ADVERTISEMENT

ಪಾಕಿಸ್ತಾನ ಏಜೆಂಟ್‌ಗಳನ್ನು ಸದೆ ಬಡಿಯುತ್ತೇವೆ: ಕೇಂದ್ರ ಸಚಿವ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಮೇ 2022, 13:09 IST
Last Updated 7 ಮೇ 2022, 13:09 IST
ಎ. ನಾರಾಯಣಸ್ವಾಮಿ
ಎ. ನಾರಾಯಣಸ್ವಾಮಿ   

ಚಾಮರಾಜನಗರ: ‘ಪಾಕಿಸ್ತಾನದ ಏಜೆಂಟ್‌ಗಳು ದೇಶದಲ್ಲಿ ಸಕ್ರಿಯರಾಗಿದ್ದಾರೆ. ಅವರು ಮಂಗಳೂರು, ಕೇರಳ, ದೆಹಲಿ ಸೇರಿದಂತೆ ಎಲ್ಲೇ ಹುಟ್ಟಿಕೊಳ್ಳಲಿ ಅವರನ್ನು ಸದೆಬಡಿಯುತ್ತೇವೆ. ಯಾವುದೇ ಕಾರಣಕ್ಕೂ ಬಿಡುವುದಿಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಶನಿವಾರ ನಗರದಲ್ಲಿ ಹೇಳಿದರು.

ಕವಲಂದೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಾಕಿಸ್ತಾನ ಪರ ಘೋಷಣೆ ಕೂಗುವ ಪ್ರವೃತ್ತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭವಾಗಿತ್ತು. ಅದಕ್ಕಾಗಿಯೇ ಸಂವಿಧಾನ ಕಲಂ 370 ತೆಗೆದು ಹಾಕಿದ್ದೇವೆ. ಹಿಂದಿನ ಸರ್ಕಾರಗಳು ಇದನ್ನು ನಿರ್ವಹಿಸಲು ವಿಫಲರಾಗಿದ್ದವು. ಈಗ ಪಾಕಿಸ್ತಾನದಲ್ಲಿ ಸರ್ಕಾರ ಬದಲಾದಾಗ ಮತ್ತೆ ಈ ಪ್ರವೃತ್ತಿ ಹುಟ್ಟಿಕೊಂಡಿದೆ. ಇದನ್ನು ನಿಗ್ರಹಿಸುವ ಶಕ್ತಿ ಭಾರತಕ್ಕಿದೆ. ನಿಗ್ರಹ ಮಾಡುತ್ತೇವೆ’ ಎಂದರು.

‘ಮಂಗಳೂರಿನಲ್ಲಿ ಹಲವು ಸಂಘಟನೆಗಳಿವೆ. ಪಾಕಿಸ್ತಾನದ ಏಜೆಂಟ್‌ಗಳು ಹುಟ್ಟಿಕೊಳ್ಳುವುದೇ ಅಲ್ಲಿ. ಪಾಕಿಸ್ತಾನದ ಏಜೆಂಟ್‌ಗಳಂತೆ ನಡೆದುಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ, ಕೇಂದ್ರ ಸರ್ಕಾರ ಶಕ್ತವಾಗಿವೆ.ಧರ್ಮ ಸಂಘರ್ಷ ಪ್ರಕರಣಗಳು ನಡೆದಾಗ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಕವಲಂದೆ ‍ಪ್ರಕರಣದಲ್ಲೂ ಇಬ್ಬರನ್ನು ಬಂಧಿಸಲಾಗಿದೆ’ ಎಂದರು.

ADVERTISEMENT

ರಾಜ್ಯ ಬಿಜೆಪಿ ಸರ್ಕಾರದ ಮೇಲಿನ ಶೇ 40 ಕಮಿಷನ್‌ ಪಡೆಯುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೇಂದ್ರದಿಂದ ಬಿಡುಗಡೆಯಾಗುವ ಹಣದಲ್ಲಿ ಶೇ 5 ಕೂಡ ಜನರಿಗೆ ತಲುಪುವುದಿಲ್ಲ ಎಂದು ರಾಜೀವ್‌ ಗಾಂಧಿ ಹೇಳಿದ್ದರು. ಹಾಗಿದ್ದರೆ ಶೇ 95 ರಷ್ಟು ಕಮಿಷನ್‌ ಅನ್ನು ಕಾಂಗ್ರೆಸ್‌ನವರು ಪಡೆದಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಕಮಿಷನ್ ಯಾವಾಗ ಆರಂಭವಾಯಿತು? ಭ್ರಷ್ಟಾಚಾರ ಯಾರ ಕಾಲದಲ್ಲಿ ಆರಂಭವಾಯಿತು ಎಂಬುದರ ಬಗ್ಗೆ ಸಿಬಿಐ ತನಿಖೆ ನಡೆಯಲಿ’ ಎಂದು ಹೇಳಿದರು.

‌ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ:ಪಿಎಸ್ಐ ನೇಮಕಾತಿ ವಿಚಾರದಲ್ಲಿಕಾಂಗ್ರೆಸ್‌ನವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು. ತನಿಖೆ ನಡೆಸಿ 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಹಾಗಿದ್ದರೂ ಏನೂ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ. ಕಾಂಗ್ರೆಸ್‌ನವರು ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬರಲಿ. ಗೃಹ ಸಚಿವರು ಭಾಗಿಯಾಗಿದ್ದಾರೆ ಎಂದಾದರೆ ಅವರು ಒಂದು ನಿಮಿಷವೂ ಅಧಿಕಾರದಲ್ಲಿ ಇರುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ನಾರಾಯಣಸ್ವಾಮಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.