ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಅನಾಥ!

ಕಾಯಂ ಸಹಾಯಕ ನಿರ್ದೇಶಕರಿಲ್ಲ; ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ಸೂರ್ಯನಾರಾಯಣ ವಿ
Published 25 ಸೆಪ್ಟೆಂಬರ್ 2021, 3:15 IST
Last Updated 25 ಸೆಪ್ಟೆಂಬರ್ 2021, 3:15 IST
ಚಾಮರಾಜನಗರದ ಪ್ರವಾ‌ಸಿ ತಾಣಗಳನ್ನು ಗುರುತಿಸುವ ನಕ್ಷೆ (ಜಿಲ್ಲಾಡಳಿತದ ಚಿತ್ರ)
ಚಾಮರಾಜನಗರದ ಪ್ರವಾ‌ಸಿ ತಾಣಗಳನ್ನು ಗುರುತಿಸುವ ನಕ್ಷೆ (ಜಿಲ್ಲಾಡಳಿತದ ಚಿತ್ರ)   

ಚಾಮರಾಜನಗರ: ಶೇ 49ರಷ್ಟು ಅರಣ್ಯ ಪ್ರದೇಶ, ಪವಾಡ ಪುರುಷರ ನೆಲೆವೀಡು, ಪ್ರಸಿದ್ಧ ದೇವಾಲಯಗಳು, ರಮಣೀಯ ಪ್ರಕೃತಿ, ವ್ಯಾಘ್ರಗಳು ಸೇರಿದಂತೆ ಹಲವು ವನ್ಯ ಪ್ರಾಣಿಗಳ ಆವಾಸ ಸ್ಥಾನವಾಗಿರುವ ಚಾಮರಾಜನಗರ ಜಿಲ್ಲೆ, ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳ ಪ್ರವಾಸಿಗರಿಗೂ ನೆಚ್ಚಿನ ತಾಣ.

ಇಲ್ಲಿನ ಬಂಡೀಪುರ, ಭರಚುಕ್ಕಿ, ಹೊಗೆನಕಲ್‌ ಜಲಪಾತ, ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯ, ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ... ಹೀಗೆ ಪ್ರವಾಸಿ ತಾಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ರತಿ ವರ್ಷ ಲಕ್ಷ, ಲಕ್ಷ ಪ್ರವಾಸಿಗರು (ದೇವಾಲಯಗಳಿಗೆ ಬರುವ ಭಕ್ತರೂ ಸೇರಿ) ಈ ತಾಣಗಳಿಗೆ ಭೇಟಿ ನೀಡುತ್ತಾರೆ.

ಆದರೆ, ಪ್ರವಾಸಿಗರ ನೆಚ್ಚಿನ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ಪ್ರವಾಸೋದ್ಯಮ ಇಲಾಖೆ ಅಕ್ಷರಶಃ ಅನಾಥವಾಗಿದೆ. ಇಲಾಖೆಯು ಸಿಬ್ಬಂದಿ ಕೊರತೆಯಿಂದ ನಲುಗುತ್ತಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಸರ್ಕಾರ ಕೂಡ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿಲ್ಲ.

ADVERTISEMENT

ಇದರಿಂದಾಗಿ, ಬಹುತೇಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಜಿಲ್ಲೆಯಲ್ಲಿ ಪರಿ ಸರ ಪ್ರವಾಸೋದ್ಯಮ ತಾಣಗಳು ಹೆಚ್ಚಾಗಿ ರುವುದರಿಂದ ಅರಣ್ಯ ಇಲಾಖೆಯೇ ಆ ತಾಣಗಳನ್ನು ನಿರ್ವಹಿಸುತ್ತಿದೆ. ಅಂತಹ ಸ್ಥಳಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿವೆ. ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲ.

