ADVERTISEMENT

ರಾಜ್ಯದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಯರ ಬಗ್ಗೆ ಎಚ್ಚರ ವಹಿಸಲು ಸೂಚನೆ: ಸಿಎಂ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 8:33 IST
Last Updated 24 ಏಪ್ರಿಲ್ 2025, 8:33 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಮಹದೇಶ್ವರ ಬೆಟ್ಟ (ಚಾಮರಾಜನಗರ ‌ಜಿಲ್ಲೆ): ಕರ್ನಾಟಕದಲ್ಲಿ ಅವಧಿ ಮೀರಿ ನೆಲಸಿರುವ ವಿದೇಶಿಯರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಲೆ ಮಹದೇಶ್ವರ ಹೆಲಿಪ್ಯಾಡ್‌ನಲ್ಲಿ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದರು.

ADVERTISEMENT

ಉಗ್ರರನ್ನು ಮಟ್ಟಹಾಕಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ.‌ ಉಗ್ರರು ಯಾವುದೇ ರಾಜ್ಯದಲ್ಲಿರಲಿ ಅವರನ್ನು ಮಟ್ಟ ಹಾಕಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.

ಬಂದೋಬಸ್ತ್ ಸಡಿಲಗೊಳಿಸಬಾರದಿತ್ತು: ಉಗ್ರರ ಚಟುವಟಿಕೆಗಳಿಗೆ ಅವಕಾಶ ಕೊಡಕೂಡದು. ಪಹಲ್ಗಾಮ್ ಘಟನೆ ಅತ್ಯಂತ ಖಂಡನೀಯವಾದ ಹಾಗೂ ಅಮಾನುಷವಾದ ಘಟನೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಪುಲ್ವಾಮಾ ಘಟನೆಯೂ ಇದೇ ಜಿಲ್ಲೆಯಲ್ಲಿ ನಡೆದಿದ್ದರಿಂದ ಎಚ್ಚರಿಕೆಯಿಂದ ಇರಬೇಕಾಗಿತ್ತು. ಬಂದೋಬಸ್ತ್ ಸಡಿಲಗೊಳಿಸಬಾರದಿತ್ತು. ಅಲ್ಲಿ ಗುಪ್ತಚರ ವ್ಯವಸ್ಥೆಯ ವೈಫಲ್ಯವಾಗಿದೆ ಎಂದರು.

ಉಗ್ರರನ್ನು ಹಾಕಲು ಎಲ್ಲ ಸಹಕಾರ: ಘಟನೆ ನಡೆದ ಬಳಿಕ ಕ್ರಮ ತೆಗೆದುಕೊಳ್ಳುವುದು ಬೇರೆ. ಘಟನೆಯಾಗದಂತೆ ತೆಗೆದುಕೊಳ್ಳುವ ಕ್ರಮಗಳು ಬೇರೆ. ಅದನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಪುಲ್ವಾಮಾದಲ್ಲಿ 40 ಸೈನಿಕರು ಪ್ರಾಣತೆತ್ತರು. ಈ ಘಟನೆಯಲ್ಲಿ 28 ಜನ ನಾಗರಿಕರು ಮೃತರಾಗಿದ್ದಾರೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕಿತ್ತು.ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಉಗ್ರರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿರಲಿ ಅವರೆಲ್ಲರನ್ನೂ ಮಟ್ಟ ಹಾಕಬೇಕಿರುವುದು ಸರ್ಕಾರದ ಜವಾಬ್ದಾರಿ. ಅದಕ್ಕೆ ಬೇಕಾಗಿರುವ ಎಲ್ಲಾ ಸಹಕಾರ, ಬೆಂಬಲವನ್ನು ನಾವು, ನಮ್ಮ ಸರ್ಕಾರ, ಪಕ್ಷ ಕೊಡುತ್ತದೆ ಎಂದರು.

₹ 10 ಲಕ್ಷ ಪರಿಹಾರ: ಉಗ್ರರ ದಾಳಿಯಲ್ಲಿ ಮೃತಪಟ್ಟ ರಾಜ್ಯದ ಮೂವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಲಾಗುತ್ತಿದೆ. ಪೊಲೀಸ್ ಗೌರವದಿಂದ ಅಂತ್ಯಕ್ರಿಯೆ ನಡೆಯಲಿದೆ ಎಂದರು.

ಕಾದು ನೋಡಿ
ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಗೆ ಯಾವುದೇ ಅನುದಾನ ಘೋಷಣೆಯಾಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯ ನಂತರ ಮಾತನಾಡುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರದ ರಾಜಕೀಯ ದ್ವೇಷ

ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದರೆ ತಕ್ಷಣವೇ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಬಗ್ಗೆ ಪ್ರಧಾನಿ, ಗೃಹ ಸಚಿವರನ್ನು ಭೇಟಿ ಮಾಡಿದ್ದರೂ ಏನೂ ಆಗಿಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಅನುದಾನವನ್ನು ಕೊಡುತ್ತಿಲ್ಲ. 2023-24ರಲ್ಲಿ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ ₹ 5,300 ಕೋಟಿ ಅನುದಾನವನ್ನು ಈವರೆಗೆ ಕೊಟ್ಟಿಲ್ಲ. ಇದು ರಾಜಕೀಯ ದ್ವೇಷದಂತೆ ಕಾಣುತ್ತದೆ ಎಂದು‌ ದೂರಿದರು.

ಜಿಲ್ಲೆಯ ಪ್ರಮುಖ ಯೋಜನೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ

ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಹಾಗೂ ಚಾಮರಾಜನಗರ ಜಿಲ್ಲೆಗೆ ಅಗತ್ಯವಿರುವ ಪ್ರಮುಖ ಯೋಜನೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.