
ಯಳಂದೂರು: ಕಬಿನಿ ನೀರು ಬಳಸಿಕೊಂಡು ಕೆಸ್ತೂರು ಕೆರೆ ಅಚ್ಚುಕಟ್ಟು ಸುತ್ತಮುತ್ತ ಬೆಳೆದಿರುವ ಭತ್ತದ ಫಸಲಿಗೆ ಸೊಳ್ಳೆ ರೋಗಬಾಧೆ (ಕಂದು ಜಿಗಿಹುಳು) ಕಾಣಿಸಿಕೊಂಡಿದೆ. ಹಿಡುವಳಿದಾರರು ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬಾರದಿರುವುದು ಬೇಸಾಯಗಾರರನ್ನು ಆತಂಕಕ್ಕೆ ದೂಡಿದೆ.
ತಾಲ್ಲೂಕಿನಲ್ಲಿರುವ ತಂಪಾದ ಹವಾಮಾನ, ನಿಯಮಿತ ಮಳೆ ಹಾಗೂ ನಾಲೆ ನೀರಿನ ಹರಿವು ಈ ವರ್ಷ ಭತ್ತದ ಬೆಳೆಗೆ ಪೂರಕವಾಗಿದೆ. ತಾಲ್ಲೂಕಿನಲ್ಲಿ 3.300 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಮೊದಲು ನಾಟಿ ಮಾಡಿದ ಭತ್ತ ಇದೀಗ ಕಾಳುಗಟ್ಟುವ ಹಂತ ತಲುಪಿವೆ. ಆದರೆ, ಹಲವು ಕಡೆಗಳಲ್ಲಿ ಕಂದು ಜಿಗಿಹುಳು ಕಾಟ ಹೆಚ್ಚಾಗಿದ್ದು ರೈತರು ಚಿಂತೆಗೀಡಲಾಗಿದ್ದಾರೆ. ಆರಂಭದಲ್ಲಿ ಕೆಲವು ತಾಕುಗಳಲ್ಲಿ ಕಾಣಿಸಿಕೊಂಡಿರುವ ಸೊಳ್ಳೆ ರೋಗ ಸಾವಿರಾರು ಎಕರೆ ಪ್ರದೇಶಕ್ಕೆ ಹರಡಿದರೆ ಇಳುವರಿಯಲ್ಲಿ ಭಾರಿ ಕುಸಿತವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಂದು ಜಿಗಿಹುಳು ಕಾಣಿಸಿಕೊಂಡ ಕಡೆಗಳಲ್ಲಿ ರೈತರು ರೋಗ ನಿಯಂತ್ರಣಕ್ಕೆ ಹಂತಹಂತವಾಗಿ ಹಲವು ಬಾರಿ ಔಷಧೋಪಚಾರ ಮಾಡಿದ್ದಾರೆ. ಆದರೂ ರೋಗ ಸಂಪೂರ್ಣ ಹತೋಟಿಗೆ ಬಂದಿಲ್ಲ. ಕೀಟಗಳ ಹಾವಳಿಯಿಂದ ಭತ್ತದ ತೆನೆಯ ತಳಭಾಗವು ಒಣಗುತ್ತದೆ. ರೋಗ ಉಲ್ಭಣಗೊಂಡು ಸುಳಿ ಕಳಚಿ ಬೀಳುತ್ತದೆ.
ಮಳೆ ಕಡಿಮೆಯಾದ ನಂತರ ಸೊಳ್ಳೆಕಾಟ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಹೆಚ್ಚಾಗಿದ್ದು ಸಾವಿರಾರು ರೂಪಾಯಿ ವ್ಯಯಿಸಿ ಔಷಧ ಸಿಂಪರಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಕೆಸ್ತೂರು ರೈತ ಎಂ.ನಾಗರಾಜು.
