ಹನೂರು: ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸ ಸಿಗುತ್ತಿಲ್ಲ, ಕೆಲಸ ನೀಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿ ಸಾಕಷ್ಟು ತಿಂಗಳ ಕಳೆದರೂ ಪ್ರಯೋಜನವಾಗಿಲ್ಲ ಎಂದು ಆಲಂಬಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲ್ಲೂಕಿನ ಗೋಪಿನಾಥಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಲಂಬಾಡಿ ಗ್ರಾಮಸ್ಥರು ಅದರಲ್ಲೂ ಸೋಲಿಗ ಸಮುದಾಯದ ಜನರು ಕೆಲಸ ನೀಡುವಂತೆ ಒತ್ತಾಯಿಸಿದ್ದು, ಆಲಂಬಾಡಿ ಗ್ರಾಮದಲ್ಲಿ ಯಾವುದೇ ರೀತಿಯ ಕೂಲಿ ಕೆಲಸ ಸಿಗದೇ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಆಲಂಬಾಡಿ ಗ್ರಾಮದ ಮಹಿಳೆ ವೆಂಕಟಲಕ್ಷ್ಮಿ ಮಾತನಾಡಿ, ನಾವು ಕಳೆದ ಎರಡು ವರ್ಷದಿಂದಲೂ ನಮ್ಮ ಗ್ರಾಮ ಪಂಚಾಯಿತಿ ಸದಸ್ಯರೊಡಗೂಡಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ಕೇಳುತ್ತಲೇ ಇದ್ದೀವಿ. ಆದರೆ ಕೆಲಸ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೆಲಸ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆಲಂಬಾಡಿ ಗ್ರಾಮದ ವೆಂಕಟೇಶ್, ಗೋವಿಂದಪ್ಪ, ರಾಜಮ್ಮ ಸೇರಿದಂತೆ ಗ್ರಾಮಸ್ಥರು, ಮಹಿಳೆಯರು, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.