ADVERTISEMENT

ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರ ದಂಡು, ಪ್ರವಾಸಿ ತಾಣಗಳಲ್ಲಿ ಜನಸಂದಣಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 15:27 IST
Last Updated 1 ಜನವರಿ 2020, 15:27 IST
ಹೊಸ ವರ್ಷದ ಅಂಗವಾಗಿ ಚಾಮರಾಜನಗರದ ಸಮೀಪದ ರಾಮಸಮುದ್ರದ ಬಳಿಯ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಶುಭಾಶಯ ಸಂದೇಶ ಬರೆದಿರುವುದು
ಹೊಸ ವರ್ಷದ ಅಂಗವಾಗಿ ಚಾಮರಾಜನಗರದ ಸಮೀಪದ ರಾಮಸಮುದ್ರದ ಬಳಿಯ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಶುಭಾಶಯ ಸಂದೇಶ ಬರೆದಿರುವುದು   

ಚಾಮರಾಜನಗರ: ಜಿಲ್ಲೆಯ ಜನರು ಹೊಸ ವರ್ಷ 2020 ಅನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸಿದರು.

ಮಂಗಳವಾರ ರಾತ್ರಿ 12 ಗಂಟೆಯಾಗುತ್ತಲೇ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಜನರು ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಬಿ.ರಾಚಯ್ಯ ಜೋಡಿರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಯುವಕರು ಪಟಾಕಿ ಹೊಡೆದು, ಕುಣಿದು ಕುಪ್ಪಳಿಸಿದರು.

ಬುಧವಾರ ಬೆಳಗ್ಗೆಪರಿಚಯಸ್ಥರು, ಸಂಬಂಧಿಕರು, ಸ್ನೇಹಿತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ADVERTISEMENT

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ವರ್ಷದ ಮೊದಲ ದಿನದ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಯಳಂದೂರು ತಾಲ್ಲೂಕಿನಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಹೊಸ ವರ್ಷದಂದುಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.

ಮುಂಜಾನೆಯಿಂದಲೇ ಪ್ರವಾಸಿಗರು, ಭಕ್ತರು ಮತ್ತು ದಾಸರು ರಂಗಪ್ಪನಪೂಜೆಗೆ ಸಾಲುಗಟ್ಟು ನಿಂತಿದ್ದ ದೃಶ್ಯ ಕಂಡು ಬಂತು. ದೇವಾಲಯದ ಸುತ್ತಮುತ್ತಅರಿಸಿನ, ಕುಂಕುಮ, ಚಂದನದಿಂದ ಸಿಂಗರಿಸಲಾಗಿತ್ತು.

ಯಳಂದೂರು ಪಟ್ಟಣದಿಂದ ಬೆಟ್ಟಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಬಹುತೇಕಮಹಿಳೆಯರು ಮತ್ತು ಮಕ್ಕಳು ಬಸ್‌ಗಳಲ್ಲಿ ತೆರಳಿದರೆ, ಯುವ ಜನಾಂಗ ಬೈಕ್‌ಗಳ ಮೂಲಕಸಾಗಿದರು. ಪೊಲೀಸರು ಬೆಟ್ಟ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿ ಪ್ರವಾಸಿಗರನ್ನು ಒಳಬಿಡುತ್ತಿದ್ದರು. ಸಂಜೆವರೆಗೂ ಭಕ್ತರು ಮೆಟ್ಟಿಲು ಮತ್ತು ತಿರುವು ರಸ್ತೆಗಳಲ್ಲಿ ನಡೆದು ರಂಗನಾಥನ ಆರಾಧನೆಗೆ ಸಾಲುಗಟ್ಟಿದರು.

ಗಜರಾಜನ ದರ್ಶನ: ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಬುಧವಾರ ಎರಡು ಆನೆಗಳು ಕಂಡು ಬಂದವು. ನೂರಾರು ಸಂಖ್ಯೆಯ ಪ್ರವಾಸಿಗರು ಆನೆಗಳನ್ನು ಕಂಡು ಸಂತಸಪಟ್ಟರು, ತಮ್ಮ ಮೊಬೈಲ್‌, ಕ್ಯಾಮೆರಾದಲ್ಲೂ ಚಿತ್ರಗಳನ್ನು ಸೆರೆ ಹಿಡಿದರು.

ಗುಂಡ್ಲುಪೇಟೆ ವರದಿ:ಬುಧವಾರ ತಾಲ್ಲೂಕಿನ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನೂರಾರು ಮಂದಿ ಪ್ರವಾಸಿಗರು ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿದು, ಪೂಜೆ ಸಲ್ಲಿಸಿದರು. ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 30ಕ್ಕೂ ಹೆಚ್ಚು ಬಸ್‍ಗಳನ್ನು ನಿಯೋಜಿಸಿತ್ತು.

ಹುಲುಗನ ಮರಡಿ ವೆಂಕಟರಮಣಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟ, ಮೇಲುಕಾಮನಹಳ್ಳಿ ಹತ್ತಿರದ ಹನುಮನ ದೇವಸ್ಥಾನ, ಪಟ್ಟಣದ ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.

ಕಾಲೇಜುಗಳಲ್ಲಿ ಸಂಭ್ರಮ: ವರ್ಷದ ಮೊದಲ ದಿನ ಜಿಲ್ಲೆಯಾದ್ಯಂತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಭ್ರಮ ಮನೆ ಮಾಡಿತ್ತು. ವಿದ್ಯಾರ್ಥಿಗಳು ಹೊಸ ಬಟ್ಟೆ, ಅದರಲ್ಲೂ ವಿದ್ಯಾರ್ಥಿನಿಯರು ಸೀರೆಯುಟ್ಟು ಸಂಭ್ರಮಿಸಿದರು.

ಬಂಡೀಪುರ ಸಫಾರಿಯಲ್ಲೂ ಜನಜಂಗುಳಿ

ಹೊಸ ವರ್ಷದ ಕಾರಣದಿಂದ ಬಂಡೀಪುರಕ್ಕೂ ನೂರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ದಂಡು ದಂಡಾಗಿ ಸಫಾರಿಗೆ ತೆರಳಿದರು.

ಸಫಾರಿ ವೇಳೆ ಜಿಂಕೆ, ಕಾಡಾನೆ, ಹುಲಿ ಸೇರಿದಂತೆ ಹಲವು ಪ್ರಾಣಿಗಳು ಕಂಡವು ಎಂದು ಸಫಾರಿಗೆ ಹೋಗಿದ್ದ ಪ್ರವಾಸಿಗರೊಬ್ಬರು ಸಂತಸ ವ್ಯಕ್ತಪಡಿಸಿದರು.

ಹೊಸ ವರ್ಷದ ದಿನ ಯುವಕರು ಖುಷಿಯ ಸವಾರಿಯಲ್ಲಿ ತೊಡಗಿದ್ದರಿಂದರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ರಸ್ತೆಯ ಬದಿಯ ಎಳನೀರು ವ್ಯಾಪಾರಿಗಳಿಗೆ ಗ್ರಾಹಕರು ಹೆಚ್ಚಿದ್ದರು. ಹೋಟೆಲ್‌ಗಳು ಜನರಿಂದ ತುಂಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.