ಮಹದೇಶ್ವರ ಬೆಟ್ಟ; ಚಾಮರಾಜನಗರ ಜಿಲ್ಲೆಗೆ ಭೇಟಿಕೊಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯವಷ್ಟೆ, ಜಿಲ್ಲೆಗೆ ಬಂದ ಮೇಲೆ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ, ಕುರ್ಚಿಯೂ ಗಟ್ಟಿಯಾಗುತ್ತಲೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಜಿಲ್ಲೆಗೆ 10 ರಿಂದ 15 ಬಾರಿ ಭೇಟಿ ನೀಡಿದ್ದೇನೆ, ಸಮಾಜದ ಪ್ರಗತಿಗೆ ಅಡ್ಡಿಯಾಗಿರುವ ಮೌಢ್ಯಗಳನ್ನು ತೊಡೆದುಹಾಕಬೇಕಿದೆ ಎಂದರು.
ಮಲೆ ಮಹದೇಶ್ವರನ ಕ್ಷೇತ್ರದಲ್ಲಿ ಶುಚಿತ್ವ, ಮೂಲಸೌಕರ್ಯಕ್ಕೆ ಒತ್ತು ನೀಡುವಂತೆ ಸೂಚನೆ ನೀಡಲಾಗಿದೆ. ಕ್ಷೇತ್ರವನ್ನು ಮದ್ಯಪಾನ ಮುಕ್ತವಾಗಿಸಲು ಹಾಗೂ ತಿರುಪತಿ ಮಾದರಿಯಲ್ಲಿ ಲಡ್ಡು ತಯಾರಿಸಿ ಕಡಿಮೆ ದರದಲ್ಲಿ ಭಕ್ತರಿಗೆ ನೀಡುವಂತೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ಶಾಸಕ ವಿನಯ ಕುಲಕರ್ಣಿ ನಿವಾಸದ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರ ಇಡಿ ಬಳಸಿಕೊಂಡು ದಾಳಿ ಮಾಡಿಸುತ್ತಿದೆ, ಬಿಜೆಪಿ ನಾಯಕರ ಮೇಲೆ ಇಡಿ ದಾಳಿ ಏಕೆ ನಡೆಯುವುದಿಲ್ಲ, ಅವರೆಲ್ಲರೂ ಸಾಚಾಗಳಾ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಪಹಲ್ಗಾಮ್ ಭಯೋತ್ಪಾದನಾ ದಾಳಿ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಸಿಎಂ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.