ಕೃಷಿಕರು ಯತೇಚ್ಛ ರಸಾಯನಿಕ ಗೊಬ್ಬರಗಳ ಬಳಕೆ, ವಿಶೇಷವಾಗಿ ಹೆಚ್ಚು ಯೂರಿಯಾ ಬಳಕೆ ಮಾಡುತ್ತಿರುವುದು ಹಾಗೂ ಅತಿಯಾದ ಕೀಟನಾಶಕ ಸಿಂಪಡಣೆ ಮಾಡುತ್ತಿರುವುದು ಬೆಳೆಗಳ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತಿದೆ. ಮಿತಿಗಿಂತ ಹೆಚ್ಚಾಗಿ ರಾಸಾಯನಿಕ ಬಳಕೆ ಮಾಡದಂತೆ ರೈತರಲ್ಲಿ ಜಾಗೃತಿ ಜಾಗೃತಿ ಮೂಡಿಸಲಾಗುತ್ತಿದೆ. ಬೆಳೆ ಪರಿವರ್ತನೆ, ಆಳವಾದ ಉಳುಮೆ, ಸಸಿ ತಯಾರಿ ವೇಳೆ ಬೀಜೋಪಚಾರ, ಕಡಿಮೆ ನೀರು ಬಳಕೆ, ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ರೋಗ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ತಾಲ್ಲೂಕು ಕೃಷಿ ಅಧಿಕಾರಿ ಅಮೃತೇಶ್ವರ.
ಕಡಿಮೆ ನೀರು, ಔಷಧೋಪಚಾರ ಅಗತ್ಯ:
ಭತ್ತ ಕಾಳು ಕಟ್ಟುವ ಸಮಯದಲ್ಲಿ ಹಸಿರು ಇರುವ ಬೆಳೆ ಕಂದು ಬಣ್ಣಕ್ಕೆ ತಿರುಗಿದರೆ ಕಂದು ಜಿಗಿಹುಳದ ಬಾಧೆಯ (ಬಿಪಿಎಚ್) ಲಕ್ಷಣವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಕಂದುಜಿಗಿ ಹುಳ ರೋಗಕ್ಕೆ ಸೊಳ್ಳೆರೋಗ ಎಂತಲೂ ಕರೆಯುತ್ತಾರೆ. ಕೀಟದ ಹಾವಳಿ ಹೆಚ್ಚಾದರೆ ತೆನೆ ಚೆನ್ನಾಗಿ ಕಂಡರೂ ಕಾಳು ಕಟ್ಟುವುದಿಲ್ಲ. ಜಿಗಿಹುಳು ಭಾದೆ ನಿಯಂತ್ರಿಸಲು ಗದ್ದೆ ಒಣಗಿಸಿ ನಂತರ ನೀರು ಕೊಡಬೇಕು. ನೀರಿನ ಪ್ರಮಾಣ ಸಾಧ್ಯವಾದಷ್ಟೂ ಕಡಿಮೆ ಇರಬೇಕು. ಕಡಿಮೆ ಪ್ರಮಾಣದ ಔಷಧೋಪಚಾರ ಮಾಡಬೇಕು ಎನ್ನುತ್ತಾರೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.
ಜಿಲ್ಲೆಯಲ್ಲಿ ಚಾಮರಾಜನಗರ ತಾಲ್ಲೂಕು, ಸಂತೇಮರಹಳ್ಳಿ ಹೋಬಳಿ, ಯಳಂದೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಭತ್ತ ಬೆಳೆಯಲಾಗುತ್ತದೆ. ಕಬಿನಿ, ಕಾವೇರಿ ನದಿಗಳ ನಾಲೆಯ ನೀರು ಭತ್ತ ಬೆಳೆಯಲು ಆಧಾರವಾಗಿದೆ.
ಉತ್ತಮ ಇಳುವರಿ ನಿರೀಕ್ಷೆ
‘ಪ್ರಸಕ್ತ ವರ್ಷ ಭತ್ತದ ಬೆಳೆಗೆ ಹಿತಕರ ವಾತಾವರಣ ಇದೆ. ಮಳೆ ಬಿಸಿಲಿನ ಸಂಯೋಜನೆ ಬೆಳೆಗೆ ಪೂರಕವಾಗಿದೆ. ಕೀಟಬಾಧೆಯೂ ಹೆಚ್ಚಾಗಿ ಕಂಡುಬಂದಿಲ್ಲ. ರೈತರು ಆತಂಕ ಪಡುವ ಅಗತ್ಯ ಇಲ್ಲ’ ಎನ್ನುತ್ತಾರೆ ಕೃಷಿ ಇಲಾ ಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.