ಗುಂಡ್ಲುಪೇಟೆ: ‘ರೈತರು ಕೃಷಿಯಲ್ಲಿ ಅತ್ಯಧಿಕ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಕೂಡಲೇ ರೈತರು ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಕೊಲ್ಲಾಪುರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಭಾರತೀಯ ಕಿಸಾನ್ ಸಂಘದ ವತಿಯಿಂದ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಹಾಗೂ ದೇಶಿ ಗೋತಳಿಗಳ ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಭಾರತವು ವಿಶ್ವದ ಶೇ 2ರಷ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೂ ವಿಶ್ವದಲ್ಲಿ ಅತಿ ಹೆಚ್ಚಿನ ಹಾಲು ಉತ್ಪಾದಿಸುತ್ತಿದೆ. ವಿಶ್ವದ ಶೇ 40ರಷ್ಟು ಕಾಳು ಉತ್ಪಾದನೆ ಮಾಡುತ್ತಿದೆ. ಶೇ 70ರಷ್ಟು ರೈತರು ಇಷ್ಟವಿಲ್ಲದೆ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ರೈತರು ತಮ್ಮ ವೃತ್ತಿ ಬಗ್ಗೆ ಪ್ರೀತಿ ಗೌರವ ಹಾಗೂ ಹೆಮ್ಮೆ ಪಡಬೇಕು’ ಎಂದರು.
ಪಡಗೂರು ಅಡವಿ ಮಠಾಧ್ಯಕ್ಷ ಶಿವಲಿಂಗೇಂದ್ರ ಸ್ವಾಮೀಜಿ, ಮೂಡಗೂರು ಮಠಾಧ್ಯಕ್ಷ ಇಮ್ಮಡಿ ಉದ್ದಾನಸ್ವಾಮೀಜಿ, ದೇಪಾಪುರ ಮಠಾಧ್ಯಕ್ಷ ಬಸವಣ್ಣಸ್ವಾಮೀಜಿ, ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಲ್.ಮಹದೇವಸ್ವಾಮಿ, ಸಚ್ಚಿದಾನಂದ ಟ್ರಸ್ಟ್ ನ ಬಸವರಾಜು, ಟಿ.ಸಿ.ಬಸಪ್ಪದೇವರು ಸೇರಿದಂತೆ ಹಲವರು ಇದ್ದರು.
ಶೇ 30ರಷ್ಟು ಕಳೆ ಬೆಳೆಗಳನ್ನು ನಾಶಮಾಡುತ್ತಿದೆ. ಕಳೆ ನಾಶಕ್ಕೆ ಬಳಸುತ್ತಿರುವ ರಾಸಾಯನಿಕಗಳು ಭೂಮಿಯ ಫಲವತ್ತತೆಯನ್ನು ಹಾಳು ಮಾಡಿವೆ. ಮನುಷ್ಯರ ಅನಾರೋಗ್ಯಕ್ಕೆ ದಾರಿಯಾಗಿದೆಕಾಡಸಿದ್ದೇಶ್ವರ ಸ್ವಾಮೀಜಿ ಕನ್ಹೇರಿ ಮಠ
ಸಾವಯವ ಪದ್ಧತಿಯಿಂದ ಆರೋಗ್ಯ
‘ಹಾಲು ಕೊಡದಿದ್ದರೂ ಮನೆಯಲ್ಲಿ ನಾಟಿ ಹಸು ಸಾಕುವುದರಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಜೀವಾಮೃತ ತಯಾರಿಸಿ ಬಳಸಿದರೆ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳಿಗೆ ಮಾಡುವ ಖರ್ಚು ಉಳಿಯುತ್ತದೆ. ನಾಟಿ ಗೋವುಗಳಿಂದ ತಯಾರಿಸಿದ ಉತ್ಪನ್ನಗಳಿಂದ ಪರಿಸರ ಹಾಗೂ ಬಳಕೆದಾರರ ಆರೋಗ್ಯ ಉತ್ತಮವಾಗುತ್ತದೆ. ಗೋ ಉತ್ಪನ್ನಗಳನ್ನು ಬಳಸಿ ಕಳೆಗಳನ್ನು ನಾಶಪಡಿಸಬಹುದು. ಸಂಪೂರ್ಣ ಸಾವಯವ ಪದ್ಧತಿಯಿಂದ ಬೆಳೆದ ಬೆಳೆಗಳನ್ನು ಬಳಸುವುದರಿಂದ ಜನಸಾಮಾನ್ಯರನ್ನು ಕಾಡುತ್ತಿರುವ ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಭೂಮಿಯ ಆರೋಗ್ಯ ಸುಧಾರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.