ADVERTISEMENT

ಚಾಮರಾಜನಗರ| ಚಿಕಿತ್ಸೆಗೆ ಬಂದ ರೋಗಿಗೆ ಅವಧಿ ಮೀರಿದ ಗ್ಲುಕೋಸ್: ಮತ್ತಷ್ಟು ಅಸ್ವಸ್ಥ

ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 2:06 IST
Last Updated 29 ಏಪ್ರಿಲ್ 2022, 2:06 IST
ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿರುವ ರೋಗಿಯ ಸಂಬಂಧಿಗಳು
ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿರುವ ರೋಗಿಯ ಸಂಬಂಧಿಗಳು    

ಚಾಮರಾಜನಗರ: ತಾಲ್ಲೂಕಿನ ಉಡಿಗಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬಂದ ವ್ಯಕ್ತಿಯೊಬ್ಬರಿಗೆ ಅವಧಿ ಮೀರಿದ ಗ್ಲುಕೋಸ್‌ ನೀಡಿದ್ದರಿಂದ ಅವರು ಅಸ್ವಸ್ಥರಾದ ಘಟನೆ ಗುರುವಾರ ನಡೆದಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅವಧಿ ಮೀರಿದ ಗ್ಲುಕೋಸ್‌ ಮಾತ್ರವಲ್ಲದೇ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿವೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಅವಧಿ ಮೀರಿದ ಔಷಧಿಗಳನ್ನು ನೀಡುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಗ್ರಾಮಾಂತರ ಠಾಣೆಯ ಪೊಲೀಸರು ವೈದ್ಯಾಧಿಕಾರಿ ಡಾ.ಉಮಾರಾಣಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರು ತಿಳಿಸಿದ್ದಾರೆ.

ಗ್ರಾಮದ ಮಹದೇವಯ್ಯ ಅವರು (55) ವಾಂತಿ ಮತ್ತು ಸುಸ್ತು ಎಂಬ ಕಾರಣಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯಾಧಿಕಾರಿ ಗ್ಲುಕೋಸ್‌ ನೀಡುವಂತೆ ಸೂಚಿಸಿದ್ದರು. ಅದರಂತೆ ಗ್ಲುಕೋಸ್‌ ನೀಡುತ್ತಿದ್ದಾಗ ಮಹದೇವಯ್ಯ ಅವರ ಸಂಬಂಧಿಕರು ಗ್ಲುಕೋಸ್‌ ಬಾಟಲಿಯನ್ನು ಪರಿಶೀಲಿಸಿದಾಗ ಅದು ಅವಧಿ ಮೀರಿರುವುದು ಕಂಡು ಬಂತು.

‘ತಕ್ಷಣಕ್ಕೆ ಗಮನಕ್ಕೆ ತಂದಾಗ, ಕ್ಷಮಿಸಿ ಎಂದು ಹೇಳಿದ ವೈದ್ಯರು, ಗ್ಲುಕೋಸ್‌ ಬಾಟಲಿ ತೆಗೆದರು. ಅಷ್ಟೊತ್ತಿಗಾಗಲೇ ಮುಕ್ಕಾಲು ಭಾಗ ಗ್ಲುಕೋಸ್‌ ದೇಹ ಸೇರಿತ್ತು. ಹೊಟ್ಟೆ ಉರಿ, ಜಾಸ್ತಿ ಬೆವರಲು ಆರಂಭವಾಯಿತು. ನಂತರ ಒಂದು ಚುಚ್ಚುಮದ್ದು ನೀಡಿದರು’ ಎಂದು ಮಹದೇವಯ್ಯ ಅವರು ಹೇಳಿದ್ದಾರೆ.ಈಗ ಅವರು ಯಡಪುರದ ಸಿಮ್ಸ್‌ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮಹದೇವಯ್ಯ ಅವರನ್ನು ನಾವು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ. ಆಸ್ಪ‍ತ್ರೆಗೆ ಬರುವಾಗ ರಕ್ತದೊತ್ತಡ ಹೆಚ್ಚಾಗಿತ್ತು. ಚಿಕಿತ್ಸೆಯ ನಂತರ ಕಡಿಮೆಯಾಗಿದೆ’ ಎಂದು ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆಯೇ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ವೈದ್ಯಾಧಿಕಾರಿ, ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮಾರಾಣಿ ಅವರು ರೋಗಿಗಳಿಗೆ ಅವಧಿ ಮೀರಿದ ಮಾತ್ರೆಗಳು ಮತ್ತು ಗ್ಲೂಕೋಸ್ ನೀಡುತ್ತಿರುವುದು ಕಂಡುಬಂದಿದೆ. ನಿರ್ಲಕ್ಷ್ಯ ತೋರಿದ ವೈದ್ಯಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಗ್ರಾಮ ಘಟಕದ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಗುರುಪ್ರಸಾದ್‌, ಹಾಗೂ ನಮ್ಮ ಎಲ್ಲ ಸಂಘದ ಪದಾಧಿಕಾರಿಗಳಾದ ಮಾದೇವಸ್ವಾಮಿ, ಅಭಿಷೇಕ್, ಗುರುಪ್ರಸಾದ್, ಗುರುಮಲ್ಲಪ್ಪ, ರೇವಣ್ಣ, ಮಹದೇವಸ್ವಾಮಿ ಮಹದೇವಪ್ರಸಾದ್, ಮಂಜು, ಬಾಬು, ಸಿದ್ದೇಶ್‌, ಮಹದೇವಸ್ವಾಮಿ, ರೇವಣ್ಣ, ಬಸವರಾಜ್‌, ಲೋಕೇಶ್‌ ಗ್ರಾಮಸ್ಥರು ಇತರರು ಇದ್ದರು.

ಚಾಮರಾಜನಗರ: ತಾಲ್ಲೂಕಿನ ಉಡಿಗಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬಂದ ವ್ಯಕ್ತಿಯೊಬ್ಬರಿಗೆ ಅವಧಿ ಮೀರಿದ ಗ್ಲುಕೋಸ್‌ ನೀಡಿದ್ದರಿಂದ ಅವರು ಅಸ್ವಸ್ಥರಾದ ಘಟನೆ ಗುರುವಾರ ನಡೆದಿದೆ.

ಜಿಲ್ಲಾಧಿಕಾರಿಗೆ ವರದಿ ನೀಡುವೆ: ಡಿಎಚ್‌ಒ

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಚಾಮರಾಜನಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಬಿ.ಪುಟ್ಟಸ್ವಾಮಿ, ಸಬ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರು, ‘ವಿಷಯ ತಿಳಿದ ತಕ್ಷಣಕ್ಕೆ ಉಡಿಗಾಲಕ್ಕೆ ಬಂದಿದ್ದೇನೆ. ಅವಧಿ ಮೀರಿದ ಔಷಧಿಗಳು ಕಂಡು ಬಂದಿವೆ. ಈಗಾಗಲೇ ಪೊಲೀಸರು ವೈದ್ಯಾಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ನಾನು ಜಿಲ್ಲಾಧಿಕಾರಿ ಅವರಿಗೆ ವರದಿ ನೀಡುತ್ತೇನೆ. ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

ಡಿಎವೈಎಸ್‌ಪಿ ಪ್ರಿಯದರ್ಶಿನಿ ಸಾಣೀಕೊಪ್ಪ ಹಾಗೂ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಅವರಿಗೆ ಕರೆ ಮಾಡಿದ್ದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.