ಕಾಯಂ ಸಹಾಯಕ ನಿರ್ದೇಶಕರಿಲ್ಲ: ಜಿಲ್ಲೆಯಲ್ಲಿ ಇಲಾಖೆಯ ಯೋಜನೆ, ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಿಬ್ಬಂದಿ ಇಲ್ಲ. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹುದ್ದೆ ಇದ್ದರೂ, ಅದಕ್ಕೆ ಕಾಯಂ ಅಧಿಕಾರಿ ಇಲ್ಲ. ಮೈಸೂರು ಜಿಲ್ಲೆಯ ಸಹಾಯಕ ನಿರ್ದೇಶಕರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಇದಕ್ಕೂ ಮೊದಲು, ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ನೀಡಲಾಗಿತ್ತು.

ಮೈಸೂರು ಹೇಳಿ ಕೇಳಿ ಪ್ರವಾಸೋ ದ್ಯಮಕ್ಕೆ ಹೆಸರುವಾಸಿ. ಅಲ್ಲಿನ ಸಹಾಯಕ ನಿರ್ದೇಶಕರಿಗೆ ಆ ಜಿಲ್ಲೆಯ ಕೆಲಸದ ಒತ್ತಡವೇ ಸಾಕಷ್ಟು ಇರುತ್ತದೆ. ಅದರ ನಡುವೆಯೇ, ಗಡಿ ಜಿಲ್ಲೆಯ ಹೆಚ್ಚುವರಿ ಹೊಣೆಯನ್ನು ಅವರು ಹೊರಬೇಕಾಗಿದೆ. ಅಲ್ಲಿ ಕೆಲಸ ಹೆಚ್ಚಿರುವಾಗ ಇಲ್ಲಿಗೆ ಬರುವುದಕ್ಕೂ ಆಗುವುದಿಲ್ಲ. ಸಭೆಗಳು, ಸಚಿವರ ಭೇಟಿಯ ಸಂದರ್ಭಗಳಿಗೆ ಮಾತ್ರ ಅವರ ಭೇಟಿ ಸೀಮಿತವಾಗಿದೆ.

ಕಚೇರಿಯಲ್ಲೂ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲ. ಒಬ್ಬರು ಕನ್ಸಲ್ಟೆಂಟ್‌ ಇದ್ದಾರೆ. ಕಂಪ್ಯೂಟರ್‌ ಆಪರೇಟರ್‌ ಒಬ್ಬ ರಿದ್ದಾರೆ. ಇಬ್ಬರೂ ಹೊರ ಗುತ್ತಿಗೆಯಲ್ಲಿ ನೇಮಕಗೊಂಡವರು. ಡಿ ಗ್ರೂಪ್‌ ಸಿಬ್ಬಂದಿ ಒಬ್ಬರಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಹೋದರೆ ಖಾಲಿ ಕುರ್ಚಿಗಳೇ ಎದುರಾಗುತ್ತವೆ.

‘ಪ್ರವಾಸೋದ್ಯಮಕ್ಕೆ ವಿಪುಲ ಅವ ಕಾಶವಿರುವ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರೆ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ, ಅಲ್ಲಿ ಆಗ ಬೇಕಿರುವ ಕೆಲಸಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆದು ಸಚಿವರ ಮೇಲೆ ಒತ್ತಡ ಹಾಕಿ ಅನುದಾನ ತರ ಬಹುದು. ಅಧಿಕಾರಿಗಳೇ ಇಲ್ಲದಿದ್ದರೆ ಈ ಕೆಲಸಗಳೆಲ್ಲ ಆಗುವುದಾದರೂ ಹೇಗೆ’ ಎಂಬುದು ಪ್ರವಾಸಿಗರು ಹಾಗೂ ಜನರ ಪ್ರಶ್ನೆ.

ಚೆಲುವ ಚಾಮರಾಜನಗರ ಅಭಿಯಾನ

ಜಿಲ್ಲೆಯ ಪ್ರವಾಸಿ ತಾಣಗಳು, ಇಲ್ಲಿನ ನೆಲ, ಜಲ ಹಾಗೂ ಸಂಸ್ಕೃತಿ ಬಗ್ಗೆ ಹೊರ ಜಗತ್ತಿಗೆ ತಿಳಿಸಿ, ಹೆಚ್ಚಿನ ಪ್ರವಾಸಿಗರನ್ನು ಜಿಲ್ಲೆಯತ್ತ ಸೆಳೆಯಲು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ‘ಚೆಲುವ ಚಾಮರಾಜನಗರ’ ಎಂಬ ಅಭಿಯಾನ ರೂಪಿಸಿದ್ದರು.

ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೈಪಿಡಿ ಹಾಗೂ ವಿಡಿಯೊವನ್ನು ಬಿಡುಗಡೆ ಮಾಡಲಾಗಿತ್ತು.

ನಟ ಪುನೀತ್‌ ರಾಜ್‌ಕುಮಾರ್‌ ಈ ಅಭಿಯಾನದ ರಾಯಭಾರಿಯಾಗಿದ್ದರು. ಅಭಿಯಾನ ಆರಂಭವಾದ ತಕ್ಷಣವೇ ಕೋವಿಡ್‌ ಹಾಳಿ ಆರಂಭವಾಗಿದ್ದರಿಂದ ಇದಕ್ಕೆ ಹೆಚ್ಚು ಯಶಸ್ಸು ಸಿಕ್ಕಿಲ್ಲ.

ಪ್ರಮುಖ ಪ್ರವಾಸಿ ತಾಣಗಳು

ಪರಿಸರ ಪ್ರವಾಸಿ ಕೇಂದ್ರಗಳು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (ಬಂಡೀಪುರ ಸಫಾರಿ), ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ (ಕೆ.ಗುಡಿ ಸಫಾರಿ), ಭರಚುಕ್ಕಿ ಜಲಪಾತ, ಹೊಗೆನಕಲ್‌ ಜಲಪಾತ

ಧಾರ್ಮಿಕ ಪ್ರವಾಸಿ ತಾಣಗಳು: ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯ, ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಗೋಪಾಲಸ್ವಾಮಿ ದೇವಾಲಯ, ಹುಲುಗನಮುರಡಿ ವೆಂಕಟರಮಣ ಸ್ವಾಮಿ ದೇವಾಲಯ, ಶಿವನಸಮುದ್ರದ ದೇವಾಲಯಗಳು, ಚಾಮರಾಜೇಶ್ವರ ದೇವಾಲಯ, ಶ್ರೀ ಕ್ಷೇತ್ರ ಕನಕಗಿರಿ

ಪಾರಂಪರಿಕ ಸ್ಥಳಗಳು: ನರಸಮಂಗಲದ ರಾಮಲಿಂಗೇಶ್ವರ ದೇವಾಲಯ, ಯಳಂದೂರಿನ ಬಳೆ ಮಂಟಪ, ಅರ್ಕೇಶ್ವರ ದೇವಾಲಯ

ಇತರೆ ಕೇಂದ್ರಗಳು: ಗುಂಡಾಲ್‌ ಜಲಾಶಯ, ಸುವರ್ಣಾವತಿ ಜಲಾಶಯ, ಚಿಕ್ಕಹೊಳೆ ಜಲಾಶಯ, ಕರಿವರದರಾಜನಬೆಟ್ಟ, ಯಳಂದೂರಿನ ದಿವಾನ್‌ ಪೂರ್ಣಯ್ಯನವರ ನಿವಾಸ ಮತ್ತು ಛತ್ರ

–––

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಈಗ ಪ್ರಥಮ ದರ್ಜೆ ಸಹಾಯಕರೊಬ್ಬರ (ಎಫ್‌ಡಿಎ) ನೇಮಕವಾಗಿದ್ದು, ಶೀಘ್ರದಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ

- ರಾಘವೇಂದ್ರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.