ಯಳಂದೂರು: ಕಬಿನಿ ಕಾಲುವೆಯಲ್ಲಿ ನೀರು ಹರಿಯುತ್ತಿದ್ದು ಭತ್ತದ ತಾಕುಗಳ ಸಿದ್ಧತೆಗೆ ವೇಗ ಸಿಕ್ಕಿದ್ದು ತಾಲ್ಲೂಕಿನಾದ್ಯಂತ ನಾಟಿ ಕೆಲಸಗಳು ಬಿರುಸು ಪಡೆದಿವೆ. ಇದರ ನಡುವೆ ಶ್ರಮಿಕರ ಕೊರತೆಯಿಂದ ಬೇಸತ್ತಿದ್ದ ಸಾಗುವಳಿದಾರರು ಉತ್ತರ ಭಾರತದ ಶ್ರಮಿಕರನ್ನು ಬಳಸಿಕೊಂಡು ಕೃಷಿ ಕಾಯಕಕ್ಕೆ ಮುಂದಾಗಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಂದೆರಡು ಬಾರಿ ಬಿರುಸು ಮಳೆ ಬಿದ್ದಿತ್ತು. ವಯನಾಡಿನಲ್ಲಿ ಸುರಿದ ಮಳೆಯಿಂದ ಕಬಿನಿ ಜಲಾಶಯ ಬಹುಬೇಗ ಭರ್ತಿಯಾದ ಪರಿಣಾಮ ನಾಲೆಗಳಿಗೆ ಸಕಾಲದಲ್ಲಿ ನೀರು ಪೂರೈಸಿದ್ದರಿಂದ ಭತ್ತ ಬಿತ್ತನೆ ಚಟುವಟಿಕೆಗಳಿಗೆ ವೇಗ ದೊರತಿದೆ. ತಾಲ್ಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತ ನಾಟಿಗೆ ಚಾಲನೆ ಸಿಕ್ಕಿದೆ.
ಆದರೆ, ನಾಟಿ ಕಾರ್ಯಕ್ಕೆ ಸ್ಥಳೀಯವಾಗಿ ಕಾರ್ಮಿಕರ ಕೊರತೆ ಎದುರಾಗಿರುವುದರಿಂದ ರೈತರು ಹೊರ ರಾಜ್ಯದ ಶ್ರಮಿಕರನ್ನು ಅವಲಂಬಿಸಬೇಕಾದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯವಸಾಯಗಾರರು.
ಹಿಂದೆಲ್ಲ ಭತ್ತ ಬಿತ್ತನೆ ಸಂದರ್ಭ ಗ್ರಾಮೀಣ ಪ್ರದೇಶದ ಮಹಿಳೆಯರು ಕೆಲಸ ನಿರ್ವಹಿಸಲು ಹೆಚ್ಚಾಗಿ ಬರುತ್ತಿದ್ದರು. ಎಕರೆವಾರು ಗುತ್ತಿಗೆ ಆಧಾರದಲ್ಲಿ ಕೆಲಸ ಮುಗಿಸಿ ಕೊಡುತ್ತಿದ್ದರು. 3 ತಿಂಗಳು ದುಡಿಮೆ ಸಿಗುತ್ತಿತ್ತು. ಆದರೆ, ಈಚಿನ ವರ್ಷಗಳಲ್ಲಿ ಕೃಷಿ ಕೆಲಸಕ್ಕೆ ಬರುವವರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಸದಾ ನೀರು-ಕೆಸರಿನಲ್ಲಿ ಶ್ರಮಿಸುವ ಆಸಕ್ತಿ ಕುಂದಿದೆ ಎನ್ನುತ್ತಾರೆ ಭತ್ತದ ಕೃಷಿಕ ಅಂಬಳೆ ಮಹದೇವಸ್ವಾಮಿ.
ಹೊರ ರಾಜ್ಯದ ಕಾರ್ಮಿಕರು ಮುಂಗಾರು ಭತ್ತದ ನಾಟಿ ಕಾರ್ಯ ಸಕಾಲದಲ್ಲಿ ಮುಗಿಸಲು ನೆರವಾಗುತ್ತಿದ್ದಾರೆ. ಮುಂಜಾನೆಯಿಂದ ಸಂಜೆಯವರೆಗೂ ದುಡಿಯುವುದರಿಂದ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳು ಮುಗಿಯುತ್ತಿರುವುದರಿಂದ ಕೃಷಿಕರೂ ಹೊರ ರಾಜ್ಯದ ಕಾರ್ಮಿಕರ ಮೇಲೆ ಭರವಸೆ ಮೂಡಿದೆ. ಹೀಗಾಗಿ. ಭತ್ತದ ತಾಕನ್ನು ವಿಸ್ತರಿಸುವತ್ತ ರೈತರು ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ಬೇಸಾಯಗಾರ ಯರಿಯೂರು ನಂಜಶೆಟ್ಟಿ ಹೇಳಿದರು.
1 ಎಕೆರಗೆ ₹ 4,500 ಕೂಲಿ: ಕೊಳ್ಳೇಗಾಲ ಮತ್ತು ಯಳಂದೂರು ಸುತ್ತಮುತ್ತ ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದ ಶ್ರಮಿಕರು ನೂರಾರು ಸಂಖ್ಯೆಯಲ್ಲಿ ಬಂದಿದ್ದು 1 ಎಕೆರೆ ಭತ್ತನಾಟಿಗೆ ₹ 4500 ಕೂಲಿ ನಿಗದಿಪಡಿಸಿದ್ದಾರೆ. ದಲ್ಲಾಳಿಗೆ 1 ಎಕರೆಗೆ 500 ನೀಡಬೇಕಿದೆ. ಸಸಿಮಡಿಯಿಂದ ಪೈರು ಕಿತ್ತು, ಗದ್ದೆಯ ಎಲ್ಲಾ ಭಾಗಗಳಿಗೆ ತೆರಳಿ ನಾಟಿ ಮಾಡಿದರೆ ₹ 6,500ದವರೆಗೂ ನೀಡಬೇಕು.
ಸ್ಥಳೀಯ ಕಾರ್ಮಿಕರು ಕೈಗೆ ಸಿಕ್ಕಷ್ಟು ಪೈರು ಕಿತ್ತು ನಾಟಿ ಮಾಡುತ್ತಾರೆ ನಮ್ಮ ಕಾರ್ಮಿಕರು ಯಂತ್ರದ ಕೊಯ್ಲಿಗೆ ಸಿಗುವಂತೆ ಕುಶಲತೆಯಿಂದ ನಾಟಿ ಕಾಯಕ ಮುಗಿಸುತ್ತಾರೆಗೌತಮ್ ಬಿಜ್ಞೇಶ್. ಪಶ್ಚಿಮ ಬಂಗಾಳ
ಹೆಚ್ಚು ಕುಶಲತೆ
1 ತಂಡ ಒಂದು ದಿನಕ್ಕೆ 10 ಎಕೆರೆ ನಾಟಿ ಮಾಡಿ ಮುಗಿಸುತ್ತದೆ. ಜತೆಗೆ ಒಂದೊಂದೇ ಪೈರನ್ನು ನಾಟಿ ಮಾಡುವ ಕುಶಲತೆಯೂ ಇವರಿಗೆ ಸಿದ್ಧಿಸಿರುವುದು ಉತ್ತರ ಭಾರತದ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.