ್ಷಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಪ್ರವಾಸಿಗರು ನೆರೆಯ ಊಟಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದಾರೆ. ಹಾಗೆಯೇ ಬಂಡೀಪುರ ಸೇರಿದಂತೆ ಮೈಸೂರಿನ ಪ್ರವಾಸಿ ತಾಣಗಳಿಗೆ ಕೇರಳ ಮತ್ತು ತಮಿಳುನಾಡಿನ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ಸಾಗುತ್ತಿವೆ.

ಹಸಿರು ಸುಂಕ ವಸೂಲಿ ಮಾಡುತ್ತಿರುವ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್ ಹಾಗೂ ಕೆಕ್ಕನಹಳ್ಳ, ಮದ್ದೂರು, ಮೂಲೆಹೊಳೆ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳು ಬರುತ್ತಿರುವುದರಿಂದ ಎಳನೀರು, ಕಲ್ಲಂಗಡಿ ಸೇರಿದಂತೆ ಹೋಟೆಲ್ ಗಳಿಗೂ ಹೆಚ್ಚಿನ ವಹಿವಾಟು ನಡೆದವು.

ